ರಾಹುಲ್ ಗಾಂಧಿ, ಪ್ರವೀಣ್ ಚಕ್ರವರ್ತಿ ಹಾಗೂ ಸಿಎಂ ಎಂ.ಕೆ.ಸ್ಟಾಲಿನ್
ಚೆನ್ನೈ: ಕರೂರು ಕಾಲ್ತುಳಿತ ಘಟನೆ ಬಳಿಕ ನಟ ವಿಜಯ್ಗೆ ಮೊದಲು ಕರೆ ಮಾಡಿ ನಾನಿದ್ದೇನೆ ಎಂದು ಧೈರ್ಯ ತುಂಬಿದ್ದು ರಾಹುಲ್ ಗಾಂಧಿ ಎಂಬ ಟಿವಿಕೆ ನಾಯಕ ಆಧವ್ ಅರ್ಜುನ್ ನೀಡಿದ ಹೇಳಿಕೆ ನಡುವೆ, ರಾಹುಲ್ ಗಾಂಧಿ ಆಪ್ತ ಕಾಂಗ್ರೆಸ್ನ ಬೌದ್ದಿಕ ವಲಯದ ಬುದ್ದಿಜೀವಿ ಪ್ರವೀಣ್ ಚಕ್ರವರ್ತಿ ಮಾಡಿದ ಎಕ್ಸ್ನ ಪೋಸ್ಟ್ವೊಂದು ಕಾಂಗ್ರೆಸ್ ಮತ್ತು ಡಿಎಂಕೆ(DMK) ನಡುವೆ ಫೈಟ್ಗೆ ತಿರುಗಿಸಿದೆ.
ತಮಿಳುನಾಡಿನ ಸಾಲ ಉತ್ತರ ಪ್ರದೇಶಕ್ಕಿಂತ ಹೆಚ್ಚಾಗಿದೆ. ಇದು ಆತಂಕಕಾರಿ ಎಂದು ಪ್ರವೀಣ್ ಚಕ್ರವರ್ತಿ ಹೇಳಿದ್ದು, ಈಗ ಅವರ ಹೇಳಿಕೆ ಡಿಎಂಕೆ ಆಕ್ರೋಶಕ್ಕೆ ಕಾರಣವಾಗಿದೆ. ಆದರೆ ಪ್ರವೀಣ್ ಚಕ್ರವರ್ತಿಯವರ ಹೇಳಿಕೆಯಿಂದ ತಮಿಳುನಾಡು ಕಾಂಗ್ರೆಸ್ ಅಂತರ ಕಾಯ್ದುಕೊಂಡಿದೆ.
ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಪ್ರವೀಣ್ ಚಕ್ರವರ್ತಿ, ಕಳೆದ ಕೆಲವು ವರ್ಷಗಳಲ್ಲಿ ತಮಿಳುನಾಡಿನ ಸಾಲವು ಉತ್ತರ ಪ್ರದೇಶವನ್ನು ಹಿಂದಿಕ್ಕಿದೆ. ಮತ್ತು ರಾಜ್ಯದ ಬಡ್ಡಿ ಹೊರೆ ದೇಶದಲ್ಲೇ ಅತ್ಯಧಿಕವಾಗಿದೆ. ತಮಿಳುನಾಡಿನ ಸಾಲ-ಜಿಡಿಪಿ ಅನುಪಾತವು ಕೋವಿಡ್ ಪೂರ್ವದ ಮಟ್ಟಕ್ಕಿಂತ ಹೆಚ್ಚಿನ ಮಟ್ಟದಲ್ಲಿದೆ ಎಂದಿದ್ದಾರೆ.
