Rahul Gandhi | ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ
ನವದೆಹಲಿ: ಲೋಕಸಭೆಯಲ್ಲಿ ಅಂಗೀಕಾರಗೊಂಡ ಪೇಪರ್ ಲೀಕ್ ತಡೆ ತಿದ್ದುಪಡಿ ವಿಧೇಯಕವನ್ನು ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ (Rahul Gandhi) ತೀವ್ರವಾಗಿ ಖಂಡಿಸಿದ್ದಾರೆ. ದೇಶದ ಪರೀಕ್ಷಾ ವ್ಯವಸ್ಥೆಯಲ್ಲಿರುವ ಮೂಲಭೂತ ಮತ್ತು ರಚನಾತ್ಮಕ ದೋಷಗಳನ್ನು ಸರಿಪಡಿಸುವಲ್ಲಿ ಈ ಕಾನೂನು ಸಂಪೂರ್ಣ ವಿಫಲವಾಗಿದೆ ಎಂದು ಹೇಳಿರುವ ಅವರು, ಇದು ವಿದ್ಯಾರ್ಥಿಗಳ ಸಮಸ್ಯೆಗೆ ಪರಿಹಾರವಲ್ಲ, ಬದಲಿಗೆ ಬ್ಯಾಂಡ್-ಏಡ್ ಹಚ್ಚಿದಂತೆ ಎಂದು ಲೇವಡಿ ಮಾಡಿದ್ದಾರೆ.
ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ರಾಹುಲ್ ಗಾಂಧಿ, ಕೇಂದ್ರ ಸರ್ಕಾರ ಮತ್ತು ಗೃಹ ಸಚಿವ ಅಮಿತ್ ಷಾ ವಿರುದ್ಧ ವಾಗ್ದಾಳಿ ನಡೆಸಿದರು.
ರಾಹುಲ್ ಗಾಂಧಿ ಪತ್ರಿಕಾಗೋಷ್ಠಿಯ ಪ್ರಮುಖ ಅಂಶಗಳು
ಅಲ್ಪಾವಧಿ ಪರಿಹಾರ: ಪೇಪರ್ ಲೀಕ್ ಕಾಯ್ದೆಯು ಪರೀಕ್ಷಾ ವ್ಯವಸ್ಥೆಯಲ್ಲಿನ ಆಳವಾದ ಸಮಸ್ಯೆಗಳನ್ನು ಬಗೆಹರಿಸುವುದಿಲ್ಲ. ವಿದ್ಯಾರ್ಥಿಗಳು ಪರೀಕ್ಷಾ ವ್ಯವಸ್ಥೆಯಲ್ಲಿ ಸಮಗ್ರ ಸುಧಾರಣೆಗಳನ್ನು ಬಯಸುತ್ತಿದ್ದಾರೆಯೇ ಹೊರತು ಇಂತಹ ತಾತ್ಕಾಲಿಕ ತಿದ್ದುಪಡಿಗಳನ್ನಲ್ಲ.
ಶಿಕ್ಷೆ ಪ್ರಮಾಣ ಹೆಚ್ಚಳಕ್ಕೆ ವಿರೋಧ: ಹಾಲಿ ಇರುವ ಕಾನೂನುಗಳ ಅಡಿಯಲ್ಲೇ ಯಾರಿಗೂ ಶಿಕ್ಷೆ ಕೊಡಿಸಲು ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಹೀಗಿರುವಾಗ ಕೇವಲ ಶಿಕ್ಷೆಯ ಪ್ರಮಾಣವನ್ನು ಹೆಚ್ಚಿಸುವುದರಲ್ಲಿ ಯಾವುದೇ ಅರ್ಥವಿಲ್ಲ.
ಅಮಿತ್ ಷಾ ರಾಜೀನಾಮೆಗೆ ಆಗ್ರಹ: ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲಿನ ಪೊಲೀಸ್ ದೌರ್ಜನ್ಯವನ್ನು ಸಮರ್ಥಿಸಿಕೊಳ್ಳಲು ಸಾಧ್ಯವಾಗದೆ ಗೃಹ ಸಚಿವ ಅಮಿತ್ ಷಾ ಸಂಸತ್ತಿನ ಚರ್ಚೆಯಿಂದ ಕಾಲ್ಕಿತ್ತಿದ್ದಾರೆ. ಅವರು ತಪ್ಪು ಮಾಡಿದ್ದರಿಂದಲೇ ಓಡಿಹೋಗಿದ್ದಾರೆ. ವಿದ್ಯಾರ್ಥಿಗಳ ಮೇಲಿನ ದೌರ್ಜನ್ಯಕ್ಕೆ ಅಮಿತ್ ಷಾ ನೇರ ಹೊಣೆ ಅಥವಾ ಅವರ ಸಚಿವಾಲಯದಲ್ಲಿ ಏನು ನಡೆಯುತ್ತಿದೆ ಎಂಬುದು ಅವರಿಗೆ ಗೊತ್ತಿಲ್ಲ. ಆದ್ದರಿಂದ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ನಿರ್ಗಮಿಸಬೇಕು.
ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ: ದೆಹಲಿಯ ಬೀದಿಗಳಲ್ಲಿ ಪ್ರಶ್ನೆ ಕೇಳಿದ ವಿದ್ಯಾರ್ಥಿಗಳ ಮೇಲೆ ಅಮಾನವೀಯವಾಗಿ ಹಲ್ಲೆ ನಡೆಸಲಾಗಿದೆ. ಅವರ ಮೇಲೆ ಪೆಲೆಟ್ ಗನ್‌ಗಳಿಂದ ಗುಂಡು ಹಾರಿಸಲಾಗಿದೆ. ಅಪ್ರಾಪ್ತ ವಿದ್ಯಾರ್ಥಿಗೆ ಪೊಲೀಸರು ಕಪಾಳಮೋಕ್ಷ ಮಾಡಿರುವುದನ್ನು ಹಾಗೂ ಏಮ್ಸ್ ವೈದ್ಯಕೀಯ ಪ್ರಮಾಣಪತ್ರವನ್ನು ನಾನು ನೋಡಿದ್ದೇನೆ.
ಬಜರಂಗದಳ ಬಳಕೆ: ವಿದ್ಯಾರ್ಥಿಗಳನ್ನು ಹೆದರಿಸಿ, ಅವರ ಧ್ವನಿಯನ್ನು ಅಡಗಿಸಲು ಬಜರಂಗದಳವನ್ನು ವಿರುದ್ಧ ಎತ್ತಿಕಟ್ಟಲಾಗುತ್ತಿದೆ.
ಕ್ಷಮೆಯಾಚಿಸುವ ಪ್ರಶ್ನೆಯೇ ಇಲ್ಲ: ಲೋಕಸಭೆಯಲ್ಲಿ ವಿರೋಧ ಪಕ್ಷಗಳಿಗೆ ಮಾತನಾಡಲು ಅವಕಾಶ ನೀಡುತ್ತಿಲ್ಲ. ನನ್ನನ್ನು ಕ್ಷಮೆ ಕೇಳುವಂತೆ ಒತ್ತಾಯಿಸಲಾಯಿತು. ಆದರೆ ನಾನು ಬಿಜೆಪಿ, ಆರ್‌ಎಸ್‌ಎಸ್ ಅಥವಾ ಇನ್ಯಾರಿಗೂ ಎಂದಿಗೂ ಕ್ಷಮೆಯಾಚಿಸುವುದಿಲ್ಲ.
ಜೆನ್ ಜಿ ಮತ್ತು ಪ್ರಧಾನಿ ಮೋದಿ: ಪ್ರಧಾನಿಯವರು ತಮ್ಮ ಮುಖದ ಮುಂದೆ ಫೋನ್ ಹಿಡಿದುಕೊಂಡ ತಕ್ಷಣ ಜೆನ್ ಜಿ ಯುವಕರ ಜೊತೆ ಸಂಪರ್ಕ ಸಾಧಿಸಿದೆ ಎಂದು ಭಾವಿಸಿದ್ದಾರೆ. ಆದರೆ ದೇಶದ ಯುವಕರ ಭವಿಷ್ಯ, ಆರ್ಥಿಕತೆ ಮತ್ತು ವಿದ್ಯಾರ್ಥಿಗಳ ಜೀವನವನ್ನು ನೀವು ಹಾಳು ಮಾಡಿದ್ದೀರಿ. ನಿಮ್ಮ ಇಮೇಜ್ ಈಗಾಗಲೇ ಧ್ವಂಸಗೊಂಡಿದೆ ಎಂದು ರಾಹುಲ್ ಗಾಂಧಿ ಕಿಡಿಕಾರಿದ್ದಾರೆ(ಏಜೆನ್ಸೀಸ್).