ಬಿಜ್ನೋರ್ (ಉತ್ತರ ಪ್ರದೇಶ): ಅಯೋಧ್ಯೆಯ ರಾಮ ಮಂದಿರ ದೇಣಿಗೆ ಹಣ ಕಳ್ಳತನ ಪ್ರಕರಣಕ್ಕೆ(RamMandir Donation Case) ಸಂಬಂಧಪಟ್ಟಂತೆ AIMIM ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್(ಸಿಎಂ) ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಉತ್ತರ ಪ್ರದೇಶದ ಬಿಜ್ನೋರ್‌ನಲ್ಲಿ ಸೋಮವಾರ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, "ರಾಮ ಮಂದಿರ ಟ್ರಸ್ಟ್‌ನಲ್ಲಿ ಒಬ್ಬ ಮುಸ್ಲಿಂ ಇದ್ದಿದ್ದರೆ, ಈಗಾಗಲೇ ಎನ್‌ಕೌಂಟರ್ ಮಾಡಿ, ಮನೆ ಮೇಲೆ ಬುಲ್ಡೋಜರ್ ಹರಿಸಲಾಗುತ್ತಿತ್ತು" ಎಂದು ವ್ಯಂಗ್ಯವಾಡಿದರು. ಇದೀಗ ಓವೈಸಿ ಅವರ ಈ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.
'ಆರೋಪಿಗಳು ಮಜಾ ಮಾಡುತ್ತಿದ್ದಾರೆ'
ಪ್ರಕರಣದ ತನಿಖೆಯಲ್ಲಿ ವಿಳಂಬವಾಗುತ್ತಿದೆ ಎಂದು ಆರೋಪಿಸಿದ ಓವೈಸಿ, ಪೊಲೀಸರು ಪ್ರಮುಖ ಆರೋಪಿಗಳನ್ನು ಕಸ್ಟಡಿಗೆ ಪಡೆಯಲು ಕೂಡ ಮುಂದಾಗಿಲ್ಲ. "ಟ್ರಸ್ಟ್‌ನಲ್ಲಿ ಒಬ್ಬ ಮುಸ್ಲಿಂ ಇದ್ದಿದ್ದರೆ, ಎನ್‌ಕೌಂಟರ್ ಮಾಡಿ, ಮನೆ ಧ್ವಂಸಗೊಳಿಸಿ ಪ್ರಕರಣ ಮುಗಿಸಿಬಿಡುತ್ತಿದ್ದರು. ಆದರೆ ಈಗ ಆರೋಪಿಗಳು ಆರಾಮವಾಗಿ ಇದ್ದಾರೆ" ಎಂದು ಕಿಡಿಕಾರಿದರು. ಕೆಲವು ದಿನಗಳ ಹಿಂದೆಯೂ ಇದೇ ವಿಚಾರವಾಗಿ ಮಾತನಾಡಿದ್ದ ಅವರು, "ಮುಸ್ಲಿಮರ ವಿರುದ್ಧ ನಡೆಯುವಂತೆ ಈ ಪ್ರಕರಣದ ಆರೋಪಿಗಳ ಮೇಲೂ ಗುಂಡು ಹಾರಿಸುತ್ತಾರೆಯೇ? ಬುಲ್ಡೋಜರ್ ನಡೆಸುತ್ತಾರೆಯೇ?" ಎಂದು ಪ್ರಶ್ನಿಸಿದ್ದರು.
ಪ್ರಕರಣದಲ್ಲಿ ಇದುವರೆಗೆ ಏನಾಗಿದೆ?
ರಾಮ ಮಂದಿರದ ದೇಣಿಗೆ ಹಣ ಕಳ್ಳತನ ಪ್ರಕರಣ ದೇಶಾದ್ಯಂತ ಭಾರಿ ಚರ್ಚೆಗೆ ಕಾರಣವಾಗಿದೆ. ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಮೊದಲಿಗೆ ಈ ಬಗ್ಗೆ ಪ್ರಶ್ನೆ ಎತ್ತಿದ ಬಳಿಕ ಪ್ರಕರಣ ರಾಜಕೀಯ ಸ್ವರೂಪ ಪಡೆದುಕೊಂಡಿತು. ಉತ್ತರ ಪ್ರದೇಶ ಸರ್ಕಾರ ವಿಶೇಷ ತನಿಖಾ ತಂಡ (SIT) ರಚಿಸಿ ತನಿಖೆ ಆರಂಭಿದ್ದು, ಆರೋಪಿಗಳ ಮನೆಗಳಲ್ಲಿ ಶೋಧ ನಡೆಸಲಾಗಿದೆ. ಇಲ್ಲಿ ಲೆಕ್ಕಕ್ಕೆ ಸಿಗದ ಹಣವನ್ನು ವಶಪಡಿಸಿಕೊಳ್ಳಲಾಗಿದೆ. ದೇವಸ್ಥಾನದ ಸಿಬ್ಬಂದಿ ಮತ್ತು ಬ್ಯಾಂಕ್ ಅಧಿಕಾರಿಗಳನ್ನೂ ವಿಚಾರಣೆ ನಡೆಸಲಾಗಿದೆ.
