ನವದೆಹಲಿ: ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಶೀಘ್ರದಲ್ಲೇ ಅಯೋಧ್ಯೆಯ( Ayodhya ) ರಾಮಮಂದಿರಕ್ಕೆ ಭೇಟಿ ನೀಡಲಿದ್ದಾರೆ ಎಂಬ ಸುದ್ದಿಯು ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.
ಹೌದು, ರಕ್ಷಣಾ ಸಚಿವಾಲಯಕ್ಕೆ ಸಂಬಂಧಿಸಿದ 32 ಸದಸ್ಯರ ಸಂಸದೀಯ ಸಮಿತಿಯು ಇದೇ ಜನವರಿ 23ರಂದು ಅಯೋಧ್ಯೆಗೆ ಭೇಟಿ ನೀಡುವ ಸಾಧ್ಯತೆಯಿದೆ. ಈ ಸಮಿತಿಯ ಸದಸ್ಯರಾಗಿರುವ ರಾಹುಲ್ ಗಾಂಧಿ ಅವರು ಆ ಸಮಯದಲ್ಲಿ ರಾಮಲಲ್ಲಾ ದರ್ಶನ ಪಡೆಯಲಿದ್ದಾರೆ ಎಂದು ವರದಿಯಾಗಿದೆ.
ಕಾಂಗ್ರೆಸ್ ಸ್ಪಷ್ಟನೆ ಕೊಟ್ಟಿದ್ದೇನು..?
ಬಾರಾಬಂಕಿಯ ಕಾಂಗ್ರೆಸ್ ಸಂಸದ ತನುಜ್ ಪುನಿಯಾ ಅವರು ಈ ಬಗ್ಗೆ ಪ್ರತಿಕ್ರಿಯಿಸಿ, "ದೇವಾಲಯದ ನಿರ್ಮಾಣ ಕಾರ್ಯ ಅಪೂರ್ಣವಾಗಿದ್ದರಿಂದ ರಾಹುಲ್ ಗಾಂಧಿ ಅವರು ಈ ಹಿಂದೆ ಪ್ರಾಣ ಪ್ರತಿಷ್ಠಾಪನಾ ಸಮಾರಂಭಕ್ಕೆ ಹೋಗಿರಲಿಲ್ಲ. ಈಗ ದೇವಾಲಯದ ಶಿಖರ ಮತ್ತು ಧ್ವಜ ಸ್ಥಾಪನೆಯಾಗಿ ಪೂಜೆಗಳು ಆರಂಭವಾಗಿರುವುದರಿಂದ, ಅವರು ತಮ್ಮ ಅನುಕೂಲಕ್ಕೆ ತಕ್ಕಂತೆ ಭೇಟಿ ನೀಡಲಿದ್ದಾರೆ" ಎಂದು ತಿಳಿಸಿದ್ದಾರೆ.
ರಾಹುಲ್ ವಿರುದ್ಧ ಬಿಜೆಪಿ ಟೀಕೆ..!
ಈ ಸಂಭಾವ್ಯ ಭೇಟಿಯನ್ನು ಬಿಜೆಪಿ ತೀವ್ರವಾಗಿ ಟೀಕಿಸಿದೆ. ಇದು ಕೇವಲ "ಫೋಟೋ ಮತ್ತು ಪ್ರಚಾರಕ್ಕಾಗಿ" ಮಾಡುತ್ತಿರುವ ರಾಜಕೀಯ ಗಿಮಿಕ್ ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ. ಕಳೆದ ಎರಡು ವರ್ಷಗಳಿಂದ ಅಯೋಧ್ಯೆಗೆ ಹೋಗದವರು ಈಗ ಚುನಾವಣೆ ಅಥವಾ ರಾಜಕೀಯ ಲಾಭಕ್ಕಾಗಿ ಹೋಗುತ್ತಿದ್ದಾರೆ ಎಂದು ಗಿರಿರಾಜ್ ಸಿಂಗ್ ಸೇರಿದಂತೆ ಹಲವು ಬಿಜೆಪಿ ಮುಖಂಡರು ಲೇವಡಿ ಮಾಡಿದ್ದಾರೆ.
ಇದಕ್ಕೂ ಮೊದಲು, ರಾಹುಲ್ ಗಾಂಧಿ ಅವರು 2016ರಲ್ಲಿ ಅಯೋಧ್ಯೆಯ ಹನುಮಾನ್ ಗರ್ಹಿ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಒಂದು ವೇಳೆ ಈ ಬಾರಿ ಅವರು ರಾಮಮಂದಿರಕ್ಕೆ ಭೇಟಿ ನೀಡಿದರೆ, ಅದು ಮಂದಿರ ಉದ್ಘಾಟನೆಯ ನಂತರ ಅವರ ಮೊದಲ ಭೇಟಿಯಾಗಲಿದೆ.ಈ ಭೇಟಿಯು ಉತ್ತರ ಪ್ರದೇಶದ ಮುಂಬರುವ ರಾಜಕೀಯ ಬೆಳವಣಿಗೆಗಳ ಮೇಲೆ ಯಾವ ರೀತಿಯ ಪ್ರಭಾವ ಬೀರಲಿದೆ ಎಂಬುದು ಕುತೂಹಲಕಾರಿಯಾಗಿದೆ ಎಂದು ವರದಿಯಾಗಿದೆ,(ಏಜೆನ್ಸೀಸ್).