Rahul Gandhi | ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ
ದೆಹಲಿ: ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಕಾನೂನು ತಿದ್ದುಪಡಿ ಮತ್ತು ಡಿಲಿಮಿಟೇಶನ್ ಕಮಿಷನ್ ರಚನೆಯ ಕುರಿತಾದ ಚರ್ಚೆಯ ವೇಳೆ ಮಾತನಾಡುತ್ತಿದ್ದ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ನೀಡಿದ ಹೇಳಿಕೆಗಳು ಸದನದಲ್ಲಿ ತೀವ್ರ ಗದ್ದಲ ಮತ್ತು ಮಾತಿನ ಚಕಮಕಿಗೆ ಕಾರಣವಾಗಿವೆ.
ಪ್ರಧಾನಿ ಮೋದಿಯವರನ್ನು ಬಾಲಾಕೋಟ್, ನೋಟು ರದ್ದತಿ ಮತ್ತು ಆಪರೇಷನ್ ಸಿಂಧೂರ ಕಾರ್ಯಾಚರಣೆಯ ಮಾಂತ್ರಿಕ, ಜಾದೂಗಾರ ಕೊನೆಗೂ ಸಿಕ್ಕಿಬಿದ್ದಿದ್ದಾನೆ ಎಂದು ವ್ಯಂಗ್ಯವಾಡಿರುವ ರಾಹುಲ್ ಗಾಂಧಿ, ಬಿಜೆಪಿ ಸದಸ್ಯರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.‘
ತಮ್ಮ ಭಾಷಣದುದ್ದಕ್ಕೂ ಸರ್ಕಾರದ ಪ್ರಮುಖ ನಿರ್ಧಾರಗಳನ್ನು ಕಟುವಾಗಿ ಟೀಕಿಸಿದ ರಾಹುಲ್ ಗಾಂಧಿ, ಪ್ರಸ್ತುತ ಮಂಡಿಸಲಾಗಿರುವ ಮಸೂದೆಗಳನ್ನು ಪ್ಯಾನಿಕ್ ರಿಯಾಕ್ಷನ್ ಎಂದು ಕರೆದರು. ಈ ಮಸೂದೆಗಳು ಸದನದಲ್ಲಿ ಅಂಗೀಕಾರವಾಗುವುದಿಲ್ಲ ಎಂದು ತಿಳಿದಿದ್ದರೂ, ಕೇವಲ ಚುನಾವಣಾ ನಕ್ಷೆಯನ್ನು ಬದಲಾಯಿಸಲು ಮತ್ತು ಪ್ರಧಾನಿಯನ್ನು ಮಹಿಳಾ ಪರ ಎಂದು ಬಿಂಬಿಸಲು ಈ ತಂತ್ರ ಹೂಡಲಾಗಿದೆ ಎಂದು ವಿಪಕ್ಷ ನಾಯಕರು ಆರೋಪಿಸಿದರು.
ಬಿಜೆಪಿ ನಾಯಕರ ತಿರುಗೇಟು..
ರಾಹುಲ್ ಗಾಂಧಿ ಹೇಳಿಕೆಗೆ ತಕ್ಷಣವೇ ಪ್ರತಿಕ್ರಿಯಿಸಿದ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್, ಇದು ಸಶಸ್ತ್ರ ಪಡೆಗಳಿಗೆ ಮತ್ತು ಪ್ರಧಾನಿ ಹುದ್ದೆಗೆ ಮಾಡಿದ ಅವಮಾನ ಎಂದು ಖಂಡಿಸಿದರು. ರಾಜನಾಥ್ ಸಿಂಗ್ ಈ ಆಕ್ಷೇಪಾರ್ಹ ಪದಗಳನ್ನು ಸದನದ ದಾಖಲೆಗಳಿಂದ ಕೈಬಿಡುವಂತೆ ಸ್ಪೀಕರ್ ಓಂ ಬಿರ್ಲಾ ಅವರನ್ನು ಒತ್ತಾಯಿಸಿದರು. ಸ್ಪೀಕರ್ ಮಧ್ಯಪ್ರವೇಶಿಸಿ ಅಸಂಸದೀಯ ಭಾಷೆಯನ್ನು ಬಳಸದಂತೆ ಸೂಚಿಸಿದಾಗ, ರಾಹುಲ್ ಗಾಂಧಿ ಜಾದೂಗಾರ ಎಂಬ ಪದ ಬಳಸದಿರಲು ಒಪ್ಪಿಕೊಂಡರಾದರೂ, ಬಿಜೆಪಿ ಸಶಸ್ತ್ರ ಪಡೆಗಳ ಹಿಂದೆ ಅಡಗಿಕೊಂಡು ರಾಜಕೀಯ ಮಾಡುತ್ತಿದೆ ಎಂದು ತಿರುಗೇಟು ನೀಡಿದರು.
ನಮಗೆ ಪತ್ನಿಯರ ಸಮಸ್ಯೆ ಇಲ್ಲ
ಲೋಕಸಭೆಯಲ್ಲಿ ಕ್ಷೇತ್ರ ಪುನರ್ವಿಂಗಡಣೆ ಮತ್ತು ಮಹಿಳಾ ಮೀಸಲಾತಿ ಮಸೂದೆಯ ಕುರಿತಾದ ಚರ್ಚೆಯ ವೇಳೆ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ಮತ್ತು ತಮ್ಮ ವೈಯಕ್ತಿಕ ಜೀವನದ ಕುರಿತು ನೀಡಿದ ಹಾಸ್ಯಭರಿತ ಹೇಳಿಕೆಯೊಂದು ಸದನದಲ್ಲಿ ನಗುವಿನ ಅಲೆ ಎಬ್ಬಿಸಿತು. ಮಹಿಳೆಯರು ಭಾರತದ ನಿಜವಾದ ಪ್ರೇರಕ ಶಕ್ತಿ ಎಂದು ಬಣ್ಣಿಸಿದ ಅವರು, ಜನರ ಜೀವನವನ್ನು ರೂಪಿಸುವಲ್ಲಿ ಮಹಿಳೆಯರ ಪಾತ್ರ ಅನನ್ಯವಾದುದು ಎಂದು ಒತ್ತಿ ಹೇಳಿದರು.
ಇಲ್ಲಿರುವ ನಾವೆಲ್ಲರೂ ನಮ್ಮ ತಾಯಂದಿರು, ಸಹೋದರಿಯರು ಮತ್ತು ಹೆಂಡತಿಯರಿಂದ ಪ್ರಭಾವಿತರಾಗಿದ್ದೇವೆ ಹಾಗೂ ಅವರಿಂದಲೇ ಜೀವನದ ಪಾಠಗಳನ್ನು ಕಲಿತಿದ್ದೇವೆ, ಖಂಡಿತವಾಗಿಯೂ ಪ್ರಧಾನಿಯವರಿಗಾಗಲಿ ಅಥವಾ ನನಗಾಗಲಿ ಯಾವುದೇ ಪತ್ನಿ ಸಮಸ್ಯೆ ಇಲ್ಲ, ಹಾಗಾಗಿ ಆ ನಿಟ್ಟಿನಲ್ಲಿ ನಮಗೆ ಮಾಹಿತಿ ಸಿಗದೇ ಇರಬಹುದು ಎಂದರು(ಏಜೆನ್ಸೀಸ್).