ಸಿಎಂ ಮಮತಾ ಬ್ಯಾನರ್ಜಿ 
ದೇಶ

I-PAC ಮೇಲೆ ದಾಳಿ: ED ಮತ್ತು ಕೇಂದ್ರದ ವಿರುದ್ಧ ಸಮರ ಸಾರಿದ ಮಮತಾ ಬ್ಯಾನರ್ಜಿ; ಕೋಲ್ಕತ್ತಾ ಬೀದಿಯಲ್ಲಿ ಶಕ್ತಿ ಪ್ರದರ್ಶನ | CM Mamata Banerjee

ಕೋಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಕೆಲವೇ ತಿಂಗಳುಗಳು ಬಾಕಿ ಇರುವಾಗ ರಾಜಕೀಯ ಸಲಹಾ ಸಂಸ್ಥೆ I -PAC ಮುಖಸ್ಥ ಪ್ರತೀಕ್ ಜೈನ್ ಮನೆ & ಅವರ ಕಚೇರಿ ಮೇಲೆ ಕೇಂದ್ರದ ಜಾರಿ ನಿರ್ದೇಶನಾಲಯ ನಡೆಸಿದ ದಾಳಿ ವಿರುದ್ಧ ಸಮರ ಸಾರಿರುವ ಸಿಎಂ ಮಮತಾ ಬ್ಯಾನರ್ಜಿ(CM Mamata Banerjee) ಇಂದು(ಜ. 09) ಕೋಲ್ಕತ್ತಾದ ಬೀದಿಗಳಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ಮಾಡುವ ಮೂಲಕ ಶಕ್ತಿ ಪ್ರದರ್ಶಿಸಿದ್ದಾರೆ.
ನಿನ್ನೆ ಕೋಲ್ಕತ್ತಾ ಐ-ಪ್ಯಾಕ್ ಕಚೇರಿ ಮೇಲೆ ಇಡಿ ದಾಳಿ ನಡೆಸಿದ ಸಮಯದಲ್ಲಿ ತಾವೂ ಪೊಲೀಸ್ ಪಡೆಯೊಂದಿಗೆ ಲಗ್ಗೆಯಿಟ್ಟು ಪಕ್ಷಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ಅಲ್ಲಿಂದ ತೆಗೆದುಕೊಂಡು ಬಂದಿದ್ದರು. ಇಂದು ಪಕ್ಷದ ಹಿರಿಯ ನಾಯಕರು, ಸಚಿವರು, ಶಾಸಕರು, ಬೆಂಬಲಿಗರೊಂದಿಗೆ ಕೋಲ್ಕತ್ತಾದ 8 ಬಿ ಬಸ್ ನಿಲ್ದಾಣ ಪ್ರದೇಶದಿಂದ ಮೆರವಣಿಗೆಯನ್ನು ನಡೆಸಿದರು.
2026ರ ಚುನಾವಣೆಗೂ ಮುಂಚಿತವಾಗಿ ರಾಜಕೀಯ ಸೇಡಿಗಾಗಿ ಕೇಂದ್ರ ತನಿಖಾ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಂಡು ಪಕ್ಷದ ತಂತ್ರಗಾರಿಕೆ, ಅಭ್ಯರ್ಥಿಗಳ ಪಟ್ಟಿಯನ್ನು ಕದಿಯುತ್ತಿದೆ ಎಂದು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಟಿಎಂಸಿ ಬೆಂಬಲಿಗರು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರತಿಭಟನಾ ಮೆರವಣಿಗೆ ಭಾಗವಾಗಿ ಎಕ್ಸ್​ನಲ್ಲಿ ಪೋಸ್ಟ್​ ಹಾಕಿರುವ ಮಮತಾ ಬ್ಯಾನರ್ಜಿ, ಯಾವುದೇ ಹಣಕಾಸಿನ ತನಿಖೆಗೆ ಸಂಬಂಧಿಸ ಟಿಎಂಸಿ ಪಕ್ಷದ ಆಂತರಿಕ ದಾಖಲೆಗಳು, ಹಾರ್ಡ್​ ಡಿಸ್ಕ್​ಗಳು, ಗೌಪ್ಯ ಸಾಂಸ್ಥಿಕ ದಾಖಲೆಯ ದತ್ತಾಂಶಗಳನ್ನು ಇಡಿ ಸಂಸ್ಥೆ ಕದಿಯಲು ಪ್ರಯತ್ನಿಸಿದೆ ಎಂದು ಆರೋಪಿಸಿದ್ದಾರೆ.
