ಮುಂಬೈ: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಸಿನಿಮಾವಾದ ಟಾಕ್ಸಿಕ್ ( Toxic ) ಟೀಸರ್ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ. ರಾಮ್ ಗೋಪಾಲ್ ವರ್ಮಾ ಅವರು ಗೀತು ಮೋಹನ್ ದಾಸ್ ( Geetu Mohandas ) ನಿರ್ದೇಶನದ ಈ ಚಿತ್ರದ ಟೀಸರ್ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ಇದೇ ಮೊದಲ ಬಾರಿಗೆ ಯಶ್ ಅವರು ಹಸಿಬಿಸಿ ದೃಶ್ಯಗಳಲ್ಲಿ ನಟಿಸಿರುವುದು ಎಲ್ಲರ ಹುಬ್ಬೇರಿಸಿದೆ. ಟೀಸರ್ ಕಾರಿನ ದೃಶ್ಯದ ಬಗ್ಗೆ ಭಾರಿ ಚರ್ಚೆಯಾಗುತ್ತಿದೆ. ನಿರ್ದೇಶಕಿ ಗೀತು ಮೋಹನ್ದಾಸ್ ಇಂಥಾ ದೃಶ್ಯವನ್ನು ಅದ್ಹೇಗೆ ಚಿತ್ರೀಕರಿಸಿದರು ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.
'ಟಾಕ್ಸಿಕ್' ಚಿತ್ರದ ಟೀಸರ್ ನೋಡಿ ಅಚ್ಚರಿ ವ್ಯಕ್ತಪಡಿಸಿರುವ ನಿರ್ದೇಶಕ ರಾಮ್ ಗೋಪಾಲ್ ವರ್ಮಾ, "ಯಶ್ ಅಭಿನಯದ ಟಾಕ್ಸಿಕ್ ಟ್ರೈಲರ್ (ಟೀಸರ್) ನೋಡಿದ ನಂತರ, ನಿರ್ದೇಶಕಿ ಗೀತು ಮೋಹನ್ ದಾಸ್ ಅವರು ಮಹಿಳಾ ಸಬಲೀಕರಣದ ಅಂತಿಮ ಸಂಕೇತ ಎನ್ನುವುದರಲ್ಲಿ ನನಗೆ ಯಾವುದೇ ಸಂದೇಹವಿಲ್ಲ. ಈ ಮಹಿಳಾ ನಿರ್ದೇಶಕಿಯ ಮೇಕಿಂಗ್ ಶೈಲಿಗೆ ಹೋಲಿಸಿದರೆ ಯಾವೊಬ್ಬ ಪುರುಷ ನಿರ್ದೇಶಕನೂ ಸಮರ್ಥನಲ್ಲ. ಇಂತಹ ದೃಶ್ಯಗಳನ್ನು ಅವರು ಚಿತ್ರೀಕರಿಸಿದ್ದಾರೆ ಎಂಬುದನ್ನು ಈಗಲೂ ನನಗೆ ನಂಬಲು ಸಾಧ್ಯವಾಗುತ್ತಿಲ್ಲ" ಎಂದು ಮೆಚ್ಚುಗೆ ಮಾತನಾಡಿದ್ದಾರೆ.
ನಿರ್ದೇಶಕಿ ಗೀತು ಮೋಹನ್ ದಾಸ್ ಅವರು ಇಷ್ಟು ದೊಡ್ಡ ಮಟ್ಟದ ಆಕ್ಷನ್ ಸಿನಿಮಾ ಮತ್ತು ವಿಷುವಲ್ಸ್ ಅನ್ನು ಹೇಗೆ ಸೆರೆಹಿಡಿದಿದ್ದಾರೆ ಎಂಬ ಬಗ್ಗೆ ರಾಮ್ ಗೋಪಾಲ್ ವರ್ಮಾ ತಮ್ಮ ಅಚ್ಚರಿಯನ್ನು ವ್ಯಕ್ತಪಡಿಸಿದ್ದಾರೆ. ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಟ್ವೀಟ್ ಮಾಡಿ ಗೀತು ಅವರ ಕಲ್ಪನಾ ಶಕ್ತಿಯನ್ನು ಶ್ಲಾಘಿಸಿದ್ದಾರೆ.
ಇದೊಂದು ಅಂತರಾಷ್ಟ್ರೀಯ ಮಾದಕವಸ್ತು ಮಾಫಿಯಾ ಹಿನ್ನೆಲೆಯ ಕಥೆಯಾಗಿದ್ದು, ಹೈ-ವೋಲ್ಟೇಜ್ ಆಕ್ಷನ್ ದೃಶ್ಯಗಳನ್ನು ಒಳಗೊಂಡಿರಲಿದೆ ಎನ್ನಲಾಗಿದೆ. ಯಶ್ ಅವರ ಸ್ಕ್ರೀನ್ ಪ್ರೆಸೆನ್ಸ್ ಮತ್ತು ಸಿನಿಮಾದ ತಾಂತ್ರಿಕ ಗುಣಮಟ್ಟ ಅಂತರಾಷ್ಟ್ರೀಯ ಮಟ್ಟದಲ್ಲಿದೆ ಎನ್ನುವ ಮಾತು ಕೇಳಿ ಬರುತ್ತಿವೆ.
