ರಾಹುಲ್, ತೇಜಸ್ವಿ, ಮಮತಾ ಚಾಪ್ಟರ್ ಕ್ಲೋಸ್! ಸುವೇಂದುವಿನ ಮುಂದಿನ ಟಾರ್ಗೆಟ್ ಫಿಕ್ಸ್; ನಡುಗುತ್ತಿದ್ದಾರಾ ಯುಪಿ ನಾಯಕ?
ಕೋಲ್ಕತ್ತಾ: ಪಶ್ಚಿಮ ಬಂಗಾಳದ ರಾಜಕೀಯ ಇತಿಹಾಸದಲ್ಲಿ ಇಂದು ಹೊಸ ಅಧ್ಯಾಯವೊಂದು ಸೃಷ್ಟಿಯಾಗಿದೆ. ಕಳೆದ 15 ವರ್ಷಗಳ ತೃಣಮೂಲ ಕಾಂಗ್ರೆಸ್ ಆಡಳಿತಕ್ಕೆ ಅಂತ್ಯಹಾಡಿರುವ ಭಾರತೀಯ ಜನತಾ ಪಾರ್ಟಿ, ರಾಜ್ಯದಲ್ಲಿ ಎರಡನೇ ಮೂರಂಶದಷ್ಟು ಬಹುಮತದೊಂದಿಗೆ ಭರ್ಜರಿ ಜಯ ದಾಖಲಿಸಿದೆ. ಈ ಐತಿಹಾಸಿಕ ವಿಜಯದ ಬೆನ್ನಲ್ಲೇ ಆಕ್ರಮಣಕಾರಿ ಹೇಳಿಕೆ ನೀಡಿರುವ ಬಿಜೆಪಿ ಹಿರಿಯ ನಾಯಕ ಸುವೇಂದು ಅಧಿಕಾರಿ(Suvendu Adhikari), ರಾಹುಲ್ ಗಾಂಧಿ, ತೇಜಸ್ವಿ ಯಾದವ್ ಮತ್ತು ಮಮತಾ ಬ್ಯಾನರ್ಜಿ ಅವರ ರಾಜಕೀಯ ಜೀವನ ಅಂತ್ಯಗೊಂಡಿದೆ, ಮುಂದಿನ ಸರದಿ ಅಖಿಲೇಶ್ ಯಾದವ್ ಅವರದ್ದು ಎಂದು ಗುಡುಗಿದ್ದಾರೆ.
ಭವಾನಿಪುರದಲ್ಲಿ ದೀದಿಗೆ ಆಘಾತ: ಸುವೇಂದು ವಿಜಯೋತ್ಸವ
ಇಡೀ ದೇಶದ ಗಮನ ಸೆಳೆದಿದ್ದ ಭವಾನಿಪುರ ವಿಧಾನಸಭಾ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಸುವೇಂದು ಅಧಿಕಾರಿ ಸೋಲಿಸುವ ಮೂಲಕ ಜೈಂಟ್ ಕಿಲ್ಲರ್ ಆಗಿ ಹೊರಹೊಮ್ಮಿದ್ದಾರೆ. ಆರಂಭಿಕ ಹಂತದಲ್ಲಿ ಮಮತಾ ಮುನ್ನಡೆ ಸಾಧಿಸಿದ್ದರೂ, ಅಂತಿಮ ಸುತ್ತುಗಳಲ್ಲಿ ಸುವೇಂದು ಭರ್ಜರಿ ಮುನ್ನಡೆ ಕಾಯ್ದುಕೊಂಡು ಜಯದ ಮಾಲೆ ಧರಿಸಿದರು.
ಜಯದ ನಂತರ ಮಾತನಾಡಿದ ಸುವೇಂದು, ಭವಾನಿಪುರದ ಜನರು ಬದಲಾವಣೆಯನ್ನು ಬಯಸಿದ್ದರು. ಸಿಪಿಎಂ ಮತದಾರರು ಕೂಡ ನನಗೆ ಮತ ಹಾಕಿದ್ದಾರೆ. ಒಟ್ಟಾರೆಯಾಗಿ ಇಡೀ ಹಿಂದೂ ಸಮುದಾಯ ಒಂದಾಗಿ ಮತ ಚಲಾಯಿಸಿದೆ. ಮಮತಾ ಬ್ಯಾನರ್ಜಿ ಅವರನ್ನು ಸೋಲಿಸುವುದು ಈ ರಾಜ್ಯದ ಹಿತದೃಷ್ಟಿಯಿಂದ ಅನಿವಾರ್ಯವಾಗಿತ್ತು ಮತ್ತು ಅದನ್ನು ಭವಾನಿಪುರದ ಮತದಾರರು ಮಾಡಿ ತೋರಿಸಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.
