ರಾಜಸ್ಥಾನ ಹನಿಮೂನ್ ಕೊಲೆ ಕೇಸ್
- ಮೇಘಾಲಯ ಹನಿಮೂನ್ ಕೊಲೆ ಕೇಸ್ ನೆನಪಿಸಿದ ರಾಜಸ್ಥಾನ ಪ್ರಕರಣ
- ತನಿಖೆ ಆರಂಭಿಸಿದ ಖಾಕಿಗೆ ನೆನಪಾಯಿತು ರಾಜಾ ರಘುವಂಶಿ ಕಥೆ
- ಪ್ರಿಯಕರನ ಜತೆಗಿನ ಕಾಮದಾಟಕ್ಕೆ ಗಂಡನನ್ನೇ ಬಲಿಕೊಟ್ಟ ಪಾಪಿ
- ವಿಧಿಯಾಟವೇ ಬೇರೆ ಅನ್ನೋದಕ್ಕೆ ಇದೇ ಜ್ವಲಂತ ಸಾಕ್ಷಿ
ರಾಜಸ್ಥಾನ: ಕಳೆದ ಶುಕ್ರವಾರ (ಜ.30) ಆಗಷ್ಟೇ ಮದುವೆಯಾಗಿದ್ದ ಅಂಜಲಿ, ತನ್ನ ಪತಿ ಆಶಿಶ್ನನ್ನು ಕೊಲೆಗೈದ ಘಟನೆ ಸದ್ಯ ದೇಶದ ಜನತೆಯನ್ನು ಅಕ್ಷರಶಃ ಬೆಚ್ಚಿಬೀಳಿಸಿದೆ. ಈ ಪ್ರಕರಣವನ್ನು ನೋಡಿದ ಜನರು, ಇದು ಎರಡನೇ ಹನಿಮೂನ್ ಹತ್ಯೆ ಎಂದು ಕರೆಯುತ್ತಿರುವುದು ದುರಂತ. ಥೇಟ್ ಕಳೆದ ವರ್ಷ ಮೇಘಾಲಯದಲ್ಲಿ ಸಂಭವಿಸಿದ ಕೊಲೆಯಂತೆಯೇ ಈ ಘಟನೆ ಕೂಡ ನಡೆದಿರುವುದು ಅಚ್ಚರಿ.
ಪೊಲೀಸರ ತನಿಖೆಯಲ್ಲಿ ಸ್ಫೋಟಕ ಸಂಗತಿ ಬಯಲಾಗಿದ್ದು, ಪತಿ ಅಪಘಾತದಲ್ಲಿ ಮೃತಪಟ್ಟರು ಎಂದಿದ್ದ ಅಂಜುನೇ ಈ ಕೊಲೆ ಹಿಂದಿರುವ ಮಾಸ್ಟರ್ಮೈಂಡ್ ಎಂಬುದು ಈಗ ಸಾಬೀತಾಗಿದೆ. ತನ್ನ ಪ್ರಿಯಕರ ಸಂಜಯ್ ಮತ್ತು ಆತನ ಸಹಚರರ ಜತೆಗೂಡಿ ಪತಿಯ ಮೇಲೆ ಕಾರು ಹರಿಸುವಂತೆ ಅಂಜು ಹೇಳಿದ್ದಾಗಿ ವರದಿಯಾಗಿದೆ. ಇಷ್ಟೆಲ್ಲ ಮಾಡಿ, ತನಗೆ ಏನೂ ಗೊತ್ತಿಲ್ಲದಂತೆ ನಟಿಸಿದ ಕಿರಾತಕಿಯ ಅಸಲಿ ಮುಖವನ್ನು ಕಡೆಗೂ ರಾಜಸ್ಥಾನ ಪೊಲೀಸರು ಕಳಚಿಟ್ಟಿದ್ದು, ಕೊಲೆಗೆ ಕಾರಣವೇನು? ಎಂಬುದರ ಇಂಚಿಂಚೂ ಮಾಹಿತಿಯನ್ನು ಆಕೆಯಿಂದ ಬಾಯ್ಬಿಡಿಸಿದ್ದಾರೆ.
ಮೂರು ತಿಂಗಳ ಹಿಂದೆಯೇ ಆಶಿಶ್ ಜತೆ ಮದುವೆಯಾಗಿದ್ದ ಅಂಜು, ಗಂಡನೊಂದಿಗೆ ಖುಷಿಯಿಂದ ಸಂಸಾರ ಮಾಡುತ್ತಿರಲಿಲ್ಲ ಎನ್ನಲಾಗಿದೆ. ಈ ಮಧ್ಯೆಯೇ, ತನ್ನ ತವರಿಗೆ ಹೋಗಿದ್ದ ಯುವತಿ, ಪ್ರಿಯಕರನೊಂದಿಗೆ ಪತಿಯನ್ನು ಕೊಲೆಗೈಯಲು ಸಂಚು ರೂಪಿಸಿದ್ದಳು. ಅಂತೆಯೇ, ಪತಿಯನ್ನು ಊಟದ ಬಳಿಕ ವಾಕಿಂಗ್ ಹೋಗೋಣ ಎಂದು ರಸ್ತೆಯ ತುದಿಗೆ ಕರೆತಂದ ಅಂಜು, ತನ್ನ ಪ್ರಿಯಕರ ಮತ್ತು ಆತನ ಮೂವರು ಸಹಚರರಿಗೆ ಸ್ಥಳಕ್ಕೆ ಬರಲು ಹೇಳಿ, ಪ್ಲ್ಯಾನ್ ಮಾಡಿದಂತೆಯೇ ಕೊಲೆ ಮಾಡಿಸಿದ್ದಾಳೆ.
