ರಾಮಮಂದಿರದ ಕಾಣಿಕೆ ಹಣ ಲೂಟಿ ಹಗರಣ: ಅಖಿಲೇಶ್-ಯೋಗಿ ವಾಕ್ಸಮರ! ಚಂಪತ್ ರಾಯ್ ರಾಜೀನಾಮೆ, 8 ಮಂದಿ ಬಂಧನ!
ಲಕ್ನೋ: ಅಯೋಧ್ಯೆಯ ಭವ್ಯ ರಾಮಮಂದಿರಕ್ಕೆ ಭಕ್ತರು ನೀಡಿದ ಕಾಣಿಕೆ ಹಣ ಮತ್ತು ದೇಣಿಗೆಯಲ್ಲಿ ಭಾರಿ ಅವ್ಯವಹಾರ ಹಾಗೂ ಕಳ್ಳತನ ನಡೆದಿರುವ ಆಘಾತಕಾರಿ ಹಗರಣ ಈಗ ಉತ್ತರ ಪ್ರದೇಶದಲ್ಲಿ ಭಾರಿ ರಾಜಕೀಯ ಬಿರುಗಾಳಿ ಎಬ್ಬಿಸಿದೆ. ಈ ಇಡೀ ಹಗರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ದಳ (SIT) ತನ್ನ ಪ್ರಾಥಮಿಕ ವರದಿಯನ್ನು ಸರಕಾರಕ್ಕೆ ಸಲ್ಲಿಸಿದ ಬೆನ್ನಲ್ಲೇ, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್(Akhilesh Vs Yogi) ಮತ್ತು ಸಿಎಂ ಯೋಗಿ ಆದಿತ್ಯನಾಥ್ ನಡುವೆ ಭೀಕರ ರಾಜಕೀಯ ವಾಕ್ಸಮರ ಆರಂಭವಾಗಿದೆ.
ಮತ್ತೊಂದು ಪ್ರಮುಖ ಬೆಳವಣಿಗೆಯಲ್ಲಿ, ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರು ತಮ್ಮ ಹುದ್ದೆಗೆ ಶುಕ್ರವಾರ ರಾಜೀನಾಮೆ ನೀಡಿದ್ದು, ಟ್ರಸ್ಟ್ ಅದನ್ನು ಅಂಗೀಕರಿಸಿದೆ. ಹಗರಣಕ್ಕೆ ಸಂಬಂಧಿಸಿದಂತೆ ಈಗಾಗಲೇ 8 ಜನರನ್ನು ಪೊಲೀಸರು ಬಂಧಿಸಿದ್ದಾರೆ.
'ದೀಪದ ಕೆಳಗೆ ಕತ್ತಲು': ಯೋಗಿ ವಿರುದ್ಧ ಅಖಿಲೇಶ್ ಯಾದವ್ ಲೇವಡಿ
ರಾಮಮಂದಿರದ ದೇಣಿಗೆ ಲೂಟಿ ವಿಚಾರವಾಗಿ ಆಡಳಿತಾರೂಢ ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಮಾಜಿ ಸಿಎಂ ಅಖಿಲೇಶ್, ಅಯೋಧ್ಯೆಗೆ ಅತಿ ಹೆಚ್ಚು ಬಾರಿ ಭೇಟಿ ನೀಡಿ ವಿಶ್ವದಾಖಲೆ ಬರೆದಿರುವ ಮುಖ್ಯಮಂತ್ರಿ ಯೋಗಿ ಅವರಿಗೆ ಮೂಗಿನ ನೇರಕ್ಕೆ ಇಷ್ಟೊಂದು ದೊಡ್ಡ ಹಗರಣ ನಡೆಯುತ್ತಿದ್ದರೂ ಮಾಹಿತಿ ಸಿಗಲಿಲ್ಲ ಎಂದರೆ ಏನರ್ಥ, ಇದಕ್ಕೇ ಹೇಳುವುದು ದೀಪದ ಕೆಳಗೆ ಕತ್ತಲು ಎಂದಿದ್ದಾರೆ. ಅಯೋಧ್ಯೆಗೆ ಇಷ್ಟೊಂದು ಬಾರಿ ಪ್ರದಕ್ಷಿಣೆ ಹಾಕಿದ ಮೇಲೂ ಇಂತಹ ಲೂಟಿ ಬಗ್ಗೆ ಸಿಎಂಗೆ ಅರಿವಿಲ್ಲದಿರುವುದು ಆಶ್ಚರ್ಯ ತಂದಿದೆ ಎಂದು ಲೇವಡಿ ಮಾಡಿದ್ದಾರೆ.
ಜೊತೆಗೆ, ಮುಂದಿನ ದಿನಗಳಲ್ಲಿ ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷ ಅಧಿಕಾರಕ್ಕೆ ಬಂದರೆ ಅಯೋಧ್ಯೆಯನ್ನು ವಿಶ್ವದರ್ಜೆಯ ಧಾರ್ಮಿಕ ನಗರವನ್ನಾಗಿ ಪರಿವರ್ತಿಸುವುದಾಗಿ ಅಖಿಲೇಶ್ ಭರವಸೆ ನೀಡಿದ್ದಾರೆ.
