ಕಾಂಗ್ರೆಸ್ ಅಭ್ಯರ್ಥಿ ಮೀನಾಕ್ಷಿ ನಟರಾಜನ್ ನಾಮಪತ್ರ ಸಲ್ಲಿಸಿರುವುದು.
ನವದೆಹಲಿ: ಜೂನ್ 18ರಂದು ನಡೆಯಲಿರುವ ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡಮತದಾನದ ಭೀತಿಯಿಂದ ಕಾಂಗ್ರೆಸ್ ಪಕ್ಷ ಮಧ್ಯಪ್ರದೇಶ ವಿಧಾನಸಭೆಯ ತನ್ನ 62 ಶಾಸಕರನ್ನು ಚುನಾವಣೆ ಮುನ್ನ ದಿನದವರೆಗೂ ಕರ್ನಾಟಕಕ್ಕೆ ಸ್ಥಳಾಂತರಿಸಲು ಮುಂದಾಗಿದೆ ಎಂದು ವರದಿಯಾಗಿದೆ.
ಮಧ್ಯಪ್ರದೇಶದ ಮೂರು ರಾಜ್ಯಸಭಾ ಸ್ಥಾನಗಳಿಗೆ ನಡೆಯುವ ಚುನಾವಣೆ ನಡೆಯಲಿದೆ. 230 ಸದಸ್ಯ ಬಲದ ವಿಧಾನಸಭೆಯಲ್ಲಿ ಬಿಜೆಪಿ ಎರಡು ಮತ್ತು ಕಾಂಗ್ರೆಸ್ ಒಂದು ಸ್ಥಾನವನ್ನು ಸುಲಭವಾಗಿ ಗೆಲ್ಲಬಹುದು. ಆದರೆ ಸೋಮವಾರ ಮೂರನೇ ಸ್ಥಾನದ ಮೇಲೆ ಕಣ್ಣಿಟ್ಟು ಬಿಜೆಪಿ ಮೂರನೇ ಅರ್ಭ್ಯರ್ಥಿಯಾಗಿ ಮಹೇಶ್ ಕೆವಾತ್ ಅವರನ್ನು ಕಣಕ್ಕಿಳಿಸಿದೆ.
ಕಾಂಗ್ರೆಸ್ನಿಂದ ಒಂದು ಸ್ಥಾನಕ್ಕೆ ಮೀನಾಕ್ಷಿ ನಟರಾಜನ್ ಅವರನ್ನು ಕಣಕ್ಕಿಳಿಸಿದೆ. ಅಡ್ಡ ಮತದಾನದ ಸಾಧ್ಯತೆಯ ಬಗ್ಗೆ ಕಾಂಗ್ರೆಸ್ ಚಿಂತಿತವಾಗಿದ್ದು, ತನ್ನೆಲ್ಲಾ ಶಾಸಕರನ್ನು ತಮ್ಮದೇ ಪಕ್ಷ ಆಡಳಿತವಿರುವ ಕರ್ನಾಟಕಕ್ಕೆ ಸ್ಥಳಾಂತರಿಲು ಸಿದ್ದವಾಗಿದೆ ಎನ್ನಲಾಗಿದೆ.
ಕಾಂಗ್ರೆಸ್ನ ಎಲ್ಲಾ ಶಾಸಕರು ಇಂದು ಮೊದಲು ವಿರೋಧ ಪಕ್ಷದ ನಾಯಕ ಉಮಾಂಗ್ ಸಿಂಘರ್ ಅವರ ಮನೆಗೆ ಧಾವಿಸಿದ್ದು, ಅಲ್ಲಿಂದ ಎಲ್ಲರೂ ಮಧ್ಯಾಹ್ನ 2.30ಕ್ಕೆ ಭೋಪಾಲ್ ಏರ್ಪೋರ್ಟ್ನಿಂದ ವಿಮಾನದಲ್ಲಿ ಬೆಂಗಳೂರಿಗೆ ಆಗಮಿಸಲಿದ್ದಾರೆ. ಅದಕ್ಕಾಗಿ ಕಾಂಗ್ರೆಸ್ 75 ಆಸನಗಳ ವಿಶೇಷ ಸ್ಟಾರ್ ಏರ್ಲೈನ್ಸ್ ವಿಮಾನವನ್ನು ಬುಕ್ ಮಾಡಿದೆ.
ಸಂಜೆ ಬೆಂಗಳೂರಿಗೆ ಆಗಮಿಸಲಿರುವ ಕಾಂಗ್ರೆಸದ ಶಾಸಕರು, ಇಂದಿನಿಂದು ಒಟ್ಟು 10 ದಿನಗಳ ಕಾಲ ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ತಂಗಲಿದ್ದಾರೆ. ಜೂನ್ 18 ರಂದು ಮತದಾನದ ಮೊದಲು ಭೋಪಾಲ್‌ಗೆ ವಾಪಸ್ ಆಗಿ ಮತದಾನ ಮಾಡಲಿದ್ದಾರೆ ಎನ್ನಲಾಗಿದೆ.
ಇನ್ನೂ ಮಧ್ಯಪ್ರದೇಶ ವಿಧಾನಸಭೆಯಿಂದ ರಾಜ್ಯಸಭೆಗೆ ಆಯ್ಕೆಯಾಗಲು ಅಭ್ಯರ್ಥಿಗೆ ಮೊದಲ ಪ್ರಾಶಸ್ತ್ಯದ ಮತಗಳು 58 ಬೇಕಾಗುತ್ತದೆ. 164 ಶಾಸಕರನ್ನು ಹೊಂದಿರುವ ಬಿಜೆಪಿ 116 ಮತಗಳೊಂದಿಗೆ ಎರಡು ಸ್ಥಾನಗಳನ್ನು ಗೆಲ್ಲುವುದು ಖಚಿತವಾಗಿದೆ. ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತರುಣ್ ಚುಗ್ ಮತ್ತು ರಜನೀಶ್ ಅಗರ್ವಾಲ್ ಅವರನ್ನು ಕಣಕ್ಕಿಳಿಸಿದೆ (ಏಜೆನ್ಸೀಸ್).