ನವದೆಹಲಿ: ಮುಂಬರುವ ರಾಜ್ಯಸಭಾ( Rajya Sabha) ದ್ವೈವಾರ್ಷಿಕ ಮತ್ತು ಉಪಚುನಾವಣೆಗಾಗಿ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಗುರುವಾರ 11 ಅಭ್ಯರ್ಥಿಗಳ ಮೊದಲ ಅಧಿಕೃತ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಆದರೆ, ಈ ಪ್ರಕಟಿತ ಪಟ್ಟಿಯಲ್ಲಿ ಕರ್ನಾಟಕದ ಯಾವುದೇ ಅಭ್ಯರ್ಥಿಗಳಿಗೆ ಸ್ಥಾನ ಸಿಗದಿರುವುದು ರಾಜ್ಯ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಪಕ್ಷದ ಅಧಿಕೃತ ಪತ್ರದ ಪ್ರಕಾರ, ಈ ಪಟ್ಟಿಯಲ್ಲಿ ತಳಮಟ್ಟದಿಂದ ಬಂದ ನಿಷ್ಠಾವಂತ ನಾಯಕರು ಹಾಗೂ ಇತ್ತೀಚೆಗಷ್ಟೇ ಪಕ್ಷ ಸೇರ್ಪಡೆಯಾದ ಪ್ರಮುಖರಿಗೆ ಮಣೆ ಹಾಕಲಾಗಿದೆ.
ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ತರುಣ್ ಚುಗ್ ಅವರಿಗೆ ಮಧ್ಯಪ್ರದೇಶದಿಂದ ಮತ್ತು ರಾಜಸ್ಥಾನದ ಪ್ರಭಾವಿ ನಾಯಕ ಡಾ. ಸತೀಶ್ ಪೂನಿಯಾ ಅವರಿಗೆ ರಾಜಸ್ಥಾನದಿಂದ ಟಿಕೆಟ್ ಘೋಷಿಸಲಾಗಿದೆ. ಮಹಿಳಾ ಪ್ರಾತಿನಿಧ್ಯಕ್ಕೆ ಆದ್ಯತೆ ನೀಡಿರುವ ಹೈಕಮಾಂಡ್, ಮಣಿಪುರ ಬಿಜೆಪಿ ರಾಜ್ಯಾಧ್ಯಕ್ಷೆ ಎ. ಶಾರದಾ ದೇವಿ ಹಾಗೂ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡಾ. ಅಲ್ಕಾ ಗುರ್ಜರ್ ಅವರಿಗೆ ಕಣಕ್ಕಿಳಿಯಲು ಅವಕಾಶ ಕಲ್ಪಿಸಿದೆ. ಇನ್ನುಳಿದಂತೆ ಗುಜರಾತ್‌ನಿಂದ ನಾಲ್ವರು ಹಾಗೂ ಅರುಣಾಚಲ ಪ್ರದೇಶದಿಂದ ಒಬ್ಬರನ್ನು ಕಣಕ್ಕಿಳಿಸಲಾಗಿದೆ.
ಬಂಡಾಯ ನಾಯಕನಿಗೆ ಒಲಿದ ಅದೃಷ್ಟ
ಒಡಿಶಾದಲ್ಲಿ ಇತ್ತೀಚೆಗಷ್ಟೇ ಬಿಜು ಜನತಾ ದಳ (ಬಿಜೆಡಿ) ತೊರೆದು ಕೇಸರಿ ಪಡೆಗೆ ಸೇರ್ಪಡೆಯಾಗಿದ್ದ ಪ್ರಮುಖ ನಾಯಕ ದೇಬಾಶೀಷ್ ಸಾಮಂತರಾಯ್ ಅವರಿಗೆ ಒಡಿಶಾ ರಾಜ್ಯಸಭಾ ಉಪಚುನಾವಣೆಗೆ ಟಿಕೆಟ್ ನೀಡುವ ಮೂಲಕ ಬಿಜೆಪಿ ದೊಡ್ಡ ಉಡುಗೊರೆ ನೀಡಿದೆ. ಇದು ಒಡಿಶಾದಲ್ಲಿ ಪ್ರಾದೇಶಿಕ ಪಕ್ಷವಾದ ಬಿಜೆಡಿಗೆ ಮತ್ತಷ್ಟು ಹಿನ್ನಡೆಯನ್ನು ಉಂಟುಮಾಡಲಿದೆ ಎಂದು ವಿಶ್ಲೇಷಿಸಲಾಗಿದೆ. ಪಕ್ಷಕ್ಕಾಗಿ ವರ್ಷಗಳಿಂದ ದುಡಿದ ನಿಷ್ಠಾವಂತ ಕಾರ್ಯಕರ್ತರನ್ನು ಗುರುತಿಸಿ ಈ ಆಯ್ಕೆ ಮಾಡಲಾಗಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ಪ್ರಸ್ತುತ 245 ಸದಸ್ಯ ಬಲದ ಮೇಲ್ಮನೆಯಲ್ಲಿ ಬಿಜೆಪಿ 113 ಸದಸ್ಯರನ್ನು ಹೊಂದಿದ್ದು, ಎನ್‌ಡಿಎ ಮೈತ್ರಿಕೂಟದ ಒಟ್ಟು ಬಲ 148 ರಷ್ಟಿದೆ. ಜೂನ್ ಮತ್ತು ನವೆಂಬರ್ ತಿಂಗಳಲ್ಲಿ ಪ್ರಮುಖ ನಾಯಕರ ನಿವೃತ್ತಿಯಿಂದ ತೆರವಾಗಲಿರುವ ಸ್ಥಾನಗಳಿಗೆ ಈ ಚುನಾವಣೆಗಳು ನಡೆಯುತ್ತಿದೆ.