ತಮಿಳುನಾಡು ಸಿಎಂ ವಿಜಯ್ (ಎಡ), ಹಿರಿಯ ನಟ ರಜಿನಿಕಾಂತ್ (ಬಲ)
- ವಿಜಯ್ ಚುನಾವಣೆ ಗೆಲುವಿನ ಬಗ್ಗೆ ಸೂಪರ್ಸ್ಟಾರ್ ರಜಿನಿಕಾಂತ್ ಓಪನ್ ಟಾಕ್
- ಮಾಜಿ ಸಿಎಂ ಎಂ.ಕೆ. ಸ್ಟಾಲಿನ್ ಭೇಟಿ ಬಳಿಕ ಊಹಾಪೋಹಗಳು ಸೃಷ್ಟಿ
- ವಿಜಯ್ ಮೇಲೆ ನನಗೆ ಅಸೂಯೆ ಇಲ್ಲ ಎಂದ ರಜಿನಿ
ಚೆನ್ನೈ: ತಮಿಳುನಾಡು ಸಿಎಂ ಆಗಿರುವ ವಿಜಯ್ ಚುನಾವಣೆಯಲ್ಲಿ ಗೆದ್ದಿರುವುದಕ್ಕೆ ನನಗೆ ಯಾವ ಅಸೂಯೆಯೂ ಇಲ್ಲ ಎಂದು ತಮಿಳು ಚಿತ್ರರಂಗದ ಹಿರಿಯ ನಟ ರಜಿನಿಕಾಂತ್ ಟೀಕಾಕಾರರ ಮುಖಕ್ಕೆ ಹೊಡೆದಂತೆ ಹೇಳಿದ್ದಾರೆ.
ಭಾನುವಾರ (ಮೇ.17) ಚೆನ್ನೈನ ಪೋಯಸ್ ಗಾರ್ಡನ್‌ನಲ್ಲಿರುವ ತಮ್ಮ ನಿವಾಸದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ರಜಿನಿಕಾಂತ್, ಮಾಜಿ ಸಿಎಂ ಎಂ.ಕೆ. ಸ್ಟಾಲಿನ್ ಅವರನ್ನು ಭೇಟಿಯಾಗಿ ಬಂದ ಮೇಲೆ ಸಾಕಷ್ಟು ಟೀಕೆಗಳು, ಇಲ್ಲ-ಸಲ್ಲದ ವಿಷಯಗಳು ಹುಟ್ಟಿಕೊಂಡಿವೆ. ಅಸಲಿಗೆ, ಇದೆಲ್ಲ ಸುಳ್ಳು. ಚುನಾವಣೆಯಲ್ಲಿ ಸೋತ ಕಾರಣ ಅವರನ್ನು ನೋಡಲು ಹೋಗಿದ್ದೆ ಅಷ್ಟೇ ಎಂದರು.
ಹೊಟ್ಟೆಕಿಚ್ಚು ಏಕೆ?
ಅನೇಕರು ವಿಜಯ್ ಚುನಾವಣೆ ಗೆದ್ದಿದ್ದು ರಜನಿ ಅವರಿಗೆ ಇಷ್ಟವಿಲ್ಲ. ಇದು ನಟನಿಗೆ ಹೊಟ್ಟೆಕಿಚ್ಚು ಉಂಟುಮಾಡಿದೆ ಎನ್ನುತ್ತಿದ್ದಾರೆ. ಅಷ್ಟಕ್ಕೂ, ನನಗ್ಯಾಕೆ ವಿಜಯ್ ಮೇಲೆ ಅಸೂಯೆ? ಅವರ ಗೆಲುವು ನನಗೆ ಆಶ್ಚರ್ಯ ಹಾಗೂ ಖುಷಿ ಎರಡನ್ನೂ ತಂದಿತು. ನಮ್ಮ ಸಿಎಂ ಬಗ್ಗೆ ಆ ರೀತಿ ಏನೂ ಇಲ್ಲ. ನಾನು ರಾಜಕೀಯದಲ್ಲೇ ಇಲ್ಲ ಎಂದಮೇಲೆ ನನಗೇಕೆ ಅಸೂಯೆ ಕಾಡಲಿದೆ ಎಂದರು.
2021ರ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದಿದ್ರೆ...
ವಿಧಾನಸಭೆ ಚುನಾವಣೆಯ ಬಳಿಕ ಸೋತ ಎಂ.ಕೆ. ಸ್ಟಾಲಿನ್ ಅವರನ್ನು ಭೇಟಿಯಾದ ಬೆನ್ನಲ್ಲೇ ಇಂತಹ ಹಲವು ಊಹಾಪೋಹಗಳು, ವದಂತಿಗಳು ನನ್ನ ವಿರುದ್ಧ ಹರಿದಾಡಿದವು. ಕುಲತೂರು ಕ್ಷೇತ್ರದಲ್ಲಿ ಸೋಲುಂಡ ಸ್ಟಾಲಿನ್ ನೋಡಿ ನನಗೆ ಬೇಸರವಾಯಿತು. ಅದಕ್ಕೆ ಭೇಟಿ ಮಾಡಿದೆ. ಇನ್ನೊಬ್ಬರ ಬಗ್ಗೆ ಏನೇನೋ ಹೇಳೋದಕ್ಕೆ, ಸುಖಾಸುಮ್ಮನೆ ಯಾವುದೋ ವಿಷಯಕ್ಕೆ ಮೂಗು ತೂರಿಸುವಷ್ಟು ಚೀಪ್ ಈ ರಜಿನಿ ಅಲ್ಲ ಎಂದರು.
ನನಗೂ ವಿಜಯ್ಗೆ 25 ವರ್ಷಗಳ ವಯಸ್ಸಿನ ಅಂತರವಿದೆ. ಹೀಗಿದ್ದಮೇಲೆ ಅವರ ಮೇಲೆ ನಾನು ಅಸೂಯೆ ಪಡುವ ಮಾತೇ ಇಲ್ಲ. ಸಿಎಂ ಅವರಿಂದ ಸಾಕಷ್ಟು ನಿರೀಕ್ಷೆಗಳಿವೆ. ವಿಜಯ್ಗೆ ಶುಭವಾಗಲಿ. ಇದೇ ನಾನು 2021ರಲ್ಲಿ ನಡೆದ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದಿದ್ದರೆ ಖಂಚಿತ ಅಂದು ಗೆಲುವು ನೋಡುತ್ತಿದ್ದೆ ಎಂದು ಹೇಳಿದರು,(ಏಜೆನ್ಸೀಸ್).