ಕೇಂದ್ರ ಸಚಿವ ಕಿರಣ್ ರಿಜಿಜು ಮತ್ತು ರಾಹುಲ್ ಗಾಂಧಿ 
ದೇಶ

ಕೇಂದ್ರ ಬಜೆಟ್ ಬಗ್ಗೆ ರಾಹುಲ್ ಗಾಂಧಿ ಟೀಕೆ: ಎಲಾನ್ ಮಸ್ಕ್​ ಟ್ವೀಟ್ ಉಲ್ಲೇಖಿಸಿ ತಿರುಗೇಟು ನೀಡಿದ ಸಚಿವ ಕಿರಣ್ ರಿಜಿಜು | Kiren Rijiju

ನವದೆಹಲಿ: ಭಾನುವಾರ(ಫೆ. 01) ಮಂಡನೆಯಾದ 2026-2027ನೇ ಸಾಲಿನ ಕೇಂದ್ರ ಬಜೆಟ್​ ಅನ್ನು ಟೀಕಿಸಿದ್ದ ಕಾಂಗ್ರೆಸ್ ನಾಯಕ ಮತ್ತು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ, ಭಾರತದ ಆರ್ಥಿಕತೆ ಬಗ್ಗೆ ವಿಶ್ವದ ನಂ. 1 ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ಮಾಡಿದ ಟ್ವೀಟ್ ಉಲ್ಲೇಖಿಸಿ ಕೇಂದ್ರ ಸಚಿವ ಕಿರಣ್ ರಿಜಿಜು ತಿರುಗೇಟು ನೀಡಿದ್ದಾರೆ.
ಈ ಕುರಿತು ಎಕ್ಸ್​​ನಲ್ಲಿ ಪೋಸ್ಟ್ ಹಾಕಿರುವ ಕಿರಣ್ ರಿಜಿಜು, ಸಾಮಾನ್ಯವಾಗಿ ನಾನು ಭಾರತೀಯರಲ್ಲದವರು ನೀಡುವ ಹೇಳಿಕೆಗಳಿಗೆ ಪ್ರತಿಕ್ರಿಯಿಸುವುದಿಲ್ಲ. ನಾನು ಇಲ್ಲಿ ಎಲಾನ್ ಮಸ್ಟ್​ ಅವರ ಮಾತನ್ನು ಉಲ್ಲೇಖಿಸುತ್ತಿರುವುದು ಕೇವಲ ರಾಹುಲ್ ಗಾಂಧಿ ಜೀ ಅವರಿಗೆ ಮನವರಿಕೆ ಮಾಡಿಕೊಡಲು ಮಾತ್ರ. ಸರ್ಕಾರವನ್ನು ಟೀಕಿಸುವುದು ಪ್ರಜಾಪ್ರಭುತ್ವದ ಹಕ್ಕು ನಿಜ, ಆದರೆ ಭಾರತವನ್ನು ಹೀಯಾಳಿಸಬೇಡಿ. ಭಾರತದ ಸಾಧನೆಗಳನ್ನು ಎಂದಿಗೂ ಕೀಳಾಗಿ ಕಾಣಬೇಡಿ. ಒಬ್ಬ ಹೆಮ್ಮೆಯ ಭಾರತೀಯನಾಗಿರಿ ಎಂದಿದ್ದಾರೆ.
ಭಾನುವಾರ ಪ್ರಪಂಚದ ಆರ್ಥಿಕತೆ ಕುರಿತು ತಮ್ಮ ಎಕ್ಸ್​ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಮಸ್ಕ್, ಅದರಲ್ಲಿ ಚೀನಾ ಮತ್ತು ಭಾರತ ಸೇರಿ 2026 ರಲ್ಲಿ ಜಾಗತಿಕ ಜಿಡಿಪಿಯ ಶೇ. 43.6 ರಷ್ಟು ಪಾಲು ಹೊಂದುವ ನಿರೀಕ್ಷೆಯಿದೆ. ಅಮೆರಿಕ ಶೇ. 9.9 ರಷ್ಟು ಮುನ್ಸೂಚನೆಯೊಂದಿಗೆ ಮೂರನೇ ಸ್ಥಾನದಲ್ಲಿರುತ್ತದೆ. ಅಧಿಕಾರದ ಸಮತೋಲನ ಬದಲಾಗುತ್ತಿದೆ ಎಂದು ಅಂಕಿ ಸಂಖ್ಯೆಯ ಮಾಹಿತಿಯೊಂದಿಗೆ ಹಂಚಿಕೊಂಡಿದ್ದಾರೆ.
ವಾಸ್ತವವಾಗಿ, ಜನವರಿ 2026ರಲ್ಲಿ IMF ಭಾರತದ ಆರ್ಥಿಕ ಬೆಳವಣಿಗೆಯ ಮುನ್ಸೂಚನೆಯನ್ನು FY26 ರಲ್ಲಿ ಶೇಕಡಾ 0.7 ರಷ್ಟು ಹೆಚ್ಚಿಸಿ 7.3 ಕ್ಕೆ ತಲುಪಿದೆ. ಭಾರತ ಜಗತ್ತಿಗೆ ಪ್ರಮುಖ ಬೆಳವಣಿಗೆಯ ಎಂಜಿನ್ರು ಎಂದು ಹಣಕಾಸು ಸಂಸ್ಥೆಯ ಸಂವಹನ ವಿಭಾಗದ ಮುಖ್ಯಸ್ಥೆ ಜೂಲಿ ಕೊಜಾಕ್ ಕರೆದಿದ್ದಾರೆ.
ಭಾನುವಾರ ಬೆಳಿಗ್ಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ 2026-2027ನೇ ಸಾಲಿನ ಕೇಂದ್ರ ಬಜೆಟ್​ನಲ್ಲಿ​, ನಿರುದ್ಯೋಗ, ರೈತರ ಸಂಕಷ್ಟ ಹಾಗೂ ಮನೆಯ ಉಳಿತಾಯ ಕುಸಿಯುವಂತಹ ತುರ್ತು ಸಮಸ್ಯೆಗಳನ್ನು ಬಜೆಟ್ ಪರಿಹರಿಸಿಲ್ಲ. ಭಾರತದ ನಿಜವಾದ ಸಮಸ್ಯೆಗಳಿಗೆ ಕುರುಡಾಗಿರುವ ಬಜೆಟ್ ಎಂದು ರಾಹುಲ್ ಗಾಂಧಿ ಟೀಕಿಸಿದ್ದರು (ಏಜೆನ್ಸೀಸ್).