Indian Railways | ಭಾರತೀಯ ರೈಲ್ವೆ 
ದೇಶ

ಟಿಕೆಟ್ ರದ್ದತಿಗೆ ಇನ್ಮುಂದೆ ಹಣ ವಾಪಸ್​ ಸಿಗಲ್ವಾ..? ರೈಲ್ವೆ ಪ್ರಯಾಣಿಕರೇ ಬದಲಾದ ಈ ನಿಯಮಗಳನ್ನು ಈಗಲೇ ಓದಿಕೊಳ್ಳಿ | Indian Railways

ನವದೆಹಲಿ: ಭಾರತೀಯ ರೈಲ್ವೆಯು (Indian Railways) ತನ್ನ ಟಿಕೆಟ್ ವಿತರಣೆ ಮತ್ತು ಮರುಪಾವತಿ ನೀತಿಯಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ತರಲು ಮುಂದಾಗಿದ್ದು, ಪ್ರಯಾಣಿಕರಿಗೆ ಸೀಟುಗಳ ಲಭ್ಯತೆಯನ್ನು ಹೆಚ್ಚಿಸುವ ಉದ್ದೇಶದಿಂದ ಈ ಹೊಸ ನಿಯಮಗಳನ್ನು ಜಾರಿ ಮಾಡಲಾಗುತ್ತಿದೆ.
ಪರಿಷ್ಕೃತ ನಿಯಮಗಳ ಪ್ರಕಾರ, ಟಿಕೆಟ್ ರದ್ದತಿ ಮತ್ತು ಮರುಪಾವತಿಯಲ್ಲಿ ಈಗ ಕಾಲಮಿತಿಯ ಆಧಾರದ ಮೇಲೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಪ್ರಮುಖ ಬದಲಾವಣೆಗಳು

ಹೊಸ ನಿಯಮದ ಅನ್ವಯ, ರೈಲು ಹೊರಡುವ ನಿಗದಿತ ಸಮಯಕ್ಕೆ ಎಂಟು ಗಂಟೆಗಳಿಗಿಂತ ಕಡಿಮೆ ಅವಧಿ ಇರುವಾಗ ಕಾಯ್ದಿರಿಸಿದ (Confirm) ಟಿಕೆಟ್‌ಗಳನ್ನು ರದ್ದುಗೊಳಿಸಿದರೆ, ಪ್ರಯಾಣಿಕರಿಗೆ ಯಾವುದೇ ಹಣ ಮರುಪಾವತಿ ದೊರೆಯುವುದಿಲ್ಲ. ಉಳಿದಂತೆ ರದ್ದತಿ ಸಮಯಕ್ಕೆ ಅನುಗುಣವಾಗಿ ಮರುಪಾವತಿಯ ಪ್ರಮಾಣ ಹೀಗಿರಲಿದೆ.
72 ಗಂಟೆಗಳಿಗಿಂತ ಮೊದಲು: ರೈಲು ನಿರ್ಗಮನಕ್ಕೆ 72 ಗಂಟೆಗಳಿಗಿಂತ ಹೆಚ್ಚಿನ ಸಮಯವಿರುವಾಗ ಟಿಕೆಟ್ ರದ್ದುಗೊಳಿಸಿದರೆ, ಫ್ಲಾಟ್ ರದ್ದತಿ ಶುಲ್ಕವನ್ನು ಮಾತ್ರ ಕಡಿತಗೊಳಿಸಿ ಉಳಿದ ಹಣವನ್ನು ಹಿಂದಿರುಗಿಸಲಾಗುತ್ತದೆ.
72 ರಿಂದ 24 ಗಂಟೆಗಳ ಅವಧಿ: ಪ್ರಯಾಣಕ್ಕೆ 72 ಗಂಟೆಗಳಿಂದ 24 ಗಂಟೆಗಳ ಮೊದಲು ಟಿಕೆಟ್ ರದ್ದು ಮಾಡಿದರೆ ಶೇ. 75 ರಷ್ಟು ಮೊತ್ತ ಮರುಪಾವತಿಯಾಗುತ್ತದೆ (ಶೇ. 25 ರಷ್ಟು ಕಡಿತ).
24 ರಿಂದ 8 ಗಂಟೆಗಳ ಅವಧಿ: ರೈಲು ಹೊರಡುವ 24 ಗಂಟೆಗಳಿಂದ ಎಂಟು ಗಂಟೆಗಳಿಗೂ ಮೊದಲು ಟಿಕೆಟ್ ರದ್ದು ಮಾಡಿದರೆ, ಪ್ರಯಾಣಿಕರು ಶೇ. 50 ರಷ್ಟು ಮಾತ್ರ ಮರುಪಾವತಿಗೆ ಅರ್ಹರಾಗಿರುತ್ತಾರೆ.

