Randeep Surjewala | ರಾಜ್ಯ ನಾಯಕರೊಂದಿಗೆ ಉಸ್ತುವಾರಿ ರಣದೀಪ್ ಸಿಂಗ್​ ಸುರ್ಜೇವಾಲಾ 
ದೇಶ

ನಾಯಕತ್ವ ಬದಲಾವಣೆ ಚರ್ಚೆ; ಬಹಿರಂಗ ಹೇಳಿಕೆ ನೀಡುತ್ತಿರುವ ಕಾಂಗ್ರೆಸ್ ನಾಯಕರಿಗೆ ಸುರ್ಜೇವಾಲಾ ಖಡಕ್ ವಾರ್ನಿಂಗ್ | Randeep Surjewala

ಬೆಂಗಳೂರು: ನಾಯಕತ್ವ ಬದಲಾವಣೆ ಕೂಗು ರಾಜ್ಯದಲ್ಲಿ ದೊಡ್ಡ ಮಟ್ಟದ ಚರ್ಚೆಯಾಗಿ ರೂಪಾಂತರಗೊಂಡಿದ್ದು, ಸಿಎಂ ಬಣದವರೆನ್ನಲಾದ ಕೆಲ ನಾಯಕರ ಮೀಟಿಂಗ್, ಇತ್ತ ಡಿಸಿಎಂ ಡಿಕೆ ಶಿವಕುಮಾರ ಬಣದವರೆನ್ನಲಾದ ಕೆಲ ಶಾಸಕರ ದೆಹಲಿ ಪರೇಡ್​ ಮತ್ತು ಕೆಲವರ ಬಹಿರಂಗ ಹೇಳಿಕೆಗಳು ಕೇಂದ್ರ ನಾಯಕರ ಕೆಂಗಣ್ಣಿಗೆ ಗುರಿಯಾಗಿದೆ.
ಇದೇ ವಿಷಯವಾಗಿ ತಮ್ಮ ಎಕ್ಸ್​ ಖಾತೆಯಲ್ಲಿ ಪೋಸ್ಟ್​ ಹಂಚಿಕೊಳ್ಳುವ ಮೂಲಕ ಖಡಕ್​ ವಾರ್ನಿಂಗ್​ ನೀಡಿರುವ ರಾಜ್ಯ ಕಾಂಗ್ರೆಸ್​ ಉಸ್ತುವಾರಿ ರಣದೀಪ್ ಸಿಂಗ್​ ಸುರ್ಜೇವಾಲಾ, ಸೋತಿರುವ ಮತ್ತು ಬಣಗಳಿಂದ ತುಂಬಿರುವ ವಿರೋಧ ಪಕ್ಷ ಬಿಜೆಪಿಯ ರಾಜ್ಯ ಘಟಕವು, ಕೆಲವು ಮಾಧ್ಯಮಗಳೊಂದಿಗೆ ಶಾಮೀಲಾಗಿ ಕರ್ನಾಟಕ ಕಾಂಗ್ರೆಸ್ ಸರ್ಕಾರವನ್ನು ದುರ್ಬಲಗೊಳಿಸಲು ದುರುದ್ದೇಶಪೂರಿತ ಪ್ರಚಾರವನ್ನು ನಡೆಸುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
 ರಾಜ್ಯದ ಸಮಗ್ರ ಅಭಿವೃದ್ಧಿ ಮತ್ತು ಸಾಮಾಜಿಕ ನ್ಯಾಯದ ಮಾದರಿಯಾಗಿರುವ ಕಾಂಗ್ರೆಸ್ ಸರ್ಕಾರದ ಅದ್ಭುತ ಸಾಧನೆಗಳನ್ನು ದುರ್ಬಲಗೊಳಿಸುವುದು ಇವರೆಲ್ಲರ ಏಕೈಕ ಉದ್ದೇಶವಾಗಿದ್ದು, ದೆಹಲಿಗೆ ತೆರಳಿರುವ ಕಾಂಗ್ರೆಸ್ ಶಾಸಕರಿಗೆ ನಾಯಕತ್ವದ ಬದಲಾವಣೆ ಕುರಿತಾಗಿ ಅನಗತ್ಯ ಹೇಳಿಕೆಗಳನ್ನು ನೀಡದಂತೆ ಸುರ್ಜೆವಾಲಾ ಖಡಕ್​ ಎಚ್ಚರಿಕೆ ನೀಡಿದ್ದಾರೆ.
ಯಾರು ಕೂಡ ಸಾರ್ವಜನಿಕ ಹೇಳಿಕೆಗಳನ್ನು ನೀಡಕೂಡದು, ಸ್ವಾರ್ಥ ಹಿತಾಸಕ್ತಿಗಳ ಕಾರ್ಯಸೂಚಿಗೆ ಬಲಿಯಾಗದಂತೆ ಸುರ್ಜೆವಾಲಾ ಎಚ್ಚರಿಕೆ ನೀಡಿದ್ದಾರೆ. ಈ ರೀತಿಯ ಬಹಿರಂಗ ಹೇಳಿಕೆಗಳಿಂದ ಪಕ್ಷದಲ್ಲಿ ಗೊಂದಲ ಉಂಟಾಗಲಿದ್ದು, ಪಕ್ಷದ ನಾಯಕರ ಅಭಿಪ್ರಾಯವನ್ನು ಹೈಕಮಾಂಡ್ ಗಮನಿಸಿದೆ ಎಂದಿದ್ದಾರೆ(ಏಜೆನ್ಸೀಸ್​).