ನವದೆಹಲಿ: ಸಿಜೆಪಿ ಪ್ರತಿಭಟನಾಕಾರರ ಮೇಲಿನ ಲಾಠಿ ಚಾರ್ಜ್ ಖಂಡಿಸಿ, ಪ್ರಧಾನಿ ಮೋದಿ, ಗೃಹಸಚಿವ ಅಮಿತ್ ಶಾ ರಾಜೀನಾಮೆಗೆ ಒತ್ತಾಯಿಸಿ ನವದೆಹಲಿಯ 7 ಲೋಕ ಕಲ್ಯಾಣ್ ಮಾರ್ಗದಲ್ಲಿರುವ ಪ್ರಧಾನಿ ಮೋದಿಯವರ ನಿವಾಸದ ಹೊರಗೆ ರಾಹುಲ್ ಗಾಂಧಿ(Rahul Gandhi) ಅಹೋರಾತ್ರಿ ಧರಣಿಗೆ ಮುಂದಾಗಿದ್ದು, ದೇಶಭಕ್ತರೆಲ್ಲಾ ಸ್ಥಳಕ್ಕೆ ಬಂದು ನಮ್ಮೊಂದಿಗೆ ಸೇರಿಕೊಳ್ಳಿ ಎಂದು ಕರೆ ನೀಡಿದ್ದಾರೆ.
ಎಕ್ಸ್ನಲ್ಲಿ ಈ ಕುರಿತು ಪೋಸ್ಟ್ ಹಾಕಿರುವ ಅವರು, ವಿದ್ಯಾರ್ಥಿಗಳ ಮೇಲಿನ ದಾಳಿಯು ಪ್ರತಿಯೊಂದು ಭಾರತೀಯ ಕುಟುಂಬದ ಮೇಲಿನ ದಾಳಿಯಾಗಿದೆ. ಯಾವುದೇ ಉತ್ತರವಿಲ್ಲದೆ ಅಥವಾ ಯಾವುದೇ ಪರಿಣಾಮಗಳನ್ನು ಎದುರಿಸದೆ ತಾವು ಪಾರಾಗಬಹುದು ಎಂದು ಪ್ರಧಾನಿ ಮೋದಿ ಭಾವಿಸಿದ್ದಾರೆ. ಆದರೆ ಅವರಿಗೆ ಹಾಗೆ ಮಾಡಲು ಸಾಧ್ಯವಿಲ್ಲ. ಈ ಬಾರಿ ಖಂಡಿತವಾಗಿಯೂ ಸಾಧ್ಯವಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ನಮ್ಮ ವಿದ್ಯಾರ್ಥಿಗಳಿಗೆ ನ್ಯಾಯ ಸಿಗಬೇಕು ಎಂದು ನಂಬುವ ಪ್ರತಿಯೊಬ್ಬ ದೇಶಭಕ್ತ ಭಾರತೀಯನಿಗೂ ನನ್ನದೊಂದು ಮನವಿ. ಪ್ರಧಾನ ಮಂತ್ರಿಯವರ ನಿವಾಸದ ಮುಂದೆ ನಡೆಯಲಿರುವ ಧರಣಿಯಲ್ಲಿ ನಮ್ಮೊಂದಿಗೆ ಕೈಜೋಡಿಸಿ ಎಂದು ಕರೆ ನೀಡಿದ್ದು, ಭಾರತದ ವಿದ್ಯಾರ್ಥಿಗಳ ಧ್ವನಿಯನ್ನು ಕಡೆಗಣಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ರಾಹುಲ್ ಗಾಂಧಿ ಭೇಟಿಯಾದ ಜಿತೇಂದ್ರ ಸಿಂಗ್
ಇನ್ನೂ ಪ್ರಧಾನಿ ನಿವಾಸದ ಹೊರೆಗೆ ಕಾಂಗ್ರೆಸ್ ನಡೆಸುತ್ತಿದ್ದ ಪ್ರತಿಭಟನಾ ಸ್ಥಳಕ್ಕೆ ಪ್ರಧಾನ ಮಂತ್ರಿ ಕಚೇರಿಯ ಕೇಂದ್ರ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಭೇಟಿ ನೀಡಿ ರಾಹುಲ್ ಗಾಂಧಿ ಜೊತೆ ಮಾತುಕತೆ ನಡೆಸಿದ್ದು, ಪ್ರತಿಭಟನೆಯನ್ನು ಹಿಂಪಡೆಯುವಂತೆ ಮನವೊಲಿಸಲು ಮುಂದಾದರು. ಆದರೆ ಕೇಂದ್ರ ಸಚಿವರ ಮನವೊಲಿಕೆಗೆ ಬಗ್ಗ ರಾಹುಲ್ ಗಾಂಧಿ ಪ್ರತಿಭಟನೆ ಮುಂದುವರೆಸಿದ್ದಾರೆ.
ಈ ಕುರಿತು ಮಾತನಾಡಿರುವ ಕಾಂಗ್ರೆಸ್ ಸಂಸದ ಸೈಯದ್ ನಾಸೀರ್ ಹುಸೇನ್, ಅವರು ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳಬೇಕೆಂದು ಬಯಸಿದ್ದರು. ಆದರೆ ನಮ್ಮ ಬೇಡಿಕೆಗಳು ಈಡೇರದ ಕಾರಣ ನಾವು ಒಪ್ಪಲಿಲ್ಲ. ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು. ಮತ್ತು ಪತ್ರಿಕೆ ಸೋರಿಕೆಯ ಕುರಿತು ಸಂಸತ್ತಿನಲ್ಲಿ ಚರ್ಚೆ ನಡೆಯಬೇಕು ಎಂದು ಒತ್ತಾಯಿಸಿದೆವು. ಪ್ರತಿಭಟನೆ ಮುಂದುವರೆಯಲಿದೆ. ಹೆಚ್ಚಿನ ಸಂಸದರು, ಹೆಚ್ಚಿನ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಸಾಮಾನ್ಯರು ಪ್ರತಿಭಟನೆಯಲ್ಲಿ ಸೇರುತ್ತಾರೆ ಎಂದು ಹೇಳಿದ್ದಾರೆ (ಏಜೆನ್ಸೀಸ್).