ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ನಡುವಿನ ರಾಜಕೀಯ ವಾಕ್ಸಮರ ಮತ್ತಷ್ಟು ತೀವ್ರಗೊಂಡಿದೆ. ದೇಶದ ಹಲವು ಸಂಘಟನೆಗಳಲ್ಲಿ 'ದಿಮಾಗಿ ನಕ್ಸಲರು' (Dimagi Naxals) ನುಸುಳಿದ್ದಾರೆ ಎಂಬ ಪ್ರಧಾನಿ ಮೋದಿ ಹೇಳಿಕೆಗೆ ತಿರುಗೇಟು ನೀಡಿರುವ ರಾಹುಲ್ ಗಾಂಧಿ, ದೇಶವಿರೋಧಿ ಯಾರು ಮತ್ತು ವಿದೇಶಿ ಶಕ್ತಿಗಳ ಕಂಟ್ರೋಲ್ನಲ್ಲಿ ಇರುವವರು ಯಾರು ಎಂಬುದರ ಕುರಿತು ಬಹಿರಂಗ ಚರ್ಚೆಗೆ ಬರುವಂತೆ ಮತ್ತೊಮ್ಮೆ ಸವಾಲು ಹಾಕಿದ್ದಾರೆ.
ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ಕಿಡಿಕಾರಿರುವ ರಾಹುಲ್ ಗಾಂಧಿ, "ಆತ್ಮೀಯ ಸಿಎಆರ್ಪಿಎಫ್ನವರೇ, ನಿಮ್ಮ ಮುಖಗಳೇ ಎಲ್ಲವನ್ನೂ ಹೇಳುತ್ತಿದ್ದವು. ಪ್ರಧಾನಿಯವರ ಸುಳ್ಳುಗಳನ್ನು ನೀವು ನಂಬಲಿಲ್ಲ ಎಂಬುದು ಸ್ಪಷ್ಟವಾಗಿತ್ತು. ಅವರು ನಮ್ಮನ್ನು ನಕ್ಸಲರು ಎಂದು ಕರೆದಿದ್ದಾರೆ. ನನ್ನ ಸವಾಲು ಇನ್ನೂ ಹಾಗೆಯೇ ಉಳಿದಿದೆ. ದೇಶವಿರೋಧಿ ಯಾರು ಮತ್ತು ವಿದೇಶಿ ಶಕ್ತಿಗಳ ಹತೋಟಿಯಲ್ಲಿ ಇರುವವರು ಯಾರು ಎಂಬುದರ ಬಗ್ಗೆ ನನ್ನೊಂದಿಗೆ ಚರ್ಚೆ ನಡೆಸಲಿ. ಯಾವಾಗ, ಎಲ್ಲಿಯಾದರೂ ಸರಿ" ಎಂದು ಓಪನ್ ಚಾಲೆಂಜ್ ಹಾಕಿದ್ದಾರೆ.
ಇದಕ್ಕೂ ಮೊದಲು ನಿನ್ನೆ (ನ.08) ಛತ್ತೀಸ್ಗಢದ ಬಸ್ತರ್ ಜಿಲ್ಲೆಯ ಕರಣ್ಪುರದಲ್ಲಿರುವ ಸಿಆರ್ಪಿಎಫ್ ಶಿಬಿರದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಭದ್ರತಾ ಸಿಬ್ಬಂದಿಯನ್ನು ಉದ್ದೇಶಿಸಿ ಮಾತನಾಡಿದ್ದ ಪ್ರಧಾನಿ ಮೋದಿ, ನಕ್ಸಲರ ವಿರುದ್ಧದ ಹೋರಾಟದಲ್ಲಿ ಮಹತ್ವದ ಪ್ರಗತಿ ಸಾಧಿಸಲಾಗಿದೆ. ಆದರೆ, ಅಪಾಯ ಇಲ್ಲಿಗೆ ಮುಗಿದಿಲ್ಲ. ನಕ್ಸಲರ ಪ್ರಭಾವ ಕಡಿಮೆಯಾಗಿದ್ದರೂ, 'ದಿಮಾಗಿ ನಕ್ಸಲರು' ಹಲವು ರಾಜಕೀಯ ಪಕ್ಷಗಳು ಮತ್ತು ಸಂಘಟನೆಗಳಲ್ಲಿ ನುಸುಳಿ ಸಂವಿಧಾನ ಹಾಗೂ ಪ್ರಜಾಪ್ರಭುತ್ವದ ವಿರುದ್ಧ ಜನರನ್ನು ಪ್ರಚೋದಿಸುತ್ತಿದ್ದಾರೆ. ಇಂತಹವರನ್ನು ಗುರುತಿಸಿ ಸೋಲಿಸುವ ಮೂಲಕ ದೇಶದ ಭದ್ರತೆಯನ್ನು ಕಾಪಾಡಬೇಕು ಎಂದು ಕರೆ ನೀಡಿದರು.
ಈ ಹೇಳಿಕೆಗಳಿಂದ ಕೆಂಡಾಮಂಡಲಗೊಂಡಿರುವ ರಾಹುಲ್ ಗಾಂಧಿ, ಪ್ರಧಾನಿಗೆ ಮತ್ತೊಮ್ಮೆ ಬಹಿರಂಗ ಚರ್ಚೆಗೆ ಬರುವಂತೆ ಸವಾಲು ಹಾಕಿದ್ದಾರೆ. ಇದಕ್ಕೂ ಮೊದಲು, ರಾಮಲೀಲಾ ಮೈದಾನದಲ್ಲಿ ಇಂಡಿಯಾ ಮೈತ್ರಿಕೂಟದ ಬೃಹತ್ ಸಮಾವೇಶದಲ್ಲಿ, ಭಾರತದ ಮುಖ್ಯ ಚುನಾವಣಾ ಆಯುಕ್ತರಾದ ಜ್ಞಾನೇಶ್ ಕುಮಾರ್ ವಿರುದ್ಧ ಸಾಲು ಸಾಲು ಆರೋಪಗಳನ್ನು ಹೊರಿಸಿದ ರಾಹುಲ್ ಗಾಂಧಿ, 2024ರ ಲೋಕಸಭಾ ಚುನಾವಣೆಯಲ್ಲಿ ಇವಿಎಂ ಹಾಗೂ ಮತದಾರರ ಪಟ್ಟಿ ದುರ್ಬಳಕೆ ಮಾಡಿಕೊಂಡು 'ಮತಗಳ ಕಳವು' ನಡೆಸಲಾಯಿತು ಎಂದು ಆರೋಪಿಸಿ, ಮುಖಾಮುಖಿ ಚರ್ಚೆಗೆ ಸವಾಲು ಹಾಕಿದ್ದರು,(ಏಜೆನ್ಸೀಸ್).