ಈ ಹಿಂದೆ ಪ್ರಶಸ್ತಿ ವಿಜೇತ ಕಲಾತ್ಮಕ ಸಿನಿಮಾಗಳನ್ನು ಮಾಡಿದ್ದ ಗೀತು, ಈಗ ಯಶ್ ಅವರೊಂದಿಗೆ ಮಾಸ್ ಆಕ್ಷನ್ ಸಿನಿಮಾ ಮಾಡುತ್ತಿರುವುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.
ಟೀಸರ್ ಆರಂಭವಾಗುವುದೇ ಒಂದು ಸ್ಮಶಾನದ ದೃಶ್ಯದೊಂದಿಗೆ. ಅಲ್ಲಿ ನಡೆಯುತ್ತಿರುವ ಅಂತ್ಯಕ್ರಿಯೆಯ ನಡುವೆ ಯಶ್ ಅವರು ಕಾರಿನಲ್ಲಿ ಎಂಟ್ರಿ ಕೊಟ್ಟು, ಗುಂಡಿನ ಮಳೆ ಸುರಿಸುವುದೇ ಟೀಸರ್‌ನ ಹೈಲೈಟ್. ಟೀಸರ್‌ನ ವಿಶುವಲ್ಸ್ ಮತ್ತು ಆಕ್ಷನ್ ಸನ್ನಿವೇಶಗಳು ಪಕ್ಕಾ ಹಾಲಿವುಡ್ ಗುಣಮಟ್ಟದಲ್ಲಿವೆ. ಸಿನಿಮಾದ ಕಲರ್ ಗ್ರೇಡಿಂಗ್ ಮತ್ತು ಕ್ಯಾಮೆರಾ ವರ್ಕ್ ಅಂತಾರಾಷ್ಟ್ರೀಯ ಮಟ್ಟದ ಚಿತ್ರಗಳನ್ನು ನೆನಪಿಸುತ್ತದೆ. ಟೀಸರ್ ಕೊನೆಯಲ್ಲಿ ಯಶ್ ಅವರು ಸಿಗಾರ್ ಹಚ್ಚುತ್ತಾ ಹೇಳುವ "Daddy's Home" ಎಂಬ ಸಂಭಾಷಣೆ ಈಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಟ್ರೆಂಡ್ ಆಗುತ್ತಿದೆ. ಅಲ್ಲದೆ, ಟೀಸರ್‌ನಲ್ಲಿ ಯಶ್ ಅವರು ಕಾರಿನ ಒಳಗೆ ಯುವತಿಯೊಟ್ಟಿಗೆ ಇರುವ ಒಂದು ಬೋಲ್ಡ್ ದೃಶ್ಯವಿದ್ದು, ಇದು ಸಿನೆಮಾ ಎಷ್ಟು 'ರಾ' (Raw) ಆಗಿರಲಿದೆ ಎಂಬುದನ್ನು ತೋರಿಸುತ್ತದೆ.
ಈಗಾಗಲೇ ಘೋಷಣೆಯಾಗಿರುವಂತೆ ನಯನತಾರಾ, ಕಿಯಾರಾ ಅಡ್ವಾಣಿ, ಹುಮಾ ಖುರೇಷಿ , ರುಕ್ಮಿಣಿ ವಸಂತ್ ಮತ್ತು ತಾರಾ ಸುತಾರಿಯಾ ಅವರ ಪಾತ್ರಗಳು ಈ ಡಾರ್ಕ್ ಜಗತ್ತಿನಲ್ಲಿ ಎಷ್ಟು ಮುಖ್ಯ ಎಂಬುದನ್ನು ಟೀಸರ್ ಬಿಂಬಿಸುತ್ತದೆ. ನಿರ್ದೇಶಕಿ ಗೀತು ಮೋಹನ್ ದಾಸ್ ಅವರು ಯಶ್ ಅವರನ್ನು ಹಿಂದೆಂದೂ ಕಾಣದ ರೀತಿಯಲ್ಲಿ ತೋರಿಸಿದ್ದಾರೆ. ಕೇವಲ ಆಕ್ಷನ್ ಮಾತ್ರವಲ್ಲದೆ, ಒಂದು ಗಂಭೀರ ಮತ್ತು ತೀವ್ರವಾದ ಕಥೆ ಇದರಲ್ಲಿ ಅಡಗಿದೆ. ಟೀಸರ್‌ನ ಮ್ಯೂಸಿಕ್ ಸಖತ್ ಪವರ್‌ಫುಲ್ ಆಗಿದೆ. ಪ್ರತಿ ಶಬ್ದ ಮತ್ತು ಬಿಜಿಎಂ ದೃಶ್ಯದ ತೀವ್ರತೆಯನ್ನು ಹೆಚ್ಚಿಸುವಲ್ಲಿ ಯಶಸ್ವಿಯಾಗಿದೆ.