ರದ್ದತಿ ಪ್ರಕ್ರಿಯೆ ಸರಳೀಕರಣ

ಆಫ್‌ಲೈನ್ ಟಿಕೆಟ್ ಹೊಂದಿರುವ ಪ್ರಯಾಣಿಕರಿಗೆ ರೈಲ್ವೆ ಇಲಾಖೆಯು ದೊಡ್ಡ ಸಮಾಧಾನಕರ ಸುದ್ದಿ ನೀಡಿದ್ದು, ಇನ್ನು ಮುಂದೆ ಸಾರ್ವಜನಿಕರು ತಾವು ಟಿಕೆಟ್ ಬುಕ್ ಮಾಡಿದ ನಿಲ್ದಾಣಕ್ಕೇ ಹೋಗಬೇಕೆಂದಿಲ್ಲ, ಬದಲಾಗಿ ಯಾವುದೇ ರೈಲ್ವೆ ನಿಲ್ದಾಣದಿಂದ ಆಫ್‌ಲೈನ್ ಟಿಕೆಟ್‌ಗಳನ್ನು ರದ್ದುಗೊಳಿಸಬಹುದು. ಇದರೊಂದಿಗೆ, ಪ್ರಯಾಣಿಕರು ತಮ್ಮ ಬೋರ್ಡಿಂಗ್ ಪಾಯಿಂಟ್ ಬದಲಾಯಿಸುವ ಪ್ರಕ್ರಿಯೆಯನ್ನೂ ಸರಳಗೊಳಿಸಲಾಗಿದ್ದು, ಮೊಬೈಲ್ ಅಪ್ಲಿಕೇಶನ್ ಮೂಲಕ ಸುಲಭವಾಗಿ ನವೀಕರಿಸಬಹುದಾಗಿದೆ.

ಕೋಚ್ ಅಪ್‌ಗ್ರೇಡ್ ಸೌಲಭ್ಯ

ರೈಲ್ವೆಯು ಪ್ರಯಾಣಿಕ ಸ್ನೇಹಿ ಕ್ರಮವಾಗಿ ಕೋಚ್ ಅಪ್‌ಗ್ರೇಡ್ ಆಯ್ಕೆಯನ್ನು ಪರಿಚಯಿಸಿದ್ದು, ರೈಲು ಹೊರಡುವ 30 ನಿಮಿಷಗಳ ಮೊದಲು ಸೀಟುಗಳು ಲಭ್ಯವಿದ್ದರೆ, ಪ್ರಯಾಣಿಕರು ತಮ್ಮ ಕೋಚ್ ವರ್ಗವನ್ನು ಉನ್ನತ ದರ್ಜೆಗೆ (ಉದಾಹರಣೆಗೆ ಥರ್ಡ್ ಎಸಿಯಿಂದ ಫಸ್ಟ್ ಎಸಿಗೆ) ನವೀಕರಿಸಿಕೊಳ್ಳಬಹುದು. ಈ ಬದಲಾವಣೆಯನ್ನು ರೈಲ್ವೆಯ ಅಧಿಕೃತ ಮೊಬೈಲ್ ಅಪ್ಲಿಕೇಶನ್ ಮೂಲಕವೇ ಕ್ಷಣಾರ್ಧದಲ್ಲಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ(ಏಜೆನ್ಸೀಸ್​​).