ರಾಮ ಮಂದಿರ  
ದೇಶ

ರಾಮ ಮಂದಿರ ದೇಣಿಗೆ ಕಳ್ಳತನ ಪ್ರಕರಣ; SIT ತಂಡವನ್ನು ಪುನರ್​ರಚಿಸಿದ ಯುಪಿ ಸರ್ಕಾರ: ಮೂವರು ಐಪಿಎಸ್​ ಅಧಿಕಾರಿಗಳ ಸೇರ್ಪಡೆ

ಲಖನೌ: ಅಯೋಧ್ಯೆಯ ಶ್ರೀ ರಾಮ ಮಂದಿರದಲ್ಲಿ ನಡೆದಿರುವ ದೇಣಿಗೆ ಕಳ್ಳತನ ಆರೋಪ ಪ್ರಕರಣವನ್ನು ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡವನ್ನು(SIT) ಉತ್ತರ ಪ್ರದೇಶ ಸರ್ಕಾರ ಪುನರ್​ರಚಿಸಿದ್ದು, ತಂಡಕ್ಕೆ ಮೂವರು ಹಿರಿಯ ಐಪಿಎಸ್ ಅಧಿಕಾರಿಗಳನ್ನು ಸೇರ್ಪಡೆ ಮಾಡಿ ಆದೇಶ ಹೊರಡಿಸಿದೆ ಎಂದು ಭಾನುವಾರ(ಜು. 26) ವರದಿಯಾಗಿದೆ.
ಹೊಸದಾಗಿ ರಚಿಸಲಾದ ಎಸ್‌ಐಟಿಗೆ ಐಜಿ ಕಿರಣ್ ಎಸ್ ನೇತೃತ್ವ ವಹಿಸಿದ್ದು, ಡಿಐಜಿ ಅಯೋಧ್ಯೆ ಸೋಮೆನ್ ವರ್ಮಾ ಮತ್ತು ಎಸ್‌ಎಸ್‌ಪಿ ಅಯೋಧ್ಯೆ ಡಾ. ಗೌರವ್ ಗ್ರೋವರ್ ಅವರು ತಂಡದಲ್ಲಿದ್ದಾರೆ. ಹಿಂದಿನ ಎಸ್‌ಐಟಿಯಲ್ಲಿ ಲಕ್ನೋ ಆಯುಕ್ತ ವಿಜಯ್ ವಿಶ್ವಾಸ್ ಪಂತ್ ಮತ್ತು ವಿಶೇಷ ಕಾರ್ಯದರ್ಶಿ (ಹಣಕಾಸು) ನೀಲ್ ರತನ್ ಕುಮಾರ್ ಮತ್ತು ಇತರ ಅಧಿಕಾರಿಗಳು ಇದ್ದರು.
ಜುಲೈ 13ರಂದು ನಡೆದ ವಿಚಾರಣೆಯ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್, ಹಿರಿಯ ಐಪಿಎಸ್ ಅಧಿಕಾರಿಯ ನೇತೃತ್ವದಲ್ಲಿ ಹೊಸ ಎಸ್‌ಐಟಿ ರಚಿಸುವಂತೆ ಉತ್ತರ ಪ್ರದೇಶ ಸರ್ಕಾರಕ್ಕೆ ನಿರ್ದೇಶನ ನೀಡಿದ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ನಾಳೆ(ಜು. 27) ಪ್ರಕರಣದ ತನಿಖೆಯ ಸ್ಥಿತಿಗತಿ ವರದಿಯನ್ನು ಕೋರ್ಟ್​ಗೆ ಸಲ್ಲಿಸಬೇಕಿದೆ.
ರಾಮ ಮಂದಿರದಲ್ಲಾದ ದೇಣಿಗೆ ಕಳ್ಳತನಕ್ಕೆ ಸಂಬಂಧಿಸಿದಂತೆ ಹಿಂದಿನ ಎಸ್‌ಐಟಿ ತಂಡ, ವ್ಯಾಪಕ ತನಿಖೆ ನಡೆಸಿದ್ದು, ಸಿಸಿಟಿವಿ ದೃಶ್ಯಾವಳಿಗಳು, ದೇಣಿಗೆ ನೋಂದಣಿ ದಾಖಲೆಗಳು, ನಗದು ನಿರ್ವಹಣೆ ಕಾರ್ಯವಿಧಾನಗಳು ಮತ್ತು ಹಣಕಾಸು ದಾಖಲೆಗಳನ್ನು ಪರಿಶೀಲಿಸಿದೆ. ಹಲವಾರು ದೇವಸ್ಥಾನದ ನೌಕರರ ಪ್ರಶ್ನಿಸಿದ್ದು, ಕಾಣಿಕೆಗಳ ಎಣಿಕೆ ಮತ್ತು ಠೇವಣಿಯಲ್ಲಿ ಅಕ್ರಮಗಳು ನಡೆದಿವೆ ಎಂದು ಸೂಚಿಸುವ ಪ್ರಾಥಮಿಕ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ.
ಇನ್ನೂ ತನಿಖೆಯ ಆಧಾರದ ಮೇಲೆ, ಪೊಲೀಸರು ಟಿನ್ನು ಯಾದವ್, ಮಿಶ್ರಾ ಸೇರಿದಂತೆ 13ಕ್ಕೂ ಹೆಚ್ಚು ಪ್ರಮುಖ ಆರೋಪಿಗಳನ್ನು ಬಂಧಿಸಿದ್ದು, ದುರುಪಯೋಗಪಡಿಸಿಕೊಂಡ ಹಣವನ್ನು ಬಳಸಿಕೊಂಡು ಖರೀದಿಸಲಾಗಿದೆ ಎನ್ನಲಾದ ನಗದು, ವಾಹನಗಳು, ಹೂಡಿಕೆಗೆ ಸಂಬಂಧಿಸಿದ ದಾಖಲೆಗಳು ಮತ್ತು ಇತರ ಆಸ್ತಿಗಳನ್ನು ವಶಪಡಿಸಿಕೊಂಡಿದ್ದಾರೆ (ಏಜೆನ್ಸೀಸ್).