ರಾಮಮಂದಿರ ಚಂದಾ ಹಗರಣ: ಮಸಾಲೆ ಡಬ್ಬಿಯ ಹಣಕ್ಕೂ ದ್ರೋಹ ಪ್ರಿಯಾಂಕಾ! ಎಸ್‌ಐಟಿ ವರದಿ ಬೆನ್ನಲ್ಲೇ ಒಗ್ಗಟ್ಟಾದ ವಿಪಕ್ಷಗಳು; ಬಿಜೆಪಿ ತಿರುಗೇಟು!
ಅಯೋಧ್ಯೆ: ಅಯೋಧ್ಯೆಯ ಶ್ರೀರಾಮ ಮಂದಿರದ ಕಾಣಿಕೆ ಹಣದ ದುರುಪಯೋಗ ಮತ್ತು ಕಳ್ಳತನದ(Ram Temple donation row) ಆರೋಪ ಶನಿವಾರ ದೇಶಾದ್ಯಂತ ಹೊಸ ರಾಜಕೀಯ ಬಿರುಗಾಳಿ ಎಬ್ಬಿಸಿದೆ. ಮಂದಿರದ ಚಂದಾ ಹಣ ನಿರ್ವಹಣೆಯಲ್ಲಿ ಭಾರಿ ಲೋಪಗಳು ನಡೆದಿರುವುದನ್ನು ವಿಶೇಷ ತನಿಖಾ ದಳ ತನ್ನ ಪ್ರಾಥಮಿಕ ವರದಿಯಲ್ಲಿ ಬಯಲಿಗೆಳೆದ ಬೆನ್ನಲ್ಲೇ, ವಿರೋಧ ಪಕ್ಷಗಳು ಬಿಜೆಪಿ, ಆರ್‌ಎಸ್‌ಎಸ್ ಮತ್ತು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ವಿರುದ್ಧ ವಾಗ್ದಾಳಿಯನ್ನು ತೀವ್ರಗೊಳಿಸಿವೆ. ಇದಕ್ಕೆ ತಿರುಗೇಟು ನೀಡಿರುವ ಬಿಜೆಪಿ, ವಿಪಕ್ಷಗಳು ಕೇವಲ ಸುಳ್ಳು ಮತ್ತು ವಿಷವನ್ನು ಹರಡುತ್ತಿವೆ ಎಂದು ಆರೋಪಿಸಿದೆ.
ಇದು ಭಕ್ತರ ಶ್ರದ್ಧೆಗೆ ಮಾಡಿದ ದ್ರೋಹ: ಪ್ರಿಯಾಂಕಾ ಗಾಂಧಿ ಆಕ್ರೋಶ
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಈ ಹಗರಣವನ್ನು ದುರಂತ ಮತ್ತು ನಾಚಿಕೆಗೇಡು ಎಂದು ಬಣ್ಣಿಸಿದ್ದಾರೆ. ದೇಶದ ಮೂಲೆ ಮೂಲೆಗಳಿಂದ ಸಾಮಾನ್ಯ ಜನರು, ಬಡವರು ಮತ್ತು ತಾಯಂದಿರು ತಮ್ಮ ಉಳಿತಾಯದ ಹಣದಿಂದ ಮಂದಿರಕ್ಕೆ ಕಾಣಿಕೆ ನೀಡಿದ್ದಾರೆ. ಕಾರ್ಪೊರೇಟ್ ಸಂಸ್ಥೆಗಳು ಮಾತ್ರವಲ್ಲ, ಸಾಮಾನ್ಯ ಸಾರ್ವಜನಿಕರು ಶ್ರದ್ಧೆಯಿಂದ ನೀಡಿದ ಹಣವಿದು. ಇದನ್ನು ರಕ್ಷಿಸಬೇಕಾದ ಜವಾಬ್ದಾರಿ ಟ್ರಸ್ಟ್ ಮತ್ತು ಸರ್ಕಾರದ ಮೇಲಿತ್ತು ಎಂದು ಹೇಳಿದ್ದಾರೆ.
