ರಾಜಸ್ಥಾನ ಹನಿಮೂನ್ ಕೊಲೆ ಕೇಸ್
- ಮೇಘಾಲಯ ಹನಿಮೂನ್ ಕೊಲೆ ಕೇಸ್ ನೆನಪಿಸಿದ ರಾಜಸ್ಥಾನ ಪ್ರಕರಣ
- ತನಿಖೆ ಆರಂಭಿಸಿದ ಖಾಕಿಗೆ ನೆನಪಾಯಿತು ರಾಜಾ ರಘುವಂಶಿ ಕಥೆ
- ಪ್ರಿಯಕರನ ಜತೆಗಿನ ಕಾಮದಾಟಕ್ಕೆ ಗಂಡನನ್ನೇ ಬಲಿಕೊಟ್ಟ ಪಾಪಿ
- ಮೂರು ತಿಂಗಳ ವಿವಾಹ ಕೊಲೆಯಲ್ಲಿ ಅಂತ್ಯ
ರಾಜಸ್ಥಾನ: ಕಳೆದ ವರ್ಷ ಜೂನ್ನಲ್ಲಿ ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದ ಮೇಘಾಲಯ ಹನಿಮೂನ್ ಕೊಲೆ (Honeymoon Murder) ಪ್ರಕರಣ ನಿಜಕ್ಕೂ ಹಲವು ಯುವಕರ ಮದುವೆ ಆಸೆಯನ್ನೇ ನುಚ್ಚನೂರು ಮಾಡಿತು. ತನ್ನ ಗಂಡ ರಾಜಾ ರಘುವಂಶಿಯನ್ನು ಮದುವೆಯಾದ ಬೆನ್ನಲ್ಲೇ ಮೇಘಾಲಯಕ್ಕೆ ಹನಿಮೂನ್ ನೆಪದಲ್ಲಿ ಕರೆದೊಯ್ದು, ಪ್ರಿಯಕರನ ಜತೆಗೂಡಿ ಭೀಕರವಾಗಿ ಕೊಲೆಗೈದ ಆರೋಪಿ ಸೋನಮ್ ಸದ್ಯ ಜೈಲಿನಲ್ಲಿ ಬಿಸಿಯಿಲ್ಲದ ಚಪಾತಿ ತಿಂತಿದ್ದಾಳೆ. ಮೂವರು ಸುಪಾರಿ ಹಂತಕರನ್ನು ನೇಮಿಸಿ ತನ್ನ ಗಂಡ ರಾಜಾನಿಗೆ ಗುಂಡಿ ತೋಡಿದ ಈಕೆಯ ಪಾಪದ ಕೃತ್ಯ ಮಾಸುವ ಮುನ್ನವೇ ಇಂತದ್ದೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ.
ಅದು ಮೇಘಾಲಯ ಹನಿಮೂನ್ ಕೊಲೆ, ಇದು...
ಕಳೆದ ಶುಕ್ರವಾರ (ಜ.30) ಆಗಷ್ಟೇ ಮದುವೆಯಾಗಿದ್ದ ನವಜೋಡಿ ಆಶಿಶ್ ಮತ್ತು ಅಂಜು, ವಾಕಿಂಗ್ ಹೋಗಲೆಂದು ರಸ್ತೆಗಿಳಿದಿದ್ದೇ ದೊಡ್ಡ ಅನಾಹುತವೇ ಸಂಭವಿಸಿತು. ಪತಿಗೆ ವೇಗವಾಗಿ ಬಂದ ಕಾರೊಂದು ರಭಸವಾಗಿ ಗುದ್ದಿದ ಪರಿಣಾಮ ಆತ ಸ್ಥಳದಲ್ಲೇ ರಕ್ತದ ಮಡುವಿನಲ್ಲಿ ಮೃತಪಟ್ಟರೆ, ಕಳ್ಳರು ಅಂಜು ಬಳಿಯಿದ್ದ ಚಿನ್ನಾಭರಣಗಳನ್ನು ಕದ್ದು ಪರಾರಿಯಾದ ಪ್ರಕರಣವನ್ನು ಹಿಟ್ ಅಂಡ್ ರನ್ ಕೇಸ್ನಡಿ ತನಿಖೆ ಮಾಡಿದ ಖಾಕಿ ಪಡೆಗೆ ಇದು ಎರಡನೇ ಹನಿಮೂನ್ ಕೊಲೆ ಕೇಸ್ ಎಂಬುದು ಖಚಿತವಾಯಿತು. ಕಾರಣ, ಇದು ಕೂಡ ಆ ಕೇಸ್ ಅನ್ನೇ ಹೋಲುವಂತಿದೆ.