ವಿಧಿ ಆಟವೇ ಬೇರೆ ಅನ್ನೋದು ಇದಕ್ಕೆ!
2018ರಲ್ಲಿ ಒಂದು ಹೋಟೆಲ್ನಲ್ಲಿ ವೈಟರ್ ಆಗಿ ಕೆಲಸ ಮಾಡಿಕೊಂಡಿದ್ದ ಸಂಜಯ್ನನ್ನು ಅಂಜು ಭೇಟಿ ಆಗಿದ್ದಳು. ಇಬ್ಬರ ನಡುವೆ ಕೆಲ ಸಮಯ ಮಾತುಕತೆ ಆಗಿದ್ದೇ ತಡ, ಸಂಜು ಆಕೆಗೆ ತನ್ನ ಮೊಬೈಲ್ ನಂಬರ್ ಕೊಟ್ಟಿದ್ದ. ಆದರೆ, ಆಗ ಯುವತಿ ಮೊಬೈಲ್ ಬಳುಸುತ್ತಿರಲಿಲ್ಲ. ಹೀಗಾಗಿ, ಇಬ್ಬರ ನಡುವಿನ ಕನೆಕ್ಷನ್ ಅಲ್ಲಿಗೆ ಕಟ್ ಆಗಿತ್ತು.
2024ರಲ್ಲಿ ರೀ-ಕನೆಕ್ಟ್!
2018ರಲ್ಲಿ ಮಾತನಾಡಿಸಿ ಹೋಗಿದ್ದ ಅಂಜು, ಅಲ್ಲಿಗೆ ತನ್ನನ್ನು ಮರೆತು ಹೋದಳು ಎಂದು ಭಾವಿಸಿದ್ದ ಸಂಜು, ತಾನಾಯಿತು ತನ್ನ ಪಾಡಾಯಿತು ಎಂದು ಕೆಲಸ ಮಾಡಿಕೊಂಡಿದ್ದ. ಆದರೆ, ವಿಧಿ ಆಟ ಏನಿತ್ತೋ, 2024ರಲ್ಲಿ ಹೊಸ ಮೊಬೈಲ್ ಖರೀದಿಸಿದ ಅಂಜಲಿ, ಸಂಜಯ್ ಕೊಟ್ಟಿದ್ದ ನಂಬರ್ ಸೇವ್ ಮಾಡಿಕೊಂಡು ಮತ್ತೆ ರೀ-ಕನೆಕ್ಟ್ ಆದಳು. ಇಲ್ಲಿಂದ ಇವರಿಬ್ಬರ ಲವ್ವಿಡವ್ವಿ ಜೋರಾಯಿತು.
ಲೆಕ್ಕಾಚಾರಗಳೇ ಭಿನ್ನ
ಒಂದೆಡೆ, ಸಂಜು-ಅಂಜು ಪ್ರೇಮ ಪ್ರಯಣದಲ್ಲಿ ತೇಲಾಡುತ್ತಿದ್ದರೆ, ಇತ್ತ ಅವರ ಕುಟುಂಸ್ಥರದ್ದು ಬೇರೆಯೇ ಪ್ಲ್ಯಾನ್ಗಳಿತ್ತು. 2025ರ ಅಕ್ಟೋಬರ್ 30ರಂದು ಆಶಿಶ್ಗೆ ಕೊಟ್ಟು ಮದುವೆ ಮಾಡಿದ ಅಂಜಲಿ ಹೆತ್ತವರು, ಆಕೆಯ ಬಳಿ ನಿನ್ನ ಅಭಿಪ್ರಾಯವೇನು ಎಂದು ಕೇಳಲಿಲ್ಲ. ಈಕೆಯೂ ತನ್ನ ಮನದಾಸೆಯನ್ನು ಬಿಚ್ಚಿ ಹೇಳಲಿಲ್ಲ. ಇವರಿಬ್ಬರ ತಪ್ಪಿನಿಂದ ಅನ್ಯಾಯವಾಗಿ ಆಶಿಶ್ ಕುಮಾರ್ ಜೀವ ಹೋಗಿದ್ದು ನಿಜಕ್ಕೂ ದುರಂತ ಎಂದೇ ಹೇಳಬಹುದು.
ಪ್ರಸ್ತುತ, ಕೊಲೆ ಪ್ರಕರಣದ ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ತನಿಖೆಯನ್ನು ಇನ್ನಷ್ಟು ಚುರುಕುಗೊಳಿಸಿದ್ದಾರೆ. ಒಟ್ಟಿನಲ್ಲಿ, ಪ್ರಿಯಕರನೊಂದಿಗೆ ಬಾಳಲು ಅಮಾಯಕನ ಜೀವವನ್ನು ಬಲಿಕೊಟ್ಟ ಈ ಪಾಪಿ ಯುವತಿಗೆ ಆಶಿಶ್ ಕುಟುಂಬಸ್ಥರ ಹಿಡಿಶಾಪ ಬಿದ್ದಿದೆ. ತಮ್ಮ ಮಗನನ್ನು ಕಳೆದುಕೊಂಡ ಹೆತ್ತವರು, ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದಾರೆ,(ಏಜೆನ್ಸೀಸ್).