ಮುಂದುವರೆದು ದೆಹಲಿಯಲ್ಲಿ ಪ್ರತಿಭಟಿಸಿದ ತಮ್ಮ ಪಕ್ಷದ ನಾಯಕರನ್ನು ಬಂಧಿಸಿದ್ದಕ್ಕೆ ಕಿಡಿಕಾರಿರುವ, ಗೃಹ ಸಚಿವರ ಕಚೇರಿಯ ಹೊರಗೆ ಪ್ರತಿಭಟಿಸುವ ತಮ್ಮ ಪ್ರಜಾಸತ್ತಾತ್ಮಕ ಹಕ್ಕನ್ನು ಚಲಾಯಿಸಿದ್ದಕ್ಕಾಗಿ ಚುನಾಯಿತ ಪ್ರತಿನಿಧಿಗಳನ್ನು ಬೀದಿಗೆ ಎಳೆದು ತರುವುದು ಕಾನೂನು ಜಾರಿಯಲ್ಲ. ಇದು ಸಮವಸ್ತ್ರದಲ್ಲಿರುವ ದುರಹಂಕಾರ. ಇದು ಪ್ರಜಾಪ್ರಭುತ್ವ, ಬಿಜೆಪಿಯ ಖಾಸಗಿ ಆಸ್ತಿಯಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಪ್ರಜಾಪ್ರಭುತ್ವ ಅಧಿಕಾರದಲ್ಲಿರುವವರ ಅನೂಕೂಲತೆ, ಸೌಕರ್ಯದ ಮೇಲೆ ಕಾರ್ಯನಿರ್ವಹಿಸಲ್ಲ. ಬಿಜೆಪಿಗರು ಪ್ರತಿಭಟನೆ ವೇಳೆ ರೆಡ್ ಕಾರ್ಪೆಟ್, ವಿಶೇಷ ಸವಲತ್ತು ನಿರೀಕ್ಷೆ ಮಾಡ್ತಾರೆ. ಆದರೆ ವಿರೋಧ ಪಕ್ಷದ ನಾಯಕರು ಧ್ವನಿ ಎತ್ತಿದ್ರೆ, ಬಂಧಿಸಿ ಅವಮಾನಿಸುತ್ತಾರೆ. ಇದು ಬಿಜೆಪಿಯ ದ್ವಿಮುಖ ನೀತಿಯನ್ನು ತೋರಿಸುತ್ತದೆ ಎಂದು ಕಿಡಿಕಾರಿದ್ದಾರೆ.
ನೀವು ನಮ್ಮನ್ನು ಗೌರವಿಸಿದ್ರೆ, ನಾವು ನಿಮ್ಮನ್ನು ಗೌರವಿಸುತ್ತೇವೆ. ಚುನಾಯಿತ ಪ್ರತಿನಿಧಿಗಳನ್ನು ಅವಮಾನಿಸುವ ಪ್ರಯತ್ನಗಳು ಸರಿಯಲ್ಲ. ನಾವು ಹಕ್ಕುಗಳಿಂದಲೇ ನಾಗರಿಕರು, ಯಾವುದೇ ಕುರ್ಚಿ, ಬ್ಯಾಡ್ಜ್ ಅಥವಾ ಅಧಿಕಾರದ ಸ್ಥಾನದ ಕರುಣೆಯಿಂದಲ್ಲ. ಯಾವುದೇ ಸರ್ಕಾರ, ಪಕ್ಷ ಅಥವಾ ಗೃಹ ಸಚಿವರು ಪ್ರಜಾಪ್ರಭುತ್ವದಲ್ಲಿ ಯಾರು ಘನತೆಗೆ ಅರ್ಹರು ಎಂಬುದನ್ನು ನಿರ್ಧರಿಸಲು ಸಾಧ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ (ಏಜೆನ್ಸೀಸ್).