Rahul Gandhi 
ದೇಶ

Rahul Gandhi | ಪ್ರಧಾನಿ ಮೋದಿ, ಸಚಿವ ಅಮಿತ್​ ಷಾ ಜೊತೆ ರಾಹುಲ್​ ಸಭೆ; ಸರ್ಕಾರದ ಪ್ರಸ್ತಾಪಗಳಿಗೆ ವಿಪಕ್ಷ ನಾಯಕನ ಆಕ್ಷೇಪ

ದೆಹಲಿ: ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಷಾ ಜೊತೆಗಿನ ಉನ್ನತ ಮಟ್ಟದ ಸಭೆಯಲ್ಲಿ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಭಿನ್ನಾಭಿಪ್ರಾಯವನ್ನು ಲಿಖಿತರೂಪದಲ್ಲಿ ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ.
ಕೇಂದ್ರ ಮಾಹಿತಿ ಆಯೋಗ ಮತ್ತು ಕೇಂದ್ರ ವಿಜಿಲೆನ್ಸ್ ಆಯೋಗ ಸೇರಿದಂತೆ ಪ್ರಮುಖ ಪಾರದರ್ಶಕ ಸಂಸ್ಥೆಗಳಿಗೆ ನೇಮಕಾತಿಗಳನ್ನು ಅಂತಿಮಗೊಳಿಸಲು ಈ ಸಭೆ ನಡೆಸಲಾಗಿದ್ದು, ಈ ಸಭೆ ಸುಮಾರು ಒಂದೂವರೆ ಗಂಟೆಗಳ ಕಾಲ ನಡೆಯಿತು ಎನ್ನಲಾಗಿದೆ. ಈ ಸಂದರ್ಭದಲ್ಲಿ ಸರ್ಕಾರ ಪ್ರಸ್ತಾಪಿಸಿದ ಹೆಸರುಗಳಿಗೆ ರಾಹುಲ್​ ಗಾಂಧಿ ಆಕ್ಷೇಪ ವ್ಯಕ್ತಪಡಿಸಿದರು ಮತ್ತು ಲಿಖಿತವಾಗಿ ತಮ್ಮ ಭಿನ್ನಾಭಿಪ್ರಾಯವನ್ನು ಸಲ್ಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕೆಳಮನೆಯ ವಿರೋಧ ಪಕ್ಷದ ನಾಯಕರಾಗಿರುವ ರಾಹುಲ್ ಗಾಂಧಿಗೆ ಕೆಲ ನಿರ್ಧಾರಗಳನ್ನು ತೆಗೆದುಕೊಳ್ಳುವ ಜವಾಬ್ದಾರಿಯುತ ಆಯ್ಕೆ ಸಮಿತಿಗಳ ಶಾಸನಬದ್ಧ ಸದಸ್ಯರಾಗಿದ್ದಾರೆ. ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಖಚಿತಪಡಿಸಿಕೊಳ್ಳಲು ಉದ್ದೇಶಿಸಲಾದ ಸಂಸ್ಥೆಗಳ ಸ್ವಾಯತ್ತತೆ ಮತ್ತು ಸ್ವಾತಂತ್ರ್ಯವನ್ನು ದುರ್ಬಲಗೊಳಿಸಲು ಸರ್ಕಾರ ಪ್ರಯತ್ನಿಸುತ್ತಿದೆ ಎಂದು ರಾಹುಲ್​ ನಿರಂತರವಾಗಿ ಕಳವಳ ವ್ಯಕ್ತಪಡಿಸುತ್ತಲೇ ಇದ್ದಾರೆ. ಇದನ್ನು ಅದರ ಮುಂದುವರೆದ ಭಾಗವೆಂದು ವಿಶ್ಲೇಷಿಸಲಾಗುತ್ತಿದೆ.

ಚುನಾವಣಾ ಆಯೋಗದ ವಿರುದ್ಧ ವಾಗ್ದಾಳಿ

ತಮ್ಮ ಎಕ್ಸ್​ ಖಾತೆಯಲ್ಲಿ ಲೋಕಸಭೆಯಲ್ಲಿನ ತಮ್ಮ ಭಾಷಣದ ಕ್ಲಿಪ್ ಹಂಚಿಕೊಂಡಿರುವ ರಾಹುಲ್​, ಚುನಾವಣಾ ಕಾನೂನುಗಳಿಗೆ ಸಂಬಂಧಪಟ್ಟ ಇತ್ತೀಚಿನ ತಿದ್ದುಪಡಿಗಳ ಕುರಿತು ಮೂರು ಪ್ರಶ್ನೆಗಳನ್ನು ಎತ್ತಿದ್ದಾರೆ. ಆಯೋಗದ ಆಯ್ಕೆ ಸಮಿತಿಯಿಂದ ಭಾರತದ ಮುಖ್ಯ ನ್ಯಾಯಮೂರ್ತಿಯನ್ನು ತೆಗೆದುಹಾಕುವುದು, 2024 ರ ಚುನಾವಣೆಗೆ ಮುಂಚಿತವಾಗಿ ಆಯೋಗಕ್ಕೆ ಬಹುತೇಕ ಸಂಪೂರ್ಣ ಕಾನೂನು ವಿನಾಯಿತಿ ನೀಡುವುದು ಮತ್ತು 45 ದಿನಗಳಲ್ಲಿ ಸಿಸಿಟಿವಿ ದೃಶ್ಯಾವಳಿಗಳನ್ನು ನಾಶಮಾಡುವ ನಿರ್ಧಾರ. ಉತ್ತರ ಒಂದೇ, ಅದು ಬಿಜೆಪಿ ಚುನಾವಣಾ ಆಯೋಗವನ್ನು ಮತ ಕಳ್ಳತನದ ಸಾಧನವಾಗಿ ಪರಿವರ್ತಿಸುತ್ತಿದೆ ಎಂದು ಬರೆದುಕೊಂಡಿದ್ದರು(ಏಜೆನ್ಸೀಸ್​).