ಹರಿಯಾಣದಲ್ಲಿ ರಾಹುಲ್ ಗಾಂಧಿ ಗಾರ್ಮೆಂಟ್ಸ್ಗೆ ಭೇಟಿ ನೀಡಿರುವುದು.
ನವದೆಹಲಿ: ಭಾರತದ ಆರ್ಥಿಕತೆಯನ್ನು ಮತ್ತೊಮ್ಮೆ ಡೆಡ್ ಎಕನಾಮಿ ಎಂದು ಕರೆದಿರುವ ಕಾಂಗ್ರೆಸ್ ನಾಯಕ ಮತ್ತು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಈ ಸ್ಥಿತಿಗೆ ಪ್ರಧಾನಿ ನರೇಂದ್ರ ಮೋದಿಯೇ ಕಾರಣ ಎಂದು ಶುಕ್ರವಾರ(ಜ. 23) ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಎಕ್ಸ್ನಲ್ಲಿ ಜವಳಿ ಕೈಗಾರಿಗೆ ಭೇಟಿ ನೀಡಿ ಅಲ್ಲಿನ ಮಾಲೀಕರು, ಉದ್ಯೋಗಿಗಳ ಜೊತೆ ಸಂವಾದ ನಡೆಸಿದ ವಿಡಿಯೋ ಪೋಸ್ಟ್ ಮಾಡಿರುವ ಅವರು, ಭಾರತದ ಮೇಲೆ ಅಮೆರಿಕ ಶೇ. 50ರಷ್ಟು ಸುಂಕ ವಿಧಿಸಿರುವುದು, ಮತ್ತು ಅದು ದೇಶದ ಜವಳಿ ಉದ್ಯಮದ ಮೇಲೆ ಬೀರಿದ ಪರಿಣಾ, ಕೇಂದ್ರ ತೆಗೆದುಕೊಂಡ ಕ್ರಮಗಳ ಬಗ್ಗೆ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಭಾರತೀಯ ಉತ್ಪನ್ನಗಳ ಮೇಲೆ ಅಮೆರಿಕ ಶೇ. 50ರಷ್ಟು ಸುಂಕ ವಿಧಿಸಿದ್ದು, ಇದು ಜವಳಿ ಉದ್ಯಮದ ಮೇಲೆ ತೀವ್ರ ಪರಿಣಾಮ ಬೀರಿದೆ. ಕಾರ್ಖಾನೆಗಳು ಮುಚ್ಚಿವೆ, ಉದ್ಯೋಗಗಳು ನಷ್ಟವಾಗಿವೆ ಹಾಗೂ ಆರ್ಡರ್‌ಗಳು ಕಡಿಮೆಯಾಗಿವೆ. ಇದರಿಂದಾಗಿ ನಮ್ಮ ಆರ್ಥಿಕತೆಯು ಸತ್ತ ಆರ್ಥಿಕತೆಯಾಗಿದೆ. 4.5 ಕೋಟಿ ಉದ್ಯೋಗಗಳು ಮತ್ತು ಲಕ್ಷಾಂತರ ವ್ಯವಹಾರಗಳು ಅಪಾಯದಲ್ಲಿದ್ದರೂ, ಪ್ರಧಾನಿ ಮೋದಿ ಯಾವುದರ ಬಗ್ಗೆಯೂ ಪ್ರತಿಕ್ರಿಯಿಸುತ್ತಿಲ್ಲ. ಸುಂಕಗಳ ಬಗ್ಗೆ ಮಾತನಾಡುತ್ತಿಲ್ಲ. ಮೋದಿ ಜೀ.. ಇದಕ್ಕೆ ನೀವೇ ಸಂಪೂರ್ಣ ಜವಾಬ್ದಾರರು. ಈ ಬಗ್ಗೆ ಗಮನ ಕೊಡಿ ಎಂದಿದ್ದಾರೆ.
ರಾಹುಲ್ ಗಾಂಧಿ ಆರೋಪಕ್ಕೆ ಕೇಂದ್ರ ತಿರುಗೇಟು
ರಾಹುಲ್ ಗಾಂಧಿಯವರ ಹೇಳಿಕೆಗೆ ತಿರುಗೇಟು ನೀಡಿರುವ ಕೇಂದ್ರ ಸಚಿವ ಗಿರಿರಾಜ್ ಸಿಂಗ್, ಭಾರತ ಈಗ ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕತೆಯಾಗಿದೆ. ಬಿಜೆಪಿ ಆಡಳಿತದಲ್ಲಿ 9 ಕೋಟಿ ಉದ್ಯೋಗಗಳು ಸೃಷ್ಟಿಯಾಗಿವೆ. ರಾಹುಲ್ ಗಾಂಧಿ ಸುಳ್ಳು ಮಾಹಿತಿಗಳನ್ನು ಹರಡುತ್ತಿದ್ದಾರೆ. ಜವಳಿ ಉದ್ಯಮ ಮತ್ತಷ್ಟು ಅಭಿವೃದ್ಧಿ ಹೊಂದುತ್ತಿದೆ ಎಂದು ಹೇಳಿದ್ದಾರೆ (ಏಜೆನ್ಸೀಸ್).