ಅಯೋಧ್ಯೆ ರಾಮ ಮಂದಿರ ಹುಂಡಿ ಲೂಟಿ ಪ್ರಕರಣ
- ಅಯೋಧ್ಯೆ ರಾಮಮಂದಿರ ಕಾಣಿಕೆ ಲೂಟಿ ಪ್ರಕರಣ
- ಆರೋಪಿಗಳಿಂದ ದಿನಕ್ಕೆ 6ರಿಂದ 8 ಲಕ್ಷ ಕಳ್ಳತನ?
- ಎಸ್ಐಟಿ ತನಿಖೆಯಲ್ಲಿ ಶಾಕಿಂಗ್ ಸಂಗತಿಗಳು ಬೆಳಕಿಗೆ
ಅಯೋಧ್ಯೆ: ರಾಮಮಂದಿರ ಕಾಣಿಕೆ ಲೂಟಿ ಪ್ರಕರಣದ ದೇಶವ್ಯಾಪಿ ಭಾರಿ ಸಂಚಲನ ಸೃಷ್ಟಿಸಿದ್ದು. ರಾಮನ ದೇಣಿಗೆ ಹಣವನ್ನೂ ಬಿಡದ ಆರೋಪಿಗಳ ಮನೆಗಳನ್ನು ಬುಲ್ಡೋಜರ್ಗಳಿಂದ ನೆಲಸಮ ಮಾಡಬೇಕು ಎಂಬ ಆಗ್ರಹಗಳು ಕೇಳಿಬಂದಿವೆ. ಮತ್ತೊಂದೆಡೆ, ಪ್ರಕರಣಕ್ಕೆ ಹೊಸ ತಿರುವುಗಳು ಸಿಕ್ಕಿದ್ದು, ನಂಬಿಕೆ ದ್ರೋಹಿಗಳು ಪ್ರತಿದಿನ 6ರಿಂದ 8 ಲಕ್ಷ ರೂ. ಕದಿಯುತ್ತಿದ್ದರು ಎನ್ನಲಾಗಿದೆ.
ಮಂದಿರದ ದೇಣಿಗೆ ಹುಂಡಿ ಕಳ್ಳತನದ ಕುರಿತು ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡಕ್ಕೆ (ಎಸ್ಐಟಿ) ಆರೋಪಿಗಳ ಒಟ್ಟು ಆಸ್ತಿ, ಆದಾಯ ಮತ್ತು ಬ್ಯಾಂಕ್ ಖಾತೆಗಳು ಸಿಕ್ಕಿವೆ. ಇದನ್ನು ಸೂಕ್ಷ್ಮವಾಗಿ ಪರಿಶೀಲನೆ ನಡೆಸಿರುವ ಅಧಿಕಾರಿಗಳಿಗೆ, ಈಗಾಗಲೇ ಶಾಕಿಂಗ್ ಸಂಗತಿಗಳು ಗೊತ್ತಾಗಿವೆ.
ದಿನಕ್ಕೆ 8 ಲಕ್ಷ ರೂ. ಗೋಲ್‌ಮಾಲ್?
ವರದಿಗಳ ಪ್ರಕಾರ, ಮಂದಿರದ ಕಾಣಿಕೆ ಕಳ್ಳತನದ ಹಗರಣ ಬಯಲಾಗುವ ಮೊದಲು, ರಾಮಮಂದಿರ ಟ್ರಸ್ಟ್‌ನ ಎಸ್ಬಿಐ ಮತ್ತು ಪಿಎನ್ಬಿ ಬ್ಯಾಂಕ್ ಖಾತೆಗಳಿಗೆ ಪ್ರತಿದಿನ ಅಂದಾಜು 16 ಲಕ್ಷದಿಂದ 18 ಲಕ್ಷ ರೂಪಾಯಿ ದೇಣಿಗೆ ಹಣ ಜಮೆಯಾಗುತ್ತಿತ್ತು. ಆದರೆ, ಕಳ್ಳತನದ ಜಾಲ ಬಯಲಾದ ಬೆನ್ನಲ್ಲೇ ಈ ಮೊತ್ತ ದಿಢೀರನೆ ದಿನಕ್ಕೆ 24ರಿಂದ 26 ಲಕ್ಷ ರೂಪಾಯಿಗೆ ಏರಿಕೆಯಾಗಿದೆ! ಇದು ಅನುಮಾನಗಳೇ ನಿಜ ಎನ್ನುವಂತೆ ಮಾಡಿದೆ.
