ಗ್ಯಾನೇಶ್​ ಕುಮಾರ್​ (ಎಡ), ರಾಹುಲ್ ಗಾಂಧಿ (ಬಲ) 
ದೇಶ

'ವೋಟ್ ಚೋರಿ' ಆರೋಪ: ದೆಹಲಿಯಲ್ಲಿ ವಿಪಕ್ಷಗಳ ಬೃಹತ್ ಮಾರ್ಚ್, ಸುಪ್ರೀಂಕೋರ್ಟ್​ ತಲುಪಿದ ರಾಹುಲ್ ಗಾಂಧಿ | Rahul Gandhi

ಇಂಡಿಯಾ ಒಕ್ಕೂಟದ ನಾಯಕರು ದೆಹಲಿಯಲ್ಲಿ ನಡೆಸಿದ ಬೃಹತ್ ಪ್ರತಿಭಟನಾ ಮೆರವಣಿಗೆಯ ಬೆನ್ನಲ್ಲೇ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಇದೀಗ ಸುಪ್ರೀಂ ಕೋರ್ಟ್​ ಪ್ರವೇಶಿಸಿದ್ದಾರೆ.

ನವದೆಹಲಿ: ಚುನಾವಣಾ ಅಕ್ರಮಗಳ ಆರೋಪ ಹಾಗೂ ಮುಕ್ತ-ನ್ಯಾಯಸಮ್ಮತ ಚುನಾವಣಾ ಪ್ರಕ್ರಿಯೆಯನ್ನು ಒತ್ತಾಯಿಸಿ ಇಂಡಿಯಾ ಒಕ್ಕೂಟದ ನಾಯಕರು ದೆಹಲಿಯಲ್ಲಿ ನಡೆಸಿದ ಬೃಹತ್ ಪ್ರತಿಭಟನಾ ಮೆರವಣಿಗೆಯ ಬೆನ್ನಲ್ಲೇ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಇದೀಗ ಸುಪ್ರೀಂ ಕೋರ್ಟ್​ ಪ್ರವೇಶಿಸಿದ್ದಾರೆ.

ಚುನಾವಣಾ ಆಯೋಗದ (ECI) ವಿರುದ್ಧ ವೋಟ್ ಚೋರಿ (ಮತ ಕಳವು) ಗಂಭೀರ ಆರೋಪ ಹೊರಿಸಿರುವ ಕಾಂಗ್ರೆಸ್ ಮತ್ತು ಇತರೆ ಪಕ್ಷಗಳು​, ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಪಟ್ಟು ಹಿಡಿದಿವೆ. ಈ ನಿಟ್ಟಿನಲ್ಲಿ, ಬೃಹತ್​ ಪ್ರತಿಭಟನೆಯಲ್ಲಿ ಒಂದಾದ 'ಇಂಡಿಯಾ' ಒಕ್ಕೂಟದ ನಾಯಕರು, ರಾಷ್ಟ್ರ ರಾಜಧಾನಿ ದೆಹಲಿಯ ಕನ್ನಾಟ್ ಪ್ಲೇಸ್ ಹಾಗೂ ಮಂಡಿ ಹೌಸ್ ವ್ಯಾಪ್ತಿಯಲ್ಲಿ ಸಾವಿರಾರು ಸಂಖ್ಯೆಯ ಕಾರ್ಯಕರ್ತರೊಂದಿಗೆ ಸೇರಿ 'ಚಲೋ ದೆಹಲಿ - ಪ್ರಜಾಪ್ರಭುತ್ವಕ್ಕಾಗಿ ಮಾರ್ಚ್' ಬ್ಯಾನರ್ ಅಡಿಯಲ್ಲಿ ಬೃಹತ್ ರ್ಯಾಲಿ ನಡೆಸಿದರು.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಹಾಗೂ ಎಐಎಸ್‌ಎ (AISA) ಮುಖ್ಯಸ್ಥೆ ನೇಹಾ ಬೋರಾ ಅವರ ನೇತೃತ್ವದಲ್ಲಿ ಕನ್ನಾಟ್ ಪ್ಲೇಸ್-ಬಾರಾಖಂಬಾ ರಸ್ತೆಯ ಜಂಕ್ಷನ್‌ನಿಂದ ಸುಪ್ರೀಂ ಕೋರ್ಟ್​ ವರೆಗೆ ಪ್ರತಿಭಟನಾ ರ್ಯಾಲಿಯನ್ನು ಕೈಗೊಳ್ಳಲಾಯಿತು. ಪ್ರತಿಭಟನೆಗೆ ಪೊಲೀಸರು ಅಡ್ಡಿ ಮಾಡುತ್ತಿದ್ದಾರೆ ಎಂದು ಸಿಟ್ಟಾದ ರಾಹುಲ್​ ಗಾಂಧಿ, ವಾಹನದ ಮೇಲೇರಿ ಆಕ್ರೋಶ ಹೊರಹಾಕಿದರು. ರಾಹುಲ್​ಗೆ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಮತ್ತು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಸೇರಿದಂತೆ ಪ್ರಮುಖ ವಿಪಕ್ಷ ನಾಯಕರು ಸಾಥ್​ ನೀಡಿದರು.

ಸುಪ್ರೀಂಕೋರ್ಟ್ ತಲುಪಿದ ರಾಹುಲ್​

ಮಾರ್ಚ್​ ಮೂಲಕ ಪ್ರತಿಭಟನೆ ನಡೆಸಿದ ರಾಹುಲ್​ ಗಾಂಧಿ ನೇತೃತ್ವದ ತಂಡವು ಇದೀಗ ನೇರವಾಗಿ ಸುಪ್ರೀಂ ಕೋರ್ಟ್‌ಗೆ ತಲುಪಿದ್ದು, ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆಗೆ (Special Intensive Revision - SIR) ಮಧ್ಯಂತರ ತಡೆ ನೀಡುವಂತೆ ಕೋರಿ ಅರ್ಜಿ ಸಲ್ಲಿಸಿದೆ. ಈ ಹಿಂದೆ, ಭಾರತದ ಮುಖ್ಯ ನ್ಯಾಯಮೂರ್ತಿಗಳಿಗೆ (ಸಿಜೆಐ) ಸಲ್ಲಿಸಲಾಗಿದ್ದ ಮನವಿಯ ಮುಂದುವರಿದ ಭಾಗವಾಗಿ ಈ ಅರ್ಜಿಯನ್ನು ಸಲ್ಲಿಸಲಾಗಿದ್ದು, ಚುನಾವಣಾ ಆಯೋಗದ ವಿರುದ್ಧದ ತಮ್ಮ ಹೋರಾಟವನ್ನು ವಿಪಕ್ಷಗಳು ಕಾನೂನುಬದ್ಧವಾಗಿ ಮತ್ತಷ್ಟು ತೀವ್ರಗೊಳಿಸಿವೆ.