Rajasthan 77 year old man serving water to travellers(AI Image)
- ಬಿಸಿಲಲ್ಲಿ ಬಾಯಾರಿದ ಪ್ರಯಾಣಿಕರಿಗೆ ನಿತ್ಯ ನೀರನ್ನು ಕೊಡುವ ಅಜ್ಜ
- 77 ವರ್ಷದ ಥಾಣಾ ರಾಮ್ ಕಡ್ವಾಸ್ರಾ ಎಂಬ ವೃದ್ಧನ ಕಾರ್ಯಕ್ಕೆ ಜನರಿಂದ ಮೆಚ್ಚುಗೆ
- 21 ವರ್ಷದಿಂದ ಪ್ರಯಾಣಿಕರಿಗೆ ನೀರು ನೀಡುವ ವೃದ್ಧ
Rajasthan 77 year old man serving water to travellers: ಮರುಭೂಮಿಯ ಪ್ರದೇಶವಾದ ರಾಜಸ್ಥಾನದಲ್ಲಿ ತೀವ್ರ ತಾಪಮಾನವಿರುತ್ತದೆ. ಮುಂಗಾರು ಶುರುವಾಗುವುದೇ ಜುಲೈ ಮಾಸದಲ್ಲಿ. ಇಂತಹ ಸಮಯದಲ್ಲಿ ಊರಿಂದ ಊರಿಗೆ ಬಸ್ನಲ್ಲಿ ಪ್ರಯಾಣಿಸುವವರಿಗೆ ಕೆಲವೊಂದು ಕಡೆಗಳಲ್ಲಿ ನೀರು ಸಿಗುವುದೇ ಇಲ್ಲ. ಅಂತವರ ದಾಹವನ್ನು ಥಣಿಸಲು ಭಗೀರಥನ ರೂಪದಲ್ಲಿ ವೃದ್ಧರೊಬ್ಬರು ಮಾಡುತ್ತಿರುವ ಸಮಾಜಮುಖಿ ಕಾರ್ಯವೊಂದು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ
ಹೌದು, 77 ವರ್ಷದ ಥಾಣಾ ರಾಮ್ ಕಡ್ವಾಸ್ರಾ ಎಂಬ ವೃದ್ಧ ಬಾರ್ಮರ್-ಬಟಾಡು ಮಾರ್ಗದಲ್ಲಿ ಸಂಚರಿಸುವ ಬಸ್ ಪ್ರಯಾಣಿಕರಿಗೆ ಉಚಿತವಾಗಿ ಕುಡಿಯುವ ನೀರಿನ ವ್ಯವಸ್ಥೆಯನ್ನು ತಮ್ಮ ಕರ್ತವ್ಯವನ್ನಾಗಿ ಮಾಡಿಕೊಂಡಿದ್ದಾರೆ. ಅವರ ಈ ಮಹತ್ವದ ಕಾರ್ಯವನ್ನು ಮೋಹನ್ ಬಲಿಯಾರ ಎಂಬ ವ್ಯಕ್ತಿ ವಿಡಿಯೋ ಮಾಡಿ, ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿರುವುದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
ವಿಡಿಯೋದಲ್ಲಿ ಏನಿದೆ?