ಪತ್ನಿಯೇ ಮಾಸ್ಟರ್ಮೈಂಡ್
ಪೊಲೀಸರ ತನಿಖೆಯಲ್ಲಿ ಸ್ಫೋಟಕ ಸಂಗತಿ ಬಯಲಾಗಿದ್ದು, ಪತಿ ಅಪಘಾತದಲ್ಲಿ ಮೃತಪಟ್ಟರು ಎಂದಿದ್ದ ಅಂಜುನೇ ಈ ಕೊಲೆ ಹಿಂದಿರುವ ಮಾಸ್ಟರ್ಮೈಂಡ್ ಎಂಬುದು ಸಾಬೀತಾಗಿದೆ. ತನ್ನ ಪ್ರಿಯಕರ ಸಂಜು ಮತ್ತು ಆತನ ಸಹಚರರೊಂದಿಗೆ ಜತೆಗೂಡಿ ಪತಿಯ ಮೇಲೆ ಕಾರು ಹರಿಸುವಂತೆ ಅಂಜು ಹೇಳಿದ್ದಾಗಿ ವರದಿಯಾಗಿದೆ. ಇಷ್ಟೆಲ್ಲ ಮಾಡಿ, ತನಗೆ ಏನೂ ಗೊತ್ತಿಲ್ಲದಂತೆ ನಟಿಸಿದ ಕಿರಾತಕಿಯ ಅಸಲಿ ಮುಖವನ್ನು ಕಡೆಗೂ ರಾಜಸ್ಥಾನ ಪೊಲೀಸರು ಕಳಚಿಟ್ಟಿದ್ದು, ಕೊಲೆಗೆ ಕಾರಣವೇನು? ಎಂಬುದರ ಇಂಚಿಂಚೂ ಮಾಹಿತಿಯನ್ನು ಆಕೆಯಿಂದ ಕಲೆಹಾಕಿದ್ದಾರೆ.
ಅಪಘಾತದಲ್ಲಿ ಮೃತಪಟ್ಟ ಪತಿ ಆಶಿಶ್ ದೇಹದಲ್ಲಿ ಗಾಯಗಳಿದ್ದರೆ, ಚಿನ್ನಾಭರಣ ಕದ್ದು ಪರಾರಿಯಾದರು ಎಂದ ಅಂಜು ಮೈಮೇಲೆ ಒಂದೇ ಒಂದು ಗಾಯದ ಗುರುತೂ ಸಹ ಇಲ್ಲ. ಇದು ಪೊಲೀಸರ ಅನುಮಾನಗಳನ್ನು ಹೆಚ್ಚಿಸಿತು. ಈ ವೇಳೆ, ಆಕೆಯ ಫೋನ್ ಪರಿಶೀಲಿಸಿದ ಪೊಲೀಸರಿಗೆ, ಅದರಲ್ಲಿ ಸಂಜು ಎಂಬ ವ್ಯಕ್ತಿಯೊಂದಿಗೆ ಅಂಜು ಮದುವೆಯಾದ ಮೇಲೂ ಸಂಪರ್ಕದಲ್ಲಿರುವುದು ಖಚಿತವಾಗಿದೆ. ತನ್ನ ಮನೆಯ ಹತ್ತಿರದಲ್ಲೇ ವಾಸವಿದ್ದ ಈತನೊಂದಿಗೆ ಅಂಜು ಆಗಾಗ್ಗೆ ಕಾಲ್ ಮಾಡಿ ಮಾತನಾಡುತ್ತಿದ್ದಳು.
ಆ ಕಾರಣಕ್ಕೆ ಕೊಲೆಯ ಸಂಚು!