ಈ ದಿಢೀರ್ ವ್ಯತ್ಯಾಸವನ್ನು ಸೂಕ್ಷ್ಮವಾಗಿ ಹಾಗೂ ಗಂಭೀರವಾಗಿ ಪರಿಗಣಿಸಿರುವ ಎಸ್ಐಟಿ ಅಧಿಕಾರಿಗಳು, ಹಿಂದೆ ಪ್ರತಿದಿನ ಅಂದಾಜು 6 ಲಕ್ಷದಿಂದ 8 ಲಕ್ಷ ರೂ. ಕಾಣಿಕೆ ಹಣವನ್ನು ಬ್ಯಾಂಕ್‌ಗೆ ಕಟ್ಟದೆ ಮಧ್ಯದಲ್ಲೇ ಲೂಟಿ ಮಾಡಲಾಗುತ್ತಿತ್ತು ಎಂಬ ಬಲವಾಗಿ ಅನುಮಾನಿಸಿದ್ದಾರೆ.
ಬ್ಯಾಂಕ್ ಮ್ಯಾನೇಜರ್ ವಿಚಾರಣೆ
ಈ ದೊಡ್ಡ ಮಟ್ಟದ ಆರ್ಥಿಕ ಅಕ್ರಮದ ಹಿಂದೆ ಬ್ಯಾಂಕ್ ಸಿಬ್ಬಂದಿಯ ಕೈವಾಡವಿರುವ ಶಂಕೆ ದೊಡ್ಡದಾಗಿದೆ. ಹೀಗಾಗಿ, ಎಸ್ಐಟಿ ಅಧಿಕಾರಿಗಳು ಕಾರ್ಯಾಚರಣೆಯನ್ನು ಇನ್ನಷ್ಟು ತೀವ್ರಗೊಳಿಸಿದ್ದಾರೆ. ಈಗಾಗಲೇ ಎಸ್ಬಿಐ ಬ್ಯಾಂಕ್ ಮ್ಯಾನೇಜರ್ ಸೇರಿ ಒಟ್ಟು 10 ಬ್ಯಾಂಕ್ ಉದ್ಯೋಗಿಗಳನ್ನು ಸುದೀರ್ಘ ವಿಚಾರಣೆಗೆ ಒಳಪಡಿಸಲಾಗಿದೆ. ಬ್ಯಾಂಕ್‌ನ ಪ್ರಮುಖ ದಾಖಲೆಗಳು ಮತ್ತು ವಹಿವಾಟಿನ ಇತಿಹಾಸವನ್ನು ಅಧಿಕಾರಿಗಳು ಜಪ್ತಿ ಮಾಡಿಕೊಂಡಿದ್ದು, ಪ್ರಕರಣಕ್ಕೆ ಬೇಕಿರುವ ಅಗತ್ಯ ದಾಖಲೆಗಳನ್ನು ಕೂಲಂಕಷವಾಗಿ ಪರಿಶೀಲಿಸುತ್ತಿದ್ದಾರೆ.
ಮೂವರ ಮೇಲೆ ಶಂಕೆ
ಪ್ರಾಥಮಿಕ ತನಿಖೆಯ ಪ್ರಕಾರ, ಈ ಇಡೀ ಹಗರಣದ ಹಿಂದೆ ಇಬ್ಬರು ಅಥವಾ ಮೂವರು ಪ್ರಭಾವಿ ವ್ಯಕ್ತಿಗಳ ಕೈವಾಡವಿರುವ ಶಂಕೆ ಬಲವಾಗಿದೆ. ಲೂಟಿಯಾದ ಕೋಟಿಗಟ್ಟಲೇ ಹಣ ಯಾರ ಕೈ ಸೇರಿದೆ? ಈ ಜಾಲದಲ್ಲಿ ಇನ್ನು ಯಾರೆಲ್ಲ ಶಾಮೀಲಾಗಿದ್ದಾರೆ? ಎಂಬ ನಿಟ್ಟಿನಲ್ಲಿ ಎಸ್ಐಟಿ ತನಿಖೆ ಚುರುಕುಗೊಳಿಸಿದೆ. ಮುಂಬರುವ ದಿನಗಳಲ್ಲಿ ಈ ಪ್ರಕರಣದಲ್ಲಿ ಇನ್ನೂ ಹಲವು ಕಾಣದ ದೊಡ್ಡ ತಲೆಗಳು ಬೆಳಕಿಗೆ ಬರುವ ಸಾಧ್ಯತೆಗಳಿವೆ. ಒಟ್ಟಾರೆ, ಅಯೋಧ್ಯೆ ರಾಮಮಂದಿರ ದೇಣಿಗೆ ಹಗರಣ ಪ್ರಕರಣದಲ್ಲಿ ದಿನಕ್ಕೊಂದು ಟ್ವಿಸ್ಟ್ಗಳು ಸಿಗುತ್ತಲೇ ಇವೆ,(ಏಜೆನ್ಸೀಸ್).