ರಾಮಮಂದಿರ ಕಾಣಿಕೆ ಹಣ ಲೂಟಿ ಪ್ರಕರಣ: ನಿಷ್ಪಕ್ಷಪಾತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ RSS ಆಗ್ರಹ! Ram temple Donation row
- ರಾಮಮಂದಿರ ದೇಣಿಗೆ ಅಕ್ರಮ ಆರೋಪ ಬಗ್ಗೆ ಕೊನೆಗೂ ಮೌನ ಮುರಿದ ಆರ್‌ಎಸ್‌ಎಸ್
- ಹಣಕಾಸು ಹಗರಣದ ವಿರುದ್ಧ ಆರ್‌ಎಸ್‌ಎಸ್ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಬೇಸರ
- ಸಿಎಂ ಯೋಗಿ ರಚಿಸಿರುವ ಎಸ್‌ಐಟಿ (SIT) ತನಿಖೆ ಮೇಲೆ ವಿಶ್ವಾಸ ವ್ಯಕ್ತಪಡಿಸಿದ ಆರ್‌ಎಸ್‌ಎಸ್
- ರಾಮಮಂದಿರ ವಿವಾದದಲ್ಲಿ ನಿಷ್ಪಕ್ಷಪಾತ ತನಿಖೆಗೆ ಖಡಕ್ ಆಗ್ರಹಿಸಿದ ಸಂಘ ಪರಿವಾರ
ನವದೆಹಲಿ: ಅಯೋಧ್ಯೆಯ ರಾಮಮಂದಿರದ ದೇಣಿಗೆಯಲ್ಲಿ ( Ram temple Donation row ) ನಡೆದಿದೆ ಎನ್ನಲಾದ ಭ್ರಷ್ಟಾಚಾರ ಮತ್ತು ಹಣ ದುರುಪಯೋಗದ ಆರೋಪಗಳ ಕುರಿತು ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಕೊನೆಗೂ ಪ್ರತಿಕ್ರಿಯೆ ನೀಡಿದೆ. ಘಟನೆಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಆರ್‌ಎಸ್‌ಎಸ್, ಈ ಹಗರಣದ ಬಗ್ಗೆ ಯಾವುದೇ ಪಕ್ಷಪಾತವಿಲ್ಲದೆ ನಿಷ್ಪಕ್ಷಪಾತ ತನಿಖೆ ನಡೆಸಬೇಕು ಮತ್ತು ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದೆ.
ಅಯೋಧ್ಯೆಯ ರಾಮಮಂದಿರದ ದೇಣಿಗೆ ದುರುಪಯೋಗದ ಆರೋಪಗಳ ಕುರಿತು ವಿಡಿಯೋ ಹೇಳಿಕೆ ನೀಡಿರುವ ಆರ್‌ಎಸ್‌ಎಸ್ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಅವರು, ಈ ಘಟನೆಯಿಂದ ಪ್ರಭು ಶ್ರೀರಾಮನ ಕೋಟ್ಯಂತರ ಭಕ್ತರಿಗೆ ಹಾಗೂ ಇಡೀ ಸಮಾಜಕ್ಕೆ ತೀವ್ರ ನೋವುಂಟಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಭಕ್ತರ ಅಪಾರ ನಂಬಿಕೆಗೆ ಧಕ್ಕೆ ತಂದಿರುವ ಈ ಪ್ರಕರಣದಲ್ಲಿ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವುದು ಅತ್ಯಂತ ಅಗತ್ಯವಾಗಿದೆ ಎಂದು ಅವರು ಹೊಸಬಾಳೆ ಅವರು ಪ್ರತಿಪಾದಿಸಿದ್ದಾರೆ.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರ್ಕಾರವು ಈ ಹಗರಣದ ತನಿಖೆಗಾಗಿ ಈಗಾಗಲೇ ವಿಶೇಷ ತನಿಖಾ ತಂಡವನ್ನು (SIT) ರಚಿಸಿದೆ ಎಂದು ತಿಳಿಸಿರುವ ಹೊಸಬಾಳೆ, ಈ ಎಸ್‌ಐಟಿ ತಂಡವು ಯಾವುದೇ ಪ್ರಭಾವಕ್ಕೆ ಒಳಗಾಗದೆ ಅತ್ಯಂತ ನಿಷ್ಪಕ್ಷಪಾತವಾಗಿ ಮತ್ತು ತಟಸ್ಥವಾಗಿ ತನಿಖೆ ನಡೆಸಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.
