ರಾಹುಲ್ ಗಾಂಧಿ ಮತ್ತು ಕೃತಿ ಸನೂನ್
ನವದೆಹಲಿ: ರಕ್ಷಾ ಬಂಧನ ಜಾಹೀರಾತಿನಲ್ಲಿ ಉಡುಗೆಯ ಬಗ್ಗೆ ಟೀಕೆ ಮತ್ತು ಟ್ರೋಲಿಂಗ್ಗೆ ಗುರಿಯಾಗಿರುವ ಬಾಲಿವುಡ್ ನಟಿ ಕೃತಿ ಸನೂನ್ ಅವರನ್ನು ಬೆಂಬಲಿಸಿರುವ ಕಾಂಗ್ರೆಸ್ ನಾಯಕ ಮತ್ತು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ(Rahul Gandhi), ಮಹಿಳೆಯರು ಏನು ಧರಿಸುತ್ತಾರೆ ಎಂಬುದು ಅವರ ಆಯ್ಕೆ ಎಂದು ಸಮರ್ಥಿಸಿಕೊಂಡಿದ್ದಾರೆ.
ಈ ಕುರಿತು ಇನ್ಸ್ಟಾಗ್ರಾಂನಲ್ಲಿ ಕೃತಿ ಸನೂನ್ ಹೇಳಿಕೆಯನ್ನು ಸ್ಟೋರಿಯಲ್ಲಿ ಹಾಕಿಕೊಂಡಿರುವ ಅವರು, ಒಬ್ಬ ಮಹಿಳೆ ಏನು ಧರಿಸುತ್ತಾಳೆ, ಏನು ಮಾಡುತ್ತಾಳೆ ಮತ್ತು ಎಲ್ಲಿಗೆ ಹೋಗುತ್ತಾಳೆ ಎಂಬುದು ಅವಳ ಆಯ್ಕೆ. ಮಹಿಳೆಯರು ತಮ್ಮ ಸ್ವಾತಂತ್ರ್ಯವನ್ನು ಚಲಾಯಿಸಿದ್ದಕ್ಕಾಗಿ ಟ್ರೋಲ್ ಮಾಡುವುದನ್ನು ನಿಲ್ಲಿಸಿ ಎಂದಿದ್ದಾರೆ.
ಟೀಕೆ ಬಗ್ಗೆ ಕೃತಿ ಸನೂನ್ ಹೇಳಿದ್ದೇನು?
ರಕ್ಷಾ ಬಂಧನ ಜಾಹೀರಾತಿನಲ್ಲಿ ಉಡುಗೆಯ ಬಗ್ಗೆ ಟೀಕೆಯ ಬಗ್ಗೆ ಪ್ರತಿಕ್ರಿಯಿಸಿರು ಕೃತಿ, ಸಂಸ್ಕೃತಿ ಮತ್ತು ಸಂಪ್ರದಾಯಗಳು ನಮ್ಮ ಹೃದಯದಲ್ಲಿವೆಯೇ ಹೊರತು ಉಡುಪಿನ ಕತ್ತಿನ ವಿನ್ಯಾಸದಲ್ಲಲ್ಲ!. ಮಹಿಳೆಯರು ಏನು ಧರಿಸಬೇಕು ಎಂದು ಅವರಿಗೆ ನಿರ್ದೇಶಿಸುವುದನ್ನು ನಾವೆಂದಾದರೂ ನಿಲ್ಲಿಸುತ್ತೇವೆಯೇ? ಸಾಂಪ್ರದಾಯಿಕ ಉಡುಪಿನ ಶೈಲಿ ಕಾಲಕ್ರಮೇಣ ಬದಲಾಗಿದ್ದರೂ, ಸಾಂಸ್ಕೃತಿಕ ಸಂಪ್ರದಾಯಗಳ ವಿಷಯದಲ್ಲಿ ಮಹಿಳೆಯರು ಧರಿಸುವ ಉಡುಪನ್ನು ನೋಡಿಯೇ ಅವರನ್ನು ಈಗಲೂ ಆಗಾಗ್ಗೆ ನಿರ್ಣಯಿಸಲಾಗುತ್ತದೆ ಎಂದಿದ್ದಾರೆ.
ಕಂಗನಾ ರಣಾವತ್ ಟೀಕೆ
ಇನ್ನೂ ಕೃತಿ ಸನೂನ್ ಜಾಹೀರಾತಿಗೆ ಕಿಡಿಕಾರಿರುವ ನಟಿ ಮತ್ತು ಸಂಸದೆ ಕಂಗನಾ ರಣಾವತ್, ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಕೃತಿ ಸನೊನ್ ಹೆಸರನ್ನು ಉಲ್ಲೇಖಿಸದೆ ತರಾಟೆಗೆ ತೆಗೆದುಕೊಂಡಿದ್ದಾರೆ. ನಾವು ಹೆಣ್ಣಾಗಿ ಹುಟ್ಟಿರುವುದಕ್ಕೆ ಬಹಳ ಹೆಮ್ಮೆ ಪಡೆಬೇಕು, ಏಕೆಂದರೆ ನಾವು ಧರಿಸುವ ಬಟ್ಟೆಗಳಲ್ಲಿ ಬಹಳಷ್ಟು ವಿಧಗಳಿವೆ. ಒಂದೊಂದು ಕಾರ್ಯಕ್ರಮಕ್ಕೂ ಒಂದೊಂದು ಬಗೆಯ ಉಡುಪನ್ನು ಧರಿಸಲು ನಮಗೆ ಅವಕಾಶವಿದೆ. ಈ ಕಾಲಮಾನದ ಮಹಿಳೆ ಜಾಗತಿಕ ಮಹಿಳೆಯಾಗಿದ್ದಾಳೆ.
ಕಾಕ್ಟೇಲ್ ಬಟ್ಟೆಯಿಂದ ಹಿಡಿದು, ಲೆಹಂಗಾ, ಚೋಲಿ, ಜೀನ್ಸ್, ಬಿಕಿನಿ, ಸಾರಿ ಸಲ್ವಾರ್ ಕಮೀಜ್ ಇಷ್ಟೆಲ್ಲಾ ಆಯ್ಕೆಗಳಿದ್ದರೂ ನೀವು ಬಿಕಿನಿ ಅಥವಾ ಒಳಉಡುಪನ್ನು ಧರಿಸಿ, ನಿಮ್ಮ ಸಹೋದರನಿಗೆ ಏಕೆ ರಾಖಿ ಕಟ್ಟುತ್ತೀರಿ? ನಿಮ್ಮ ವಸ್ತ್ರದ ಆಯ್ಕೆಗಳು ಎಲ್ಲಿಗೆ ಹೋಗಿವೆ? ನನಗಂತೂ ಈ ಜಾಹೀರಾತೂ ಬೇಕಂತಲೇ ಕೆಟ್ಟದಾಗಿ, ಅಸಹ್ಯವಾಗಿರಲೆಂದೇ ಮಾಡಿದಂತಿದೆ ಎಂದು ಬರೆದುಕೊಂಡಿದ್ದಾರೆ (ಏಜೆನ್ಸೀಸ್).