Pinarayi Vijayan | ರಾಹುಲ್ ಗಾಂಧಿ ಹೇಳಿಕೆಗೆ ಪಿಣರಾಯಿ ವಿಜಯನ್ ತಿರುಗೇಟು
ತಿರುವನಂತಪುರಂ: ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ರಾಜಕೀಯ ಶೈಲಿಯು ಇಂಡಿಯಾ (INDIA) ಮೈತ್ರಿಕೂಟವನ್ನು ಬಲಪಡಿಸುತ್ತಿಲ್ಲ, ಬದಲಿಗೆ ಅದು ಬಿಜೆಪಿಗೆ ಸಹಾಯ ಮಾಡುವಂತಿದೆ ಎಂದು ಕೇರಳ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಪಿಣರಾಯಿ ವಿಜಯನ್ (Pinarayi Vijayan) ಶನಿವಾರ ತೀವ್ರವಾಗಿ ಟೀಕಿಸಿದ್ದಾರೆ.
ಕೇರಳದಲ್ಲಿನ ರಾಜಕೀಯ ವೈಷಮ್ಯದ ಹಿನ್ನೆಲೆಯಲ್ಲಿ ತಾವು ಪಿಣರಾಯಿ ವಿಜಯನ್ ಅವರನ್ನು ಅಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ರಾಹುಲ್ ಗಾಂಧಿ ಇತ್ತೀಚೆಗೆ ಮೈತ್ರಿಕೂಟದ ಸಭೆಯಲ್ಲಿ ಹೇಳಿದ್ದಕ್ಕೆ ಪ್ರತಿಕ್ರಿಯಿಸಿದ ಮಾಜಿ ಸಿಎಂ ವಿಜಯನ್, ಯಾರು ಯಾರನ್ನು ಅಪ್ಪಿಕೊಳ್ಳುತ್ತಾರೆ ಎಂಬುದು ತಮಗೆ ಮುಖ್ಯವಲ್ಲ ಎಂದಿದ್ದಾರೆ.
ಮುಂದುವರೆದು ಮಾತನಾಡಿದ ವಿಜಯನ್, ರಾಹುಲ್ ಗಾಂಧಿ ಅವರು ನರೇಂದ್ರ ಮೋದಿ ಅವರನ್ನು ಅಪ್ಪಿಕೊಂಡಿದ್ದ ಫೋಟೋವನ್ನು ನಾವೆಲ್ಲರೂ ನೋಡಿದ್ದೇವೆ. ತಮಗೆ ಮೋದಿ ಅವರನ್ನು ಅಪ್ಪಿಕೊಂಡಿದ್ದರ ಬಗ್ಗೆ ಆಕ್ಷೇಪವಿಲ್ಲ, ಆದರೆ ರಾಹುಲ್ ಅವರ ಇಂತಹ ಮಾತುಗಳು ಒಂದು ನಿರ್ದಿಷ್ಟ ರಾಜಕೀಯ ಸಂದೇಶವನ್ನು ನೀಡುತ್ತವೆ ಮತ್ತು ಅವರು ಮೈತ್ರಿಕೂಟವನ್ನು ಹೇಗೆ ನೋಡುತ್ತಾರೆ ಎಂಬುದನ್ನು ತೋರಿಸುತ್ತವೆ ಎಂದು ವಿಜಯನ್ ಹೇಳಿದ್ದಾರೆ.