ಮರುಭೂಮಿಯ ಮಾರ್ಗದಲ್ಲಿ ಬಿಳಿ ಬಣ್ಣದ ಬಸ್ವೊಂದು ನಿಂತಿದೆ. ಇಲ್ಲಿಗೆ ಬಕೆಟ್ನಲ್ಲಿ ನೀರಿದ್ದ ಪ್ಲಾಸ್ಟಿಕ್ ಬಾಟಲಿ ಹೊತ್ತು ತಂದ ಬಿಳಿ ಪಂಚೆ, ಶರ್ಟ್ನ ಬಡಕಲು ದೇಹದ ವೃದ್ಧ ಅದನ್ನು ಪ್ರಯಾಣಿಕರಿಗೆ ಹಂಚುತ್ತಿದ್ದಾರೆ. ಪ್ರಯಾಣಿಕರು ನೀರು ಕುಡಿದು ಖಾಲಿ ಮಾಡಿದ ಪ್ಲಾಸ್ಟಿಕ್ ವಾಪಸ್ ವೃದ್ಧನಿಗೆ ನೀಡುತ್ತಿದ್ದಾರೆ. ದಣಿದವರಿಗೆ ನೀರುಣಿಸುವ ವೃದ್ಧನ ಈ ನಿಸ್ವಾರ್ಥ ಸೇವೆ ಇಂದು ನಿನ್ನೆಯದಲ್ಲ. ಕಳೆದ 21 ವರ್ಷದಿಂದ ಯಾವುದೇ ಪ್ರಚಾರವಿಲ್ಲದೆ ನಡೆಸುತ್ತಿದ್ದಾರೆ ಎಂದು ಹಲವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಪ್ರಯಾಣಿಕರನ್ನು ತಂಪಾಗಿರಿಸುವ ವೃದ್ಧ
ಥಾಣಾ ರಾಮ್ ಕಡ್ವಾಸ್ರಾ ಅವರು ಕಳೆದ 21 ವರ್ಷಗಳಿಂದ ಬಾರ್ಮರ್‌ನ ಜನನಿಬಿಡ ರಸ್ತೆಯ ಉದ್ದಕ್ಕೂ ಮರುಭೂಮಿ ದಾಟುವ ಪ್ರಯಾಣಿಕರಿಗೆ, ಪ್ಲಾಸ್ಟಿಕ್ ಬಾಟಲ್ಗಳನ್ನು ಬಕೆಟ್ನಲ್ಲಿ ಹೊತ್ತು ತಂದು, ಒಬ್ಬೊಬ್ಬ ಪ್ರಯಾಣಿಕರಿಗೂ ನೀರನ್ನು ಕೆಲಸ ಮಾಡುತ್ತಾರೆ ಈ ವೃದ್ಧ . ಬೇಸಿಗೆಯಲ್ಲಿ ಇಲ್ಲಿನ ತಾಪಮಾನ 45 ರಿಂದ 47 ಡಿಗ್ರಿ ಸೆಲ್ಸಿಯಸ್ಗೆ ಏರಿಕೆಯಾಗುತ್ತದೆ. ಅಂತಹ ಸುಡುವ ಬಿಸಿಲಿನಲ್ಲೂ ಅವರ ದೈನಂದಿನದ ಕೆಲಸವನ್ನು ಮರೆಯದೇ, ಜನರನ್ನು ತಂಪಾಗಿಡುವ ಕೆಲಸ ಮಾಡುತ್ತಾರೆ ಎಂದು ಬರೆದುಕೊಂಡಿದ್ದಾರೆ.
ಈ ವೃದ್ಧನ ಈ ಕಾರ್ಯಕ್ಕೆ ಯಾರೂ ಹಣ ನೀಡೋದಿಲ್ಲ, ನೀರು ಕೊಡುತ್ತೇನೆ ಎನ್ನುವ ಬ್ಯಾನರ್ ಸಹ ಹಾಕಿಕೊಂಡಿಲ್ಲ. ಪ್ರಚಾರ ಮಾಡಲು ಸೋಶಿಯಲ್ ಮೀಡಿಯಾ ಇಲ್ಲ. ಆದರೂ ಸಹ ದಣಿದು, ಬಾಯಾರಿ ಬಂದ ಪ್ರಯಾಣಿಕರಿಗೆ, ದಾರಿ ಹೋಕರಿಗೆ ನೀರು ಕೊಡೋದನ್ನು ಮಾತ್ರ ಇವರು ಮರೆಯೋದಿಲ್ಲ. ಕಳೆದ 21 ವರ್ಷದಿಂದ ನಿಸ್ವಾರ್ಥದಿಂದ ಕೆಲಸ ಮಾಡುತ್ತಿದ್ದಾರೆ. ಇದು ನಿಜಕ್ಕೂ ಶ್ಲಾಘನೀಯ ಎಂದು ಹಲವರು ಕಾಮೆಂಟ್ ಮಾಡಿದ್ದಾರೆ, (ಏಜೆನ್ಸೀಸ್).