ಹಲ್ದ್ವಾನಿ ಶುದ್ಧೀಕರಣ ವಿವಾದದ ಕುರಿತು ಕಾಂಗ್