ಅಂಕಿ-ಅಂಶಗಳಲ್ಲಿ ಬಿಜೆಪಿಯ ಅಬ್ಬರ
294 ಸದಸ್ಯ ಬಲದ ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ಮ್ಯಾಜಿಕ್ ನಂಬರ್ 148 ದಾಟಿ ಬಿಜೆಪಿ ಬರೋಬ್ಬರಿ 206 ಸ್ಥಾನಗಳನ್ನು ಗೆಲ್ಲುವ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಅತ್ತ ಆಡಳಿತಾರೂಢ ಟಿಎಂಸಿ ಕೇವಲ 79 ಸ್ಥಾನಗಳಿಗೆ ತೃಪ್ತಿಪಡುವಂತಾಗಿದೆ. 1972ರ ನಂತರ ಮೊದಲ ಬಾರಿಗೆ ಕೇಂದ್ರದಲ್ಲಿರುವ ಪಕ್ಷವೇ ರಾಜ್ಯದಲ್ಲೂ ಆಡಳಿತ ನಡೆಸುವಂತಾಗಿದ್ದು, ಇದೊಂದು ವೈಚಾರಿಕ ಮತ್ತು ರಾಜಕೀಯ ಮರುಜೋಡಣೆ ಎಂದು ವಿಶ್ಲೇಷಿಸಲಾಗುತ್ತಿದೆ.
ತುಷ್ಟೀಕರಣದ ರಾಜಕೀಯಕ್ಕೆ ಅಂತ್ಯ
ಮತ ಎಣಿಕೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಸುವೇಂದು ಅಧಿಕಾರಿ, ವಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಇದು ಜನರ ಗೆಲುವು. ಭ್ರಷ್ಟಾಚಾರ, ಕುಶಾಸನ ಮತ್ತು ಹಿಂದೂ ವಿರೋಧಿ ಸರ್ಕಾರವನ್ನು ಜನರು ಕಿತ್ತೆಸೆದಿದ್ದಾರೆ. ತುಷ್ಟೀಕರಣದ ರಾಜಕೀಯ ಇಂದಿಗೆ ಮುಕ್ತಾಯಗೊಂಡಿದೆ. ರಾಹುಲ್ ಗಾಂಧಿ, ತೇಜಸ್ವಿ ಯಾದವ್ ಮತ್ತು ಮಮತಾ ಬ್ಯಾನರ್ಜಿ ಅವರ ರಾಜಕೀಯ ಅಧ್ಯಾಯಗಳು ಮುಗಿದಿವೆ. ಶೀಘ್ರದಲ್ಲೇ ಅಖಿಲೇಶ್ ಯಾದವ್ ಕೂಡ ಇದೇ ಹಾದಿ ಹಿಡಿಯಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ.
ಹಿಂಸಾಚಾರಕ್ಕೆ ಬ್ರೇಕ್, ಅಭಿವೃದ್ಧಿಗೆ ಒತ್ತು
ಈ ಹಿಂದಿನ ಚುನಾವಣೆಗಳ ನಂತರದ ಹಿಂಸಾಚಾರವನ್ನು ಸ್ಮರಿಸಿದ ಸುವೇಂದು, ಟಿಎಂಸಿ ಮಾಡಿದಂತೆ ನಾವು ಹಿಂಸಾಚಾರ ಮಾಡುವುದಿಲ್ಲ. ನಮ್ಮದು ಸಂವಿಧಾನಬದ್ಧ ಸರ್ಕಾರವಾಗಿರುತ್ತದೆ. ಯಾವುದೇ ದ್ವೇಷದ ರಾಜಕೀಯವಿಲ್ಲದೆ ಕೇವಲ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುವುದು. ಮಹಿಳೆಯರ ಸುರಕ್ಷತೆಗೆ ನಮ್ಮ ಸರ್ಕಾರ ಮೊದಲ ಆದ್ಯತೆ ನೀಡಲಿದೆ ಎಂದು ಭರವಸೆ ನೀಡಿದ್ದಾರೆ.
ಪಕ್ಷದ ಕಾರ್ಯಕರ್ತರಿಗೆ ಧನ್ಯವಾದ ಅರ್ಪಿಸಿದ ಸುವೇಂದು, ಸಾಮಾನ್ಯ ಜನರ ನಿರೀಕ್ಷೆಗಳನ್ನು ಪೂರೈಸುವುದೇ ತಮ್ಮ ಗುರಿ ಎಂದು ಘೋಷಿಸಿದರು. ಈ ಫಲಿತಾಂಶವು ರಾಷ್ಟ್ರೀಯ ರಾಜಕಾರಣದ ಮೇಲೂ ದಟ್ಟವಾದ ಪ್ರಭಾವ ಬೀರುವ ಲಕ್ಷಣಗಳು ಗೋಚರಿಸುತ್ತಿವೆ,(ಏಜೆನ್ಸೀಸ್).