ಕಾಂಗ್ರೆಸ್ ನಾಯಕ ಪವನ್ ಖೇರಾ, ಅಮ್ಮಂದಿರು ಮಸಾಲೆ ಡಬ್ಬಿಗಳಲ್ಲಿ ಇಟ್ಟಿದ್ದ ಹಣ, ಮಕ್ಕಳ ಪಿಗ್ಗಿ ಬ್ಯಾಂಕ್‌ನ ಕಾಸು ಇವೆಲ್ಲವೂ ಮಂದಿರಕ್ಕೆ ಸೇರಿವೆ. ಭಕ್ತರ ನಂಬಿಕೆಗೆ ಆಗಿರುವ ಈ ದ್ರೋಹಕ್ಕೆ ಸರ್ಕಾರ ಉತ್ತರಿಸಲೇಬೇಕು ಎಂದು ಒತ್ತಾಯಿಸಿದ್ದಾರೆ. ಅಲ್ಲದೆ, ಹಿರಿಯ ನಾಯಕ ದಿಗಿವಿಜಯ್ ಸಿಂಗ್ ಅವರು ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಮತ್ತು ಅನಿಲ್ ಮಿಶ್ರಾ ಅವರನ್ನು ತಕ್ಷಣವೇ ಬಂಧಿಸಬೇಕು ಎಂದು ಆಗ್ರಹಿಸಿದ್ದು, ಕಾಂಗ್ರೆಸ್ ಈ ವಿಷಯವನ್ನು ಹಳ್ಳಿಹಳ್ಳಿಗೂ ಕೊಂಡೊಯ್ಯಲಿದೆ ಎಂದು ಎಚ್ಚರಿಸಿದ್ದಾರೆ. ಶಿವಸೇನಾ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ, ನಮಗೆ ಬಿಜೆಪಿಯಿಂದ ಮುಕ್ತವಾದ ರಾಮ ಬೇಕು. ಮಂದಿರಗಳನ್ನು ಲೂಟಿ ಮಾಡುವ ಹಿಂದುತ್ವವನ್ನು ನಾವು ಒಪ್ಪುವುದಿಲ್ಲ ಎಂದು ಹರಿಹಾಯ್ದಿದ್ದಾರೆ.
ಸುರಕ್ಷತಾ ನಿಯಮಗಳ ಗಾಳಿಗೆ ತೂರಿದ ಕಳ್ಳರು: ಎಸ್‌ಐಟಿ ವರದಿ
ವಿಶೇಷ ತನಿಖಾ ದಳದ (SIT) ಪ್ರಾಥಮಿಕ ವರದಿಯ ಪ್ರಕಾರ, ಕಾಣಿಕೆ ಎಣಿಕೆ ಕೇಂದ್ರದಲ್ಲಿ ಕಡ್ಡಾಯವಾಗಿ ಪಾಲಿಸಬೇಕಾಗಿದ್ದ ನಿಯಮಾವಳಿಗಳನ್ನು ಸಂಪೂರ್ಣವಾಗಿ ಗಾಳಿಗೆ ತೂರಲಾಗಿದೆ.
ಸಿಸಿಟಿವಿ ಲೋಪ: ನಿಯಮದ ಪ್ರಕಾರ ಸಿಸಿಟಿವಿ ದೃಶ್ಯಾವಳಿಗಳನ್ನು 180 ದಿನಗಳವರೆಗೆ ಸುರಕ್ಷಿತವಾಗಿಡಬೇಕಿತ್ತು. ಆದರೆ ಇಲ್ಲಿ ಕೇವಲ 45 ದಿನಗಳ ದೃಶ್ಯಗಳನ್ನು ಮಾತ್ರ ಸಂಗ್ರಹಿಸಿಡಲಾಗಿತ್ತು.
ನಿಯಮಗಳ ಉಲ್ಲಂಘನೆ: ಹಣ ಎಣಿಸುವ ಸಿಬ್ಬಂದಿಗೆ ಜೇಬುಗಳಿಲ್ಲದ ಉಡುಪು, ಭದ್ರತಾ ಸಿಬ್ಬಂದಿಯ ನಿಯೋಜನೆ ಮತ್ತು ಎಣಿಕೆ ಕೇಂದ್ರಕ್ಕೆ ಬಂದು ಹೋಗುವವರ ತಪಾಸಣೆಯನ್ನು ಮಾಡಲಾಗಿರಲಿಲ್ಲ.