ಪ್ರವೀಣ್ ಚಕ್ರವರ್ತಿ ಹೇಳಿಕೆಗೆ ಡಿಎಂಕೆ ವಿರೋಧ
ಪ್ರವೀಣ್ ಚಕ್ರವರ್ತಿ ಅವರ ಪೋಸ್ಟ್ಗೆ ಪ್ರತಿಕ್ರಿಯಿಸಿರುವ ಡಿಎಂಕೆ ನಾಯಕ ಎಂ.ಎಂ.ಅಬ್ದುಲ್ಲಾ, ಅವರು ಭಯ ಹುಟ್ಟಸುವ ಹೇಳಿಕೆ ನೀಡಿದ್ದಾರೆ. ಸಾಲಗಳು ಬಂಡವಾಳ ಹೂಡಿಕೆ ಮತ್ತು ಆಸ್ತಿ ಸೃಷ್ಟಿಗಾಗಿ ಮಾಡಲಾಗಿದೆ. ಕಳೆದ ಐದು ವರ್ಷಗಳಲ್ಲಿ ತಮಿಳುನಾಡಿನ ಆರ್ಥಿಕತೆಯು ಸುಮಾರು ಶೇ. 39 ರಷ್ಟು ಬೆಳೆದು 17.3 ಲಕ್ಷ ಕೋಟಿ ರೂ. ಆರ್ಥಿಕತೆಯಾಗಿ ವಿಸ್ತರಿಸಿದೆ. "ಟ್ಟ ಸಾಲ"ಮತ್ತು ಉತ್ಪಾದಕ ಹೂಡಿಕೆ ನಡುವಿನ ವ್ಯತ್ಯಾಸವನ್ನು ತಿಳಿದು ಮಾತನಾಡಲು ಎಂದು ಕಿಡಿಕಾರಿದ್ದಾರೆ.
ಅಂತರ ಕಾಯ್ದುಕೊಂಡು ತಮಿಳುನಾಡು ಕಾಂಗ್ರೆಸ್
ಪ್ರವೀಣ್ ಚಕ್ರವರ್ತಿ ಹೇಳಿಕೆಗೆ ಡಿಎಂಕೆ ಅಷ್ಟೇ ಅಲ್ಲದೇ ತಮಿಳುನಾಡು ಕಾಂಗ್ರೆಸ್ ಸಹ ಟೀಕಿಸಿದ್ದು, ತಮಿಳುನಾಡನ್ನು ಉತ್ತರ ಪ್ರದೇಶದೊಂದಿಗೆ ಹೋಲಿಸುವುದು ಅನ್ಯಾಯ, ಸರಿಯಲ್ಲ ಎಂದು ಕಾಂಗ್ರೆಸ್ ಸಂಸದೆ ಜ್ಯೋತಿಮಣಿ ಹೇಳಿದ್ದಾರೆ.
ಶಿಕ್ಷಣ, ಆರೋಗ್ಯ ರಕ್ಷಣೆ, ಕೈಗಾರಿಕಾ ಹೂಡಿಕೆ, ಸಾಮಾಜಿಕ ನ್ಯಾಯ ಮತ್ತು ಕಲ್ಯಾಣ ವಿತರಣೆಯಲ್ಲಿ ತಮಿಳುನಾಡಿನ ಸಾಧನೆಗಳನ್ನು ಎತ್ತಿ ತೋರಿಸಿದ ಅವರು, ಸಾಲವನ್ನು ಫಲಿತಾಂಶಗಳು ಮತ್ತು ದೀರ್ಘಕಾಲೀನ ಅಭಿವೃದ್ಧಿ ಸೂಚಕಗಳ ಜೊತೆಗೆ ನಿರ್ಣಯಿಸಬೇಕು ಎಂದಿದ್ದಾರೆ.
ಬೆಂಬಲ ವ್ಯಕ್ತಪಡಿಸಿದ ಬಿಜೆಪಿಯ ಕೆ. ಅಣ್ಣಾಮಲೈ
ಪ್ರವೀಣ್ ಅವರ ಹೇಳಿಕೆಯನ್ನು ಡಿಎಂಕೆ & ಕಾಂಗ್ರೆಸ್ ವಿರೋಧಿಸಿದ್ರೆ ತಮಿಳುನಾಡಿನ ಮಾಜಿ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಅಣ್ಣಾಮಲೈ ಬೆಂಬಲಿಸಿದ್ದು, ಡಿಎಂಕೆ ದತ್ತಾಂಶವನ್ನು ವಿರೂಪಗೊಳಿಸುತ್ತಿದೆ. ಡಿಎಂಕೆ ಅಧಿಕಾರಾವಧಿಯಲ್ಲಿ ತಮಿಳುನಾಡಿನ ಸಾಲ ದ್ವಿಗುಣಗೊಂಡಿದೆ. ಈ ಸಾರ್ವಜನಿಕ ಜಗಳವು ಇಂಡಿಯಾ ಮೈತ್ರಿಕೂಟದೊಳಗಿನ ಭಿನ್ನತೆಯನ್ನು ಸೂಚಿಸುತ್ತಿದೆ ಎಂದು ಹೇಳಿದ್ದಾರೆ (ಏಜೆನ್ಸೀಸ್).