ಮೂರು ತಿಂಗಳ ಹಿಂದೆಯೇ ಆಶಿಶ್ ಜತೆ ಮದುವೆಯಾಗಿದ್ದ ಅಂಜು, ಗಂಡನೊಂದಿಗೆ ಖುಷಿಯಿಂದ ಸಂಸಾರ ಮಾಡುತ್ತಿರಲಿಲ್ಲ ಎನ್ನಲಾಗಿದೆ. ಈ ಮಧ್ಯೆಯೇ, ತನ್ನ ತವರಿಗೆ ಹೋಗಿದ್ದ ಯುವತಿ, ಪ್ರಿಯಕರನೊಂದಿಗೆ ಪತಿಯನ್ನು ಕೊಲೆಗೈಯಲು ಸಂಚು ರೂಪಿಸಿದ್ದಾಳೆ ಎಂದು ಹೇಳಲಾಗಿದೆ. ಅಂತೆಯೇ, ಪತಿಯನ್ನು ಊಟದ ಬಳಿಕ ವಾಕಿಂಗ್ ಹೋಗೋಣ ಎಂದು ರಸ್ತೆಯ ತುದಿಗೆ ಕರೆತಂದ ಅಂಜು, ತನ್ನ ಪ್ರಿಯಕರ ಮತ್ತು ಆತನ ಮೂವರು ಸಹಚರರಿಗೆ ಸ್ಥಳಕ್ಕೆ ಬರಲು ಹೇಳಿ, ಪ್ಲ್ಯಾನ್ ಮಾಡಿದಂತೆಯೇ ಕೊಲೆ ಮಾಡಿಸಿದ್ದಾಳೆ.
ಆ್ಯಕ್ಸಿಡೆಂಟ್ ಎಂದು ಬಿಂಬಿಸಿ...
ಅಂಜು ಪತಿ ಆಶಿಶ್ನ ವಾಕಿಂಗ್ ಕರೆದುಕೊಂಡು ಬರುತ್ತಿದ್ದ ಮೊದಲೇ ಸಜ್ಜಾಗಿದ್ದ ಪಾಪಿಗಳು, ಗಿಡದ ಮರೆಯಲ್ಲಿ ಅಡಗಿ ಕುಳಿತಿದ್ದರು. ಏಕಾಏಕಿ ಆಶಿಶ್ ಮೇಲೆ ಎರಗಿದ ಕಿಡಿಗೇಡಿಗಳು, ಅವರ ಕತ್ತುಹಿಸುಕಿ, ಮನಬಂದಂತೆ ಥಳಿಸಿ, ಕಡೆಗೆ ಉಸಿರುಗಟ್ಟಿಸಿ ಸಾಯಿಸಿದ್ದಾರೆ. ಬಳಿಕ ಇದೊಂದು ಅಪಘಾತ ಎಂದು ಬಿಂಬಿಸಲು ಕಾರಿನಲ್ಲಿ ಗುದ್ದಿದ್ದಾರೆ. ಈ ವೇಳೆ, ತನ್ನ ಬಳಿಯಿದ್ದ ಚಿನ್ನಾಭರಣ, ಮೊಬೈಲ್ ಫೋನ್ ಕೊಟ್ಟು ಕಳುಹಿಸಿದ ಅಂಜು, ನಂತರ ಸ್ಥಳದಲ್ಲಿ ಕುಸಿದು ಬಿದ್ದವಳಂತೆ ನಟಿಸಿದ್ದಾಳೆ.
ಪ್ರಸ್ತುತ, ಕೊಲೆ ಪ್ರಕರಣದ ನಾಲ್ವರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ತನಿಖೆಯನ್ನು ಇನ್ನಷ್ಟು ಚುರುಕುಗೊಳಿಸಿದ್ದಾರೆ. ಒಟ್ಟಿನಲ್ಲಿ, ಪ್ರಿಯಕರನೊಂದಿಗೆ ಬಾಳಲು ಅಮಾಯಕನ ಜೀವವನ್ನು ಬಲಿಕೊಟ್ಟ ಈ ಪಾಪಿ ಯುವತಿಗೆ ಆಶಿಶ್ ಕುಟುಂಬಸ್ಥರ ಹಿಡಿಶಾಪ ಬಿದ್ದಿದೆ. ತಮ್ಮ ಮಗನನ್ನು ಕಳೆದುಕೊಂಡ ಹೆತ್ತವರು, ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದಾರೆ,(ಏಜೆನ್ಸೀಸ್).