ಇಂಡಿಯಾ ಮೈತ್ರಿಕೂಟವು ಇಂದು ಒಂದು ನಿರ್ದಿಷ್ಟ ಹಂತವನ್ನು ತಲುಪಿದೆ ಎಂದಿರುವ ವಿಜಯನ್, ಕೇವಲ ನಾವು ಮಾತ್ರವಲ್ಲದೆ ಅಖಿಲೇಶ್ ಯಾದವ್, ತೇಜಸ್ವಿ ಯಾದವ್ ಸೇರಿದಂತೆ ಕಾಂಗ್ರೆಸ್ ನಾಯಕತ್ವದ ನಿಲುವುಗಳ ವಿರುದ್ಧ ಮೈತ್ರಿಕೂಟದ ಇತರೆ ಪ್ರಮುಖ ಪಕ್ಷಗಳ ನಾಯಕರು ಕೂಡ ಸಭೆಯಲ್ಲಿ ಆಕ್ಷೇಪ ಎತ್ತಿದ್ದಾರೆ, ತಮಿಳುನಾಡಿನ ಡಿಎಂಕೆ ಪಕ್ಷವು ಈಗ ಎಲ್ಲಿದೆ ಎಂಬುದನ್ನು ಕೂಡ ಜನರು ನೋಡಬಹುದಾಗಿದೆ. ಮೈತ್ರಿಕೂಟದಲ್ಲಿ ಈಗ ಸೃಷ್ಟಿಯಾಗಿರುವ ಇಂತಹ ಪರಿಸ್ಥಿತಿಗೆ ಕಾಂಗ್ರೆಸ್ ಹಾಗೂ ಮುಖ್ಯವಾಗಿ ರಾಹುಲ್ ಗಾಂಧಿ ಅವರ ರಾಜಕೀಯ ಧೋರಣೆಯೇ ಕಾರಣ. ಅವರ ಈ ನಡೆ ಮೈತ್ರಿಕೂಟಕ್ಕೆ ಶಕ್ತಿ ತುಂಬುವ ಬದಲು, ಹಲವು ಬಾರಿ ಬಿಜೆಪಿಯ ಹಿತಾಸಕ್ತಿಗಳಿಗೆ ಪರೋಕ್ಷವಾಗಿ ಸಹಕಾರಿಯಾಗುತ್ತಿದೆ ಎಂದು ಮಾಜಿ ಸಿಎಂ ಆರೋಪಿಸಿದ್ದಾರೆ.
ಅಷ್ಟಕ್ಕೂ ರಾಹುಲ್ ಹೇಳಿದ್ದೇನು...?
ಇತ್ತೀಚೆಗೆ ನಡೆದ ಇಂಡಿಯಾ ಒಕ್ಕೂಟದ ಸಭೆಯಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿ, ವಿರೋಧ ಪಕ್ಷಗಳ ನಡುವೆ ಹೊಂದಾಣಿಕೆ ಇಲ್ಲ ಎಂಬುದು ಕೇವಲ ಬಿಜೆಪಿಯ ಅಪಪ್ರಚಾರವಾಗಿದ್ದು, ತಮಿಳುನಾಡಿನ ಡಿಎಂಕೆ ಸೇರಿದಂತೆ ಇಡೀ ಮೈತ್ರಿಕೂಟವು ಭಾರತದ ಅಸ್ಮಿತೆಯನ್ನು ರಕ್ಷಿಸಲು ಒಂದಾಗಿ ನಿಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು. ಕೇರಳದ ಮಾಜಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಜೊತೆ ರಾಜಕೀಯ ಹೋರಾಟ ಮುಂದುವರಿದಿರುವುದರಿಂದ ಅವರ ಜೊತೆ ತಾವೀಗ ಹಸ್ತಲಾಘವ ಮಾಡಲು ಸಾಧ್ಯವಿಲ್ಲ ಎಂದ ಅವರು, ಪರಿಸ್ಥಿತಿಗೆ ತಕ್ಕಂತೆ ನಾವು ನಮ್ಯತೆಯನ್ನು ಹೊಂದಿರಬೇಕು ಮತ್ತು ವಿರೋಧ ಪಕ್ಷಗಳು ದುರ್ಬಲವಾಗಿವೆ ಎಂದು ಬಿಂಬಿಸಲು ನಡೆಯುತ್ತಿರುವ ವ್ಯವಸ್ಥಿತ ಪಿತೂರಿಯನ್ನು ಅರ್ಥಮಾಡಿಕೊಳ್ಳಬೇಕು ಎಂದು ರಾಹುಲ್ ಗಾಂಧಿ ಕರೆ ನೀಡಿದ್ದಾರೆ(ಏಜೆನ್ಸೀಸ್).