ಖಾಸಗಿ ಚಾಲಕನ ಕೈಗೆ ಕೀಲಿ ಕೈ: ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರ ಮಾಜಿ ಚಾಲಕ ರಾಮಶಂಕರ್ ಯಾದವ್ ಅಲಿಯಾಸ್ ತಿನ್ನು ಯಾದವ್ ನಿಯಮ ಬಾಹಿರವಾಗಿ ಹಲವು ಕಾಣಿಕೆ ಪೆಟ್ಟಿಗೆಗಳ ಕೀಲಿ ಕೈಗಳನ್ನು ಹೊಂದಿದ್ದ ಮತ್ತು ಈತನೇ ಹಣ ಲೂಟಿ ಮಾಡಲು ಮುಖ್ಯ ಕಾರಣ ಎಂದು ವರದಿ ಹೇಳಿದೆ.
ಜೂನ್ 25 ರಂದು ಎಫ್‌ಐಆರ್ ದಾಖಲಾದ ನಂತರ 8 ಜನರನ್ನು ಬಂಧಿಸಲಾಗಿದ್ದು, ಇವರಿಂದ ಸುಮಾರು 80 ಲಕ್ಷ ರೂಪಾಯಿ ನಗದು ಮತ್ತು ವಿದೇಶಿ ಕರೆನ್ಸಿಯನ್ನು ವಶಪಡಿಸಿಕೊಳ್ಳಲಾಗಿದೆ.
2027 ರಲ್ಲಿ ಮತ್ತೆ ಕಮಲ ಅರಳಲಿದೆ: ಕೇಶವ್ ಪ್ರಸಾದ್ ಮೌರ್ಯ ತಿರುಗೇಟು
ವಿಪಕ್ಷಗಳ ಆರೋಪಗಳನ್ನು ತೀವ್ರವಾಗಿ ಖಂಡಿಸಿರುವ ಉತ್ತರ ಪ್ರದೇಶದ ಡಿಸಿಎಂ ಕೇಶವ್ ಪ್ರಸಾದ್ ಮೌರ್ಯ, ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷಕ್ಕೆ ಮೊದಲಿನಿಂದಲೂ ರಾಮಮಂದಿರದ ಮೇಲೆ ನೈಸರ್ಗಿಕವಾಗಿಯೇ ದ್ವೇಷವಿದೆ ಎಂದು ಕಿಡಿಕಾರಿದ್ದಾರೆ.
ತನಿಖೆ ಪೂರ್ಣಗೊಳ್ಳುವ ಮುನ್ನವೇ ಅಖಿಲೇಶ್ ಮತ್ತು ಅವರ ಗ್ಯಾಂಗ್ ಕಾಣಿಕೆ ಹಣದ ವಿಚಾರದಲ್ಲಿ ಅಗ್ಗದ ರಾಜಕೀಯ ಮಾಡುತ್ತಿದೆ. ನಮ್ಮ ಸರ್ಕಾರ ಈಗಾಗಲೇ ಎಸ್‌ಐಟಿ ವರದಿ ಆಧರಿಸಿ ಕಠಿಣ ಕ್ರಮ ಕೈಗೊಂಡಿದೆ, ಎಫ್‌ಐಆರ್ ದಾಖಲಿಸಿ ಎಂಟು ಜನರನ್ನು ಜೈಲಿಗೆ ಅಟ್ಟಲಾಗಿದೆ. ತಪ್ಪು ಮಾಡಿದವರು ಯಾರೇ ಆಗಿದ್ದರೂ ಶಿಕ್ಷೆ ಗ್ಯಾರಂಟಿ. ಆದರೆ ಸನಾತನ ವಿರೋಧಿ ಶಕ್ತಿಗಳು ತಮ್ಮ ವಿಕೃತ ಮನಸ್ಥಿತಿಯನ್ನು ಪ್ರದರ್ಶಿಸುತ್ತಿವೆ. ಇವರೆಲ್ಲರಿಗೂ ಜನರೇ ಪಾಠ ಕಲಿಸಲಿದ್ದಾರೆ ಮತ್ತು 2027ರ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಮತ್ತೆ ಕಮಲ ಅರಳಲಿದೆ ಎಂದು ಮೌರ್ಯ ಗುಡುಗಿದ್ದಾರೆ. ಸಿಎಂ ಯೋಗಿ ಆದಿತ್ಯನಾಥ್ ಅವರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ,(ಏಜೆನ್ಸೀಸ್).