ರಾಮಭಕ್ತರ ಮೇಲೆ ಗುಂಡು ಹಾರಿಸಿದವರಿಂದ ಧರ್ಮದ ಪಾಠವೇ? ಯೋಗಿ ತಿರುಗೇಟು
ಅಖಿಲೇಶ್ ಯಾದವ್ ಅವರ ಟೀಕೆಗಳಿಗೆ ಸಿಎಂ ಯೋಗಿ ಅತ್ಯಂತ ಕಠಿಣ ಶಬ್ದಗಳಲ್ಲಿ ತಿರುಗೇಟು ನೀಡಿದ್ದಾರೆ. ಸಮಾಜವಾದಿ ಪಕ್ಷದ ಸರ್ಕಾರವಿದ್ದಾಗ ಅಯೋಧ್ಯೆಯಲ್ಲಿ ನಿರಪರಾಧಿ ರಾಮಭಕ್ತರ ಮೇಲೆ ಕ್ರೂರವಾಗಿ ಗುಂಡು ಹಾರಿಸಲಾಗಿತ್ತು. ಅಂತಹ ಇತಿಹಾಸ ಹೊಂದಿರುವ ಇವರು ಅಯೋಧ್ಯೆಯನ್ನು ಧಾರ್ಮಿಕ ನಗರ ಮಾಡುತ್ತಾರಂತೆ. ಉತ್ತರ ಪ್ರದೇಶದ ಸಾಂಸ್ಕೃತಿಕ ಮತ್ತು ಧಾರ್ಮಿಕ ಪರಂಪರೆಯನ್ನು ರಕ್ಷಿಸುವ ಯಾವುದೇ ದೂರದೃಷ್ಟಿ ಅಖಿಲೇಶ್ ಅವರಿಗಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.
ನಿಮಗೆ ಅಯೋಧ್ಯೆ, ಮಥುರಾ ಮತ್ತು ಕಾಶಿಯ ಅಸ್ಮಿತೆಯನ್ನು ಉಳಿಸುವ ಧೈರ್ಯವಿಲ್ಲ. ಮುಲ್ಲಾ ಮತ್ತು ಮೌಲ್ವಿಗಳ ಮುಂದೆ ಮಂಡಿಯೂರುವುದನ್ನು ಬಿಟ್ಟರೆ ರಾಜ್ಯದ ಅಭಿವೃದ್ಧಿಗೆ ನಿಮ್ಮ ಬಳಿ ಯಾವುದೇ ಕಾರ್ಯಸೂಚಿ ಇಲ್ಲ ಎಂದು ಯೋಗಿ ನೇರವಾಗಿ ವಾಗ್ದಾಳಿ ನಡೆಸಿದ್ದಾರೆ.
ಎಸ್‌ಐಟಿ ವರದಿಯಲ್ಲಿ ಏನಿದೆ? ಎಂಟು ಮಂದಿ ಅರೆಸ್ಟ್, ಕೋಟ್ಯಂತರ ಆಸ್ತಿ ಜಪ್ತಿ!
ರಾಮಮಂದಿರಕ್ಕೆ ಬರುತ್ತಿದ್ದ ದೇಣಿಗೆ ಹಣವನ್ನು ಎಣಿಸುವ ಮತ್ತು ಅದರ ಉಸ್ತುವಾರಿ ನೋಡಿಕೊಳ್ಳುವ ವ್ಯವಸ್ಥೆಯಲ್ಲಿ ಭಾರಿ ಲೋಪದೋಷಗಳು ಇರುವುದನ್ನು ಎಸ್‌ಐಟಿ ತನ್ನ ಪ್ರಾಥಮಿಕ ವರದಿಯಲ್ಲಿ ಪತ್ತೆಹಚ್ಚಿದೆ. ಅಪರ ಮುಖ್ಯ ಕಾರ್ಯದರ್ಶಿ (ಗೃಹ) ಸಂಜಯ್ ಪ್ರಸಾದ್ ಅವರಿಗೆ ಸಲ್ಲಿಕೆಯಾಗಿರುವ ಈ ವರದಿಯಲ್ಲಿ, ಸೂಕ್ತ ಕಣ್ಗಾವಲು ಇಲ್ಲದ ಕಾರಣ ಹಣ ದುರುಪಯೋಗಪಡಿಸಿಕೊಳ್ಳಲು ದಂಧೆಕೋರರಿಗೆ ಸುಲಭವಾಗಿ ದಾರಿ ಮಾಡಿಕೊಡಲಾಗಿದೆ ಎಂದು ತಿಳಿಸಲಾಗಿದೆ.
ಈ ವರದಿಯ ಆಧಾರದ ಮೇಲೆ ಪೊಲೀಸರು ತಕ್ಷಣ ಕಾರ್ಯಾಚರಣೆ ನಡೆಸಿ, ಕಾಣಿಕೆ ಹಣ ಕಳ್ಳತನ ಜಾಲದಲ್ಲಿದ್ದ 8 ಜನರನ್ನು ಬಂಧಿಸಿದ್ದಾರೆ. ಬಂಧಿತರ ಮನೆಗಳ ಮೇಲೆ ದಾಳಿ ನಡೆಸಿದ ತನಿಖಾ ಸಂಸ್ಥೆಗಳು ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ಅಕ್ರಮ ಆಸ್ತಿ ಪತ್ರಗಳನ್ನು ವಶಪಡಿಸಿಕೊಂಡಿವೆ. ಇದರ ಬೆನ್ನಲ್ಲೇ ಟ್ರಸ್ಟ್‌ನ ಪ್ರಮುಖರಾಗಿದ್ದ ಚಂಪತ್ ರಾಯ್ ಅವರ ರಾಜೀನಾಮೆ ನಡೆದಿರುವುದು ಹಗರಣದ ಗಂಭೀರತೆಯನ್ನು ಮತ್ತಷ್ಟು ಹೆಚ್ಚಿಸಿದೆ. ರಾಮನಗರಿ ಅಯೋಧ್ಯೆ ಈಗ ಧಾರ್ಮಿಕ ಮತ್ತು ರಾಜಕೀಯ ಸಮರದ ಕೇಂದ್ರಬಿಂದುವಾಗಿ ಮಾರ್ಪಟ್ಟಿದೆ,(ಏಜೆನ್ಸೀಸ್).