Congress Campaign | ಪೇಪರ್ ಲೀಕ್, ನಿರುದ್ಯೋಗದ ವಿರುದ್ಧ ದೇಶಾದ್ಯಂತ ಕಾಂಗ್ರೆಸ್ ಬೃಹತ್ ಯುವ ಚಳವಳಿ 
ದೇಶ

ಪೇಪರ್ ಲೀಕ್, ನಿರುದ್ಯೋಗದ ವಿರುದ್ಧ ದೇಶಾದ್ಯಂತ ಕಾಂಗ್ರೆಸ್ ಬೃಹತ್ ಯುವ ಚಳವಳಿ!; ರಾಹುಲ್​ ಗಾಂಧಿ ಭಾಗಿ | Congress Campaign

ನವದೆಹಲಿ: ದೇಶದಲ್ಲಿ ನಡೆಯುತ್ತಿರುವ ಸರಣಿ ಪರೀಕ್ಷಾ ಅಕ್ರಮಗಳು, ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ನಿರುದ್ಯೋಗ ಸಮಸ್ಯೆಯನ್ನು ವಿರೋಧಿಸಿ ಕಾಂಗ್ರೆಸ್ ಪಕ್ಷವು ದೇಶಾದ್ಯಂತ ಬೃಹತ್ ಚಳವಳಿಯನ್ನು ಘೋಷಿಸಿದ್ದು, ದೇಶದ ಯುವಕರ ಹಿತರಕ್ಷಣೆ ಕಾಯುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿರುವ ಕಾಂಗ್ರೆಸ್, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ದೇಶದ ಪ್ರಮುಖ ಶೈಕ್ಷಣಿಕ ಕೇಂದ್ರಗಳಲ್ಲಿ ಬೃಹತ್ ವಿದ್ಯಾರ್ಥಿ ಸಮಾವೇಶಗಳನ್ನು(Congress Campaign) ನಡೆಸಲು ನಿರ್ಧರಿಸಿದೆ.
ಎಐಸಿಸಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್ ಅವರು ಈ ಅಭಿಯಾನದ ವಿವರಗಳನ್ನು ನೀಡಿದ್ದು, ಪರೀಕ್ಷಾ ಹಗರಣಗಳು ಮತ್ತು ಉದ್ಯೋಗ ನೇಮಕಾತಿ ವಿಳಂಬದಿಂದ ತೊಂದರೆಗೆ ಒಳಗಾಗಿರುವ ವಿದ್ಯಾರ್ಥಿಗಳು, ಉದ್ಯೋಗ ಆಕಾಂಕ್ಷಿಗಳು ಹಾಗೂ ಶಿಕ್ಷಕರನ್ನು ಒಂದೇ ವೇದಿಕೆಯಡಿ ತರುವುದು ಈ ಹೋರಾಟದ ಮುಖ್ಯ ಉದ್ದೇಶ ಎಂದು ಹೇಳಿದ್ದಾರೆ.