ಭಕ್ತರ ಧಾರ್ಮಿಕ ಭಾವನೆಗಳು ಮತ್ತು ಶ್ರದ್ಧೆ ನಿರಂತರವಾಗಿ ಮುಂದುವರಿಯುವಂತೆ ಮಾಡಲು ಕಟ್ಟುನಿಟ್ಟಿನ ಕ್ರಮಗಳು ಹಾಗೂ ಸೂಕ್ತ ಹೆಜ್ಜೆಗಳನ್ನು ಇಡುವುದು ಇಂದಿನ ಅಗತ್ಯವಾಗಿದೆ ಎಂದು ಆರ್‌ಎಸ್‌ಎಸ್ ಬಲವಾಗಿ ನಂಬುತ್ತದೆ. ಆದ್ದರಿಂದಲೇ ಈ ಇಡೀ ಹಗರಣದ ಹಿಂದೆ ಯಾರೇ ಇದ್ದರೂ ಅವರಿಗೆ ತಕ್ಕ ಶಿಕ್ಷೆಯಾಗಬೇಕು ಎಂಬ ನಿರೀಕ್ಷೆಯನ್ನು ಸಂಘಟನೆ ಇಟ್ಟುಕೊಂಡಿದೆ ಎಂದು ಹೊಸಬಾಳೆ ಅವರು ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ ಇಡೀ ಹಿಂದೂ ಸಮಾಜಕ್ಕೆ ಪ್ರಮುಖ ಮನವಿ ಮಾಡಿರುವ ದತ್ತಾತ್ರೇಯ ಹೊಸಬಾಳೆ ಅವರು, ಎಲ್ಲಾ ಹಿಂದೂಗಳು ಈ ಸೂಕ್ಷ್ಮ ಸಮಯದಲ್ಲಿ ಸಂಯಮ ಮತ್ತು ತಾಳ್ಮೆಯಿಂದ ಇರಬೇಕು. ಹಿಂದೂ ವಿರೋಧಿ ಶಕ್ತಿಗಳು ಈ ದುರದೃಷ್ಟಕರ ಘಟನೆಯನ್ನು ದುರುಪಯೋಗಪಡಿಸಿಕೊಂಡು, ಹಿಂದೂ ಧರ್ಮದ ಬಗ್ಗೆ ತಪ್ಪು ಮಾಹಿತಿ ಅಥವಾ ವದಂತಿಗಳನ್ನು ಹರಡಲು ನಾವು ಯಾವುದೇ ಅವಕಾಶವನ್ನು ನೀಡಬಾರದು ಎಂದು ಹೊಸಬಾಳೆ ಅವರು ಕರೆ ನೀಡಿದ್ದಾರೆ.
ರಾಮಮಂದಿರ ದೇಣಿಗೆ ದುರ್ಬಳಕೆ ಪ್ರಕರಣ ಹಿನ್ನೆಲೆ?
ಅಯೋಧ್ಯೆಯ ರಾಮಮಂದಿರ ಟ್ರಸ್ಟ್‌ಗೆ ಬಂದ ಕೋಟ್ಯಂತರ ರೂಪಾಯಿ ದೇಣಿಗೆಯನ್ನು ಬ್ಯಾಂಕ್ ನಕಲಿ ದಾಖಲೆಗಳು ಮತ್ತು ಕ್ಲೋನ್ ಮಾಡಿದ ಚೆಕ್‌ಗಳ ಮೂಲಕ ದೋಚಲು ಯತ್ನಿಸಿದ ಪ್ರಕರಣವು ಬ್ಯಾಂಕ್ ಅಧಿಕಾರಿಗಳ ಸಮಯಪ್ರಜ್ಞೆಯಿಂದ ಬೆಳಕಿಗೆ ಬಂದಿದೆ. ವಂಚಕರು ರಾಮಮಂದಿರ ಟ್ರಸ್ಟ್ ಹೆಸರಿನಲ್ಲಿದ್ದ ನಕಲಿ ಚೆಕ್‌ಗಳನ್ನು ಪ್ರಸ್ತುತಪಡಿಸಿ ಲಕ್ಷಾಂತರ ರೂಪಾಯಿ ಹಣವನ್ನು ಬೇರೆ ಖಾತೆಗಳಿಗೆ ವರ್ಗಾಯಿಸಿಕೊಂಡಿದ್ದರು, ಆದರೆ ಮೂರನೇ ಬಾರಿ ದೊಡ್ಡ ಮೊತ್ತದ ಚೆಕ್ ನಗದೀಕರಣಕ್ಕೆ ಬಂದಾಗ ಬ್ಯಾಂಕ್ ಸಿಬ್ಬಂದಿಗೆ ಅನುಮಾನ ಬಂದು ಟ್ರಸ್ಟ್ ಪದಾಧಿಕಾರಿಗಳನ್ನು ವೆರಿಫಿಕೇಶನ್‌ಗಾಗಿ ಸಂಪರ್ಕಿಸಿದಾಗ ಈ ಬೃಹತ್ ವಂಚನೆ ಬಹಿರಂಗವಾಗಿದೆ. ಪ್ರಕರಣದ ಗಂಭೀರತೆ ಅರಿತ ಉತ್ತರ ಪ್ರದೇಶ ಸರ್ಕಾರವು ತಕ್ಷಣವೇ ವಿಶೇಷ ತನಿಖಾ ತಂಡವನ್ನು ರಚಿಸಿದ್ದು, ಇದುವರೆಗೆ ದೇಶದ ವಿವಿಧೆಡೆ ಕಾರ್ಯಾಚರಣೆ ನಡೆಸಿ ತಾಂತ್ರಿಕ ಸಾಕ್ಷ್ಯಗಳ ಆಧಾರದ ಮೇಲೆ ನಕಲಿ ಚೆಕ್ ಸೃಷ್ಟಿಸಿದ ಮತ್ತು ಹಣ ವರ್ಗಾವಣೆಗೆ ಸಹಕರಿಸಿದ ಪ್ರಮುಖ ಕಿಂಗ್‌ಪಿನ್ ಸೇರಿದಂತೆ ಹಲವು ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಿದೆ. ಸದ್ಯ ಎಸ್‌ಐಟಿ ತಂಡವು ದುರುಪಯೋಗವಾಗಿರುವ ಹಣದ ಜಾಲವನ್ನು ಪತ್ತೆಹಚ್ಚಲು ಆಳವಾದ ತನಿಖೆಯನ್ನು ಮುಂದುವರಿಸಿದೆ, (ಏಜೆನ್ಸೀಸ್).