ಟ್ರಸ್ಟ್ ಅಧಿಕಾರಿಗಳ ರಾಜೀನಾಮೆ
ಪ್ರಕರಣ ಬೆಳಕಿಗೆ ಬಂದ ನಂತರ ನೈತಿಕ ಹೊಣೆ ಹೊತ್ತು ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ರಾಜೀನಾಮೆ ನೀಡಿದ್ದಾರೆ. ಟ್ರಸ್ಟಿ ಅನಿಲ್ ಮಿಶ್ರಾ ಕೂಡ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ಜೂನ್ 25ರಂದು ಟ್ರಸ್ಟ್ ಸದಸ್ಯ ಕೃಷ್ಣ ಮೋಹನ್ ನೀಡಿದ ದೂರಿನ ಆಧಾರದ ಮೇಲೆ ಮೊದಲ ಎಫ್‌ಐಆರ್ ದಾಖಲಾಗಿತ್ತು. ಎಫ್‌ಐಆರ್‌ನಲ್ಲಿ ಅವಿನಾಶ್ ಶುಕ್ಲಾ, ಅನುಕಲ್ಪ್ ಮಿಶ್ರಾ, ಲವ್‌ಕುಶ್ ಮಿಶ್ರಾ, ಮನೀಶ್ ಕುಮಾರ್ ಯಾದವ್, ಕರುಣೇಶ್ ಪಾಂಡೆ, ರಾಮಾಶಂಕರ್ ಮಿಶ್ರಾ, ಸುಭಾಷ್ ಶ್ರೀವಾಸ್ತವ ಹಾಗೂ ರಾಮ ಶಂಕರ್ ಯಾದವ್ (ಟಿನ್ನು) ಸೇರಿದಂತೆ ಎಂಟು ಮಂದಿಯ ಹೆಸರು ಉಲ್ಲೇಖಿಸಲಾಗಿದೆ. ಇವರೆಲ್ಲರೂ ರಾಮ ಮಂದಿರದ ದೇಣಿಗೆ ಹಣ ಎಣಿಕೆ ಸಿಬ್ಬಂದಿಯಾಗಿದ್ದು, ಬಂಧಿಸಲಾಗಿದೆ. ಇನ್ನೂ ಕೆಲ ಅಪರಿಚಿತ ವ್ಯಕ್ತಿಗಳ ವಿರುದ್ಧವೂ ಪ್ರಕರಣ ದಾಖಲಾಗಿದೆ.
₹7 ಕೋಟಿ ಹಣ ನಾಪತ್ತೆ ಶಂಕೆ
ತನಿಖೆಯ ಪ್ರಕಾರ, ದೇವಸ್ಥಾನದ ಲೆಕ್ಕದಲ್ಲಿ ಸುಮಾರು ₹7ರಿಂದ ₹7.5 ಕೋಟಿ ನಗದು ಕಾಣೆಯಾಗಿರುವ ಶಂಕೆ ವ್ಯಕ್ತವಾಗಿದೆ. ಇದುವರೆಗೆ ಆರೋಪಿಗಳಿಂದ ಸುಮಾರು ₹80 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ. ಜೂನ್ 26ರಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಈ ಪ್ರಕರಣದಲ್ಲಿ ಸಾರ್ವಜನಿಕರ ವಿಶ್ವಾಸಕ್ಕೆ ಧಕ್ಕೆ ತರುವವರ ವಿರುದ್ಧ ಶೂನ್ಯ ಸಹಿಷ್ಣುತೆ (Zero Tolerance) ನೀತಿ ಅನುಸರಿಸಲಾಗುವುದು ಎಂದು ಹೇಳಿದ್ದರು,(ಏಜೆನ್ಸೀಸ್).