ಕೋಟಾದಿಂದಲೇ ಶಂಖನಾದ

ರಾಹುಲ್ ಗಾಂಧಿ ಅವರು ಜೂನ್ 17 ರಂದು ರಾಜಸ್ಥಾನದ ಕೋಟಾದಲ್ಲಿ ನಡೆಯಲಿರುವ ಬೃಹತ್ ಸಮಾವೇಶದ ಮೂಲಕ ಈ ರಾಷ್ಟ್ರವ್ಯಾಪಿ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ. ಇದರ ಮುಂದುವರಿದ ಭಾಗವಾಗಿ ಜುಲೈ 10 ರಂದು ಪ್ರಯಾಗ್‌ರಾಜ್ (ಅಲಹಾಬಾದ್), ಜುಲೈ 11 ರಂದು ಬಿಹಾರದ ಪಟನಾ ಮತ್ತು ಜುಲೈ 14 ರಂದು ದೆಹಲಿಯಲ್ಲಿ ವಿದ್ಯಾರ್ಥಿ ಸಮಾವೇಶಗಳು ನಡೆಯಲಿವೆ. ನಿರಂತರ ಪೇಪರ್ ಲೀಕ್ ಪ್ರಕರಣಗಳು, ದುಬಾರಿಯಾಗುತ್ತಿರುವ ಪರೀಕ್ಷಾ ಶುಲ್ಕಗಳು ಮತ್ತು ನೇಮಕಾತಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಇಲ್ಲದಿರುವ ಬಗ್ಗೆ ಈ ಸಮಾವೇಶಗಳಲ್ಲಿ ಧ್ವನಿ ಎತ್ತಲಾಗುವುದು ಎಂದು ವೇಣುಗೋಪಾಲ್ ತಿಳಿಸಿದ್ದಾರೆ.
ಈ ಬೃಹತ್ ಚಳವಳಿಗಾಗಿ ಕಾಂಗ್ರೆಸ್ ತನ್ನ ವಿದ್ಯಾರ್ಥಿ ವಿಭಾಗವಾದ ಎನ್‌ಎಸ್‌ಯುಐ (NSUI) ಮತ್ತು ಯುವ ಕಾಂಗ್ರೆಸ್ ಸೇರಿದಂತೆ ರಾಜ್ಯ ಹಾಗೂ ಜಿಲ್ಲಾ ಮಟ್ಟದ ಘಟಕಗಳನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ಯೋಜಿಸಿದೆ. ಕಾಲೇಜು ಕ್ಯಾಂಪಸ್‌ಗಳು, ಕೋಚಿಂಗ್ ಸೆಂಟರ್‌ಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿ ನೇರ ಭೇಟಿ ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ಲಕ್ಷಾಂತರ ವಿದ್ಯಾರ್ಥಿಗಳನ್ನು ತಲುಪಲು ದೊಡ್ಡ ಮಟ್ಟದ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಪರೀಕ್ಷಾ ವೈಫಲ್ಯಗಳಿಂದ ಕಂಗಾಲಾಗಿರುವ ಯುವಕರಿಗೆ ತಮ್ಮ ನೋವನ್ನು ಹಂಚಿಕೊಳ್ಳಲು ಈ ಚಳವಳಿ ಒಂದು ಮುಕ್ತ ವೇದಿಕೆಯಾಗಲಿದೆ ಎಂದು ಕೆಸಿವಿ ತಿಳಿಸಿದರು.
ಮುಖ್ಯವಾಗಿ, ನೀಟ್ (NEET) ಪರೀಕ್ಷಾ ಪದ್ಧತಿಯಲ್ಲಿ ಸಂಪೂರ್ಣ ಸುಧಾರಣೆ ತರುವುದು, ಪರೀಕ್ಷಾ ಶುಲ್ಕವನ್ನು ರದ್ದುಪಡಿಸುವುದು ಮತ್ತು ಪೇಪರ್ ಲೀಕ್ ದಂಧೆಯಲ್ಲಿ ತೊಡಗಿರುವ ಜಾಲಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂಬ ರಾಹುಲ್ ಗಾಂಧಿ ಅವರ ಬೇಡಿಕೆಗಳನ್ನು ಈ ಚಳವಳಿಯ ಮೂಲಕ ಮುಂಚೂಣಿಗೆ ತರಲಾಗುವುದು. ಯುವಕರ ಭವಿಷ್ಯದ ಹಿತದೃಷ್ಟಿಯಿಂದ ಮುಂಬರುವ ಸಂಸತ್ ಅಧಿವೇಶನದಲ್ಲಿ ಈ ಬಿಕ್ಕಟ್ಟಿನ ಕುರಿತು ಸಮಗ್ರ ಚರ್ಚೆ ನಡೆಸಲು ಮತ್ತು ಸೂಕ್ತ ಕಾನೂನು ತರಲು ಕಾಂಗ್ರೆಸ್ ಪಕ್ಷವು ಒತ್ತಾಯಿಸಲಿದೆ ಎಂದು ಕೆ ಸಿ ವೇಣುಗೋಪಾಲ್ ಮಾಹಿತಿ ನೀಡಿದ್ದಾರೆ(ಏಜೆನ್ಸೀಸ್​).