Husband Divided Between Wives ಸಾಂದರ್ಭಿಕ ಚಿತ್ರ
- ರಾಮ್‌ಪುರ ಜಿಲ್ಲೆಯ ತಾಂಡಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅತ್ಯಂತ ವಿಚಿತ್ರ ಘಟನೆಯೊಂದು ಬೆಳಕಿಗೆ ಬಂದಿದೆ
- ಇಬ್ಬರು ಪತ್ನಿಯರನ್ನು ಹೊಂದಿರುವ ವ್ಯಕ್ತಿಯನ್ನು ವಾರದ ತಲಾ ಮೂರು ದಿನಗಳಂತೆ ಹಂಚಿಕೆ ಮಾಡಿದೆ
- ಎರಡನೇ ಮದುವೆಯ ನಂತರ ನಜಾಖತ್ ಸಂಪೂರ್ಣವಾಗಿ ಮೊದಲ ಪತ್ನಿಯನ್ನು ನಿರ್ಲಕ್ಷಿಸಲು ಪ್ರಾರಂಭಿಸಿದನು
ಉತ್ತರ ಪ್ರದೇಶ: ರಾಮ್‌ಪುರ ಜಿಲ್ಲೆಯ ತಾಂಡಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅತ್ಯಂತ ವಿಚಿತ್ರ ಹಾಗೂ ಅಪರೂಪದ ಘಟನೆಯೊಂದು ಬೆಳಕಿಗೆ ಬಂದಿದೆ. ಕುಟುಂಬದ ಆಂತರಿಕ ಕಲಹವನ್ನು ಬಗೆಹರಿಸಲು ಸಭೆ ಸೇರಿದ ಪಂಚಾಯಿತಿಯೊಂದು, ಇಬ್ಬರು ಪತ್ನಿಯರನ್ನು ಹೊಂದಿರುವ ವ್ಯಕ್ತಿಯನ್ನು ವಾರದ ತಲಾ ಮೂರು ದಿನಗಳಂತೆ ಹಂಚಿಕೆ (Husband Divided Between Wives) ಮಾಡಿ ಆದೇಶ ಹೊರಡಿಸುವ ಮೂಲಕ ವಿನೂತನ ಮಧ್ಯಸ್ಥಿಕೆ ವಹಿಸಿದೆ.
ದಢಿಯಾಲ್ ನಗರ ಪಂಚಾಯಿತಿ ನಿವಾಸಿ ನಜಾಖತ್ ಎಂಬಾತನಿಗೆ 14 ವರ್ಷಗಳ ಹಿಂದೆ ಉತ್ತರಾಖಂಡ ಮೂಲದ ಆಶ್ರಾ ಎಂಬವರ ಜೊತೆ ವಿವಾಹವಾಗಿತ್ತು. ಈ ದಂಪತಿಗೆ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಆದರೆ, ಕುಟುಂಬಕ್ಕೆ ಗಂಡು ಮಗುವಿನ ನಿರೀಕ್ಷೆಯಲ್ಲಿದ್ದ ನಜಾಖತ್, ಸುಮಾರು ನಾಲ್ಕು ವರ್ಷಗಳ ಹಿಂದೆ ನೇಹಾ ಎಂಬಾಕೆಯನ್ನು ಎರಡನೇ ಮದುವೆಯಾಗಿದ್ದನು. ವಿಶೇಷವೆಂದರೆ, ಎರಡನೇ ಪತ್ನಿ ನೇಹಾಗೂ ಸಹ ಇಬ್ಬರು ಹೆಣ್ಣುಮಕ್ಕಳೇ ಜನಿಸಿದ್ದರು.
ಎರಡನೇ ಮದುವೆಯ ನಂತರ ನಜಾಖತ್ ಸಂಪೂರ್ಣವಾಗಿ ಮೊದಲ ಪತ್ನಿಯನ್ನು ನಿರ್ಲಕ್ಷಿಸಲು ಪ್ರಾರಂಭಿಸಿದನು. ಆತ ಎರಡನೇ ಪತ್ನಿ ನೇಹಾ ಜೊತೆಯೇ ವಾಸಿಸುತ್ತಿದ್ದು, ಮೊದಲನೇ ಪತ್ನಿ ಆಶ್ರಾ ಮತ್ತು ಆಕೆಯ ಇಬ್ಬರು ಹೆಣ್ಣುಮಕ್ಕಳ ದಿನನಿತ್ಯದ ನಿರ್ವಹಣೆಗೆ ಹಾಗೂ ಜೀವನೋಪಾಯಕ್ಕೆ ಯಾವುದೇ ಹಣವನ್ನು ನೀಡುತ್ತಿರಲಿಲ್ಲ. ಪತಿಯ ಈ ನಡವಳಿಕೆಯಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿದ ಆಶ್ರಾ, ಕೊನೆಗೆ ಸೋಮವಾರ ಸ್ಥಳೀಯ ಪೊಲೀಸ್ ಚೌಕಿಗೆ ತೆರಳಿ ಜೀವನಾಂಶ ಕೋರಿ ದೂರು ದಾಖಲಿಸಿದ್ದರು.
ಪೊಲೀಸರು ಪ್ರಕರಣದ ಕುರಿತು ಪ್ರಾಥಮಿಕ ಮಾಹಿತಿ ಕಲೆಹಾಕಲು ಶುರುಮಾಡುತ್ತಿದ್ದಂತೆಯೇ, ಗ್ರಾಮಸ್ಥರು ಹಾಗೂ ಪಂಚಾಯಿತಿ ಹಿರಿಯರು ಮುತುವರ್ಜಿ ವಹಿಸಿ ಗ್ರಾಮದಲ್ಲೇ ಸಭೆ ಕರೆದರು. ಸುಮಾರು ನಾಲ್ಕು ಗಂಟೆಗಳ ಕಾಲ ಸುದೀರ್ಘವಾಗಿ ನಡೆದ ಪಂಚಾಯಿತಿ ಚರ್ಚೆಯ ನಂತರ ಹಿರಿಯರು ಎಲ್ಲರಿಗೂ ಸಮ್ಮತವಾಗುವಂತಹ ತೀರ್ಪನ್ನು ಪ್ರಕಟಿಸಿದರು.
ಪಂಚಾಯಿತಿ ಕೊಟ್ಟ ತೀರ್ಪುಗಳೇನು?
ನಜಾಖತ್ ವಾರದ ಮೂರು ದಿನ ಮೊದಲನೇ ಪತ್ನಿ ಆಶ್ರಾ ಜೊತೆ ಹಾಗೂ ಇನ್ನುಳಿದ ಮೂರು ದಿನ ಎರಡನೇ ಪತ್ನಿ ನೇಹಾ ಜೊತೆ ಕಡ್ಡಾಯವಾಗಿ ವಾಸಿಸಬೇಕು. ವಾರದ ಕೊನೆಯ ದಿನ ಅಂದರೆ ವಾರಾಂತ್ಯದ ಒಂದು ದಿನವನ್ನು ಸಂಪೂರ್ಣವಾಗಿ ಪತಿಯ ಇಷ್ಟಕ್ಕೆ ಬಿಡಲಾಗಿದ್ದು, ಆತ ಯಾರ ಜೊತೆ ಬೇಕಾದರೂ ಸಮಯ ಕಳೆಯಬಹುದು. ಮೊದಲನೇ ಪತ್ನಿಯ ಕುಟುಂಬದ ಪಾಲನೆಗಾಗಿ ನಜಾಖತ್ ಪ್ರತಿ ತಿಂಗಳು ಬೇಕಾಗುವ ರೇಪನ್ ಸಾಮಗ್ರಿಗಳ ಜೊತೆಗೆ 2,000 ನಗದು ಹಣವನ್ನು ಕಡ್ಡಾಯವಾಗಿ ನೀಡಬೇಕು ಎಂದು ಹೇಳಿದ್ದಾರೆ.
ಪಂಚಾಯಿತಿ ನೀಡಿದ ಈ ತೀರ್ಪಿಗೆ ನಜಾಖತ್ ಹಾಗೂ ಆತನ ಇಬ್ಬರೂ ಪತ್ನಿಯರು ಒಪ್ಪಿಗೆ ಸೂಚಿಸಿದ್ದಾರೆ. ಪಂಚಾಯಿತಿಯಲ್ಲೇ ಸಮಸ್ಯೆ ಶಾಂತಿಯುತವಾಗಿ ಬಗೆಹರಿದ ಹಿನ್ನೆಲೆಯಲ್ಲಿ ಮೊದಲ ಪತ್ನಿ ಆಶ್ರಾ ಪೊಲೀಸರಿಗೆ ನೀಡಿದ್ದ ದೂರನ್ನು ವಾಪಸ್ ಪಡೆದಿದ್ದಾರೆ. ಪ್ರಸ್ತುತ ಇಬ್ಬರೂ ಪರಸ್ಪರ ಸಮ್ಮತಿಯಿಂದ ರಾಜಿಯಾಗಿದ್ದಾರೆ ಎಂದು ಸ್ಥಳೀಯ ಪೊಲೀಸರು ಸ್ಪಷ್ಟಪಡಿಸಿದ್ದಾರೆ (ಏಜೆನ್ಸೀಸ್).