- ವಿಚಿತ್ರ ಕಳ್ಳತನದ ಕೇಸ್ ಕಂಡು ಪೊಲೀಸರೇ ಶಾಕ್
- 'ಉಂಡು ಹೋದ ಕೊಂಡು ಹೋದ' ಎಂಬ ಕನ್ನಡದ ಪ್ರಸಿದ್ಧ ಗಾದೆಯನ್ನು ನೆನಪಿಸುವ ಪ್ರಕರಣವಿದು
Theft Case: ಸಾಮಾನ್ಯವಾಗಿ ಖದೀಮ ಅಥವಾ ಕಳ್ಳರ ಗ್ಯಾಂಗ್ ಮೊದಲು ಯಾವುದೇ ಕಚೇರಿ, ಮನೆಗಳು, ಅಂಗಡಿಗಳ ದರೋಡೆಗೆ ನುಗ್ಗಿದರೆ, ಎಷ್ಟು ಬೇಗ ಸಾಧ್ಯವೋ ಅಷ್ಟು ವೇಗವಾಗಿ ಕೈಗೆ ಸಿಕ್ಕಿದ್ದನ್ನೆಲ್ಲ ದೋಚಿಕೊಂಡು ಪರಾರಿಯಾಗುತ್ತಾರೆ. ಆದ್ರೆ, ಇಲ್ಲೊಂದು ವಿಚಿತ್ರ ಲೂಟಿ ಪ್ರಕರಣದಲ್ಲಿ ಮೊದಲು ತೃಪ್ತಿಯಾಗುವ ಮಟ್ಟಿಗೆ ತಿಂದು, ನಂತರ ಕದ್ದು ಓಡಿಹೋಗಿರುವ ಕಳ್ಳರ ಕೈಚಳಕ ಕಂಡು ಪೊಲೀಸರೇ ಅಕ್ಷರಶಃ ಬೆರಗಾಗಿದ್ದಾರೆ.
ಈ ವಿಚಿತ್ರ ಘಟನೆ ರಾಜಸ್ಥಾನದ ಜಲಾವದ್ ಜಿಲ್ಲೆಯಲ್ಲಿ ವರದಿಯಾಗಿದ್ದು, ಮನೆಯ ಮಾಲೀಕ ಹರ್ಜೀತ್ ಸಿಂಗ್ ತನ್ನ ಕುಟುಂಬದೊಂದಿಗೆ ಕ್ಯಾನ್ಸರ್ ಚಿಕಿತ್ಸೆಗಾಗಿ ಮುಂಬೈಗೆ ಹೋಗಿರುವುದನ್ನು ಗಮನಿಸಿದ ಖತರ್ನಾಕ್ ಕಳ್ಳರ ಗ್ಯಾಂಗ್ನ ಕೆಲಸ ಎಂಬುದು ಪೊಲೀಸರಿಗೆ ಸ್ಪಷ್ಟವಾಗಿದೆ. ಯಾರೂ ಇಲ್ಲದೇ ಬಿಕೋ ಎನ್ನುತ್ತಿದ್ದ ಮನೆಯ ಬೀಗಗಳನ್ನು ಮುರಿದು ಮಧ್ಯರಾತ್ರಿಯಲ್ಲಿ ಎಂಟ್ರಿಕೊಟ್ಟ ಖದೀಮರು, ತಮ್ಮ ಕೆಲಸವನ್ನು ಭಯಪಡದೆ, ಯಾವುದೇ ಆತುರವಿಲ್ಲದೆ ಮಾಡಿ ಮುಗಿಸಿರುವುದು ಖಾಕಿಗೆ ಗೊತ್ತಾಗಿದೆ.
ಬೀಗ ಒಡೆದು ಮನೆಗೆ ನುಗ್ಗಿದ ಕಳ್ಳರು, ಮೊದಲು ಹೋಗಿರುವುದೇ ಅಡುಗೆ ಮನೆಗೆ. ಲೂಟಿಕೋರರ ಈ ವಿಚಿತ್ರ ವರ್ತನೆ ಪೊಲೀಸರನ್ನು ಆಶ್ಚರ್ಯಗೊಳಿಸಿದೆ. ಚಿನ್ನ, ನಗದು ಮತ್ತು ದುಬಾರಿ ವಸ್ತುಗಳನ್ನು ನೋಡಿದ ಖದೀಮರು, ಅದಕ್ಕೆ ಮೊದಲು ಕೈಹಾಕದೇ, ಅಡುಗೆ ಕೋಣೆಯಲ್ಲಿ ತಿನ್ನಲು ಏನಿದೆ ಎಂದು ಕಣ್ಣಾಡಿಸಿದ್ದಾರೆ. ಆಗ ಅವರ ಕಣ್ಣಿಗೆ ಬಿದ್ದಿದ್ದೇ ಕ್ರೇಟ್ಗಟ್ಟಲೇ ಇದ್ದ ಮೊಟ್ಟೆ. ಹೊಟ್ಟೆ ತುಂಬುವಷ್ಟು ಮೊಟ್ಟೆಗಳನ್ನು ಹೊಡೆದು ಆಮ್ಲೆಟ್ ಮಾಡಿಕೊಂಡು ತಿಂದ ಬಳಿಕವೇ ನಿಧಾನವಾಗಿ ಇಡೀ ಮನೆಯನ್ನು ದೋಚಿರುವುದು ಸ್ಪಷ್ಟವಾಗಿದೆ.
ಚಿನ್ನಾಭರಣ, ನಗದು ಮತ್ತು ದುಬಾರಿ ಟಿವಿಯನ್ನು ಹೊತ್ತು ಪರಾರಿಯಾಗಿದ್ದಾರೆ. ಬೆಳಗ್ಗೆ ಮನೆಯ ಬೀಗ ಮುರಿದಿರುವುದನ್ನು ಕಂಡ ಸ್ಥಳೀಯರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಖಾಕಿ ಪಡೆ, ಮನೆಯ ಮಾಲೀಕ ಹರ್ಜೀತ್ ಸಿಂಗ್ ಅವರಿಗೆ ಮಾಹಿತಿ ನೀಡಿ, ಅವರ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು, ತನಿಖೆ ಆರಂಭಿಸಿದ್ದಾರೆ. ಈ ಲೂಟಿಯಲ್ಲಿ ಯಾರೆಲ್ಲ ಭಾಗಿಯಾಗಿದ್ದಾರೆ ಎಂಬುದನ್ನು ಶೀಘ್ರವೇ ಪತ್ತೆಹಚ್ಚಿ, ಅವರಿಗೆ ಶಿಕ್ಷೆ ಕೊಡಿಸುವುದಾಗಿ ಪೊಲೀಸರು ಭರವಸೆ ನೀಡಿದ್ದಾರೆ,(ಏಜೆನ್ಸೀಸ್).