ಪ್ರಧಾನಿ ಮೋದಿ ಮತ್ತು ಮಲ್ಲಿಕಾರ್ಜನ ಖರ್ಗೆ
ನವದೆಹಲಿ: ಅಯೋಧ್ಯೆಯ ರಾಮ ಮಂದಿರದಲ್ಲಿ ದೇಣಿಗೆ ಕಳ್ಳತನ ಮತ್ತು ಬೆಲೆಬಾಳುವ ವಸ್ತುಗಳು ಕಾಣೆಯಾಗಿವೆ ಎಂಬ ಆರೋಪಗಳಿಗೆ ಸಂಬಂಧಿಸಿದಂತೆ ಸಂಸತ್ತಿಗೆ ಬಂದು ಪ್ರಧಾನಿ ನರೇಂದ್ರ ಮೋದಿಯವರೇ ಉತ್ತರಿಸಬೇಕು ಎಂದು ಎಐಸಿಸಿ ಅಧ್ಯಕ್ಷ ಮತ್ತು ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ(Mallikarjun Kharge) ಒತ್ತಾಯಿಸಿದ್ದಾರೆ.
ಈ ಕುರಿತು ಭಾನುವಾರ(ಆ. 09) ರುದ್ರಪುರದಲ್ಲಿ ಸುದ್ದಿ ಸಂಸ್ಥೆ ಎಎನ್ಐ ಜೊತೆ ಮಾತನಾಡಿರುವ ಅವರು, ಈ ವಿಷಯವು ಭಕ್ತರ ನಂಬಿಕೆಗೆ ಸಂಬಂಧಿಸಿದೆ. ದೇವಾಲಯ ಮತ್ತು ಭಗವಾನ್ ರಾಮನ ಮೇಲೆ ನಂಬಿಕೆ ಇಡುವ ಜನರ ಪರವಾಗಿ ಪ್ರತಿಪಕ್ಷಗಳು ಈ ವಿಷಯವನ್ನು ಎತ್ತಿವೆ. ದೇವಾಲಯದ ಟ್ರಸ್ಟ್‌ನ ಕಾರ್ಯನಿರ್ವಹಣೆಯನ್ನು ಪ್ರಧಾನಿಯವರು ಸ್ವತಃ ವಿವರಿಸಬೇಕು ಎಂದಿದ್ದಾರೆ.
ದೇವಾಲಯದೊಳಗಿನ ದೇಣಿಗೆ ಕಳ್ಳತನದ ವಿಷಯವನ್ನು ಮೊದಲು ಎತ್ತಿದ್ದು ನಾವೇ, ಆ ಟ್ರಸ್ಟ್ ರಚಿಸಿದವರು ಯಾರು? ನಮ್ಮ ಪ್ರಧಾನಿ, ದೇವಾಲಯವನ್ನು ಉದ್ಘಾಟಿಸಿದ್ದು ಯಾರು? ಅದನ್ನೇ ಅವರೇ ಮಾಡಿದ್ದು, ಪೂಜೆ ಆರಂಭಿಸಿದ್ದರು ಯಾರು? ಅವರೇ ಮಾಡಿದರು. ಟ್ರಸ್ಟ್ ಸದಸ್ಯರನ್ನು ಆಯ್ಕೆ ಮಾಡಿದ್ಯಾರು? ಅದನ್ನೂ ಸಹ ಅವರೇ ಮಾಡಿದರು. ಹೀಗಾಗಿ ಅಲ್ಲಿ ನಡೆದ ಹಗರಣಕ್ಕೆ ಅವರೇ ಸದನಕ್ಕೆ ಬಂದು ಉತ್ತರ ನೀಡಬೇಕು ಎಂದು ಹೇಳಿದ್ದಾರೆ.
ದೇವಾಲಯದೊಳಗೆ ಇರಿಸಲಾಗಿರುವ ಆಭರಣಗಳು, ಚಿನ್ನ, ಬೆಳ್ಳಿ, ಹಣ ಮತ್ತು ಇತರ ಬೆಲೆಬಾಳುವ ವಸ್ತುಗಳು ಪ್ರಶ್ನಾರ್ಹ ಆಸ್ತಿಗಳಲ್ಲಿ ಸೇರಿವೆ. ಚಿನ್ನದ ಇಟ್ಟಿಗೆಗಳು ಮತ್ತು ಚಿನ್ನದ ರಾಮಚರಿತಮಾನಸ ಪುಸ್ತಕವೂ ಸೇರಿದೆ. ದೇವಸ್ಥಾನದ ವ್ಯವಹಾರಕ್ಕೆ ಜವಾಬ್ದಾರರಾಗಿರುವ ಟ್ರಸ್ಟ್‌ನ ಮತ್ತು ಕಾರ್ಯನಿರ್ವಹಣೆ ಕುರಿತು ಪ್ರಧಾನಿ ವಿವರಣೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಇನ್ನೂ ಪ್ರಸ್ತಾವಿತ ವಿದೇಶಿ ಕೊಡುಗೆ(ನಿಯಂತ್ರಣ) ತಿದ್ದುಪಡಿ ಮಸೂದೆಯನ್ನು ಕಾಂಗ್ರೆಸ್ ವಿರೋಧಿಸುತ್ತದೆ ಎಂದಿರುವ ಖರ್ಗೆ, ನಾವು ಎಫ್‌ಸಿಆರ್‌ಎ ಸಂಬಂಧಿತ ಕ್ರಮವನ್ನು ವಿರೋಧಿಸುತ್ತೇವೆ. ನಾಳೆ ಸಂಸದೀಯ ನಾಯಕರ ಸಭೆಯ ಬಳಿಕ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ (ಏಜೆನ್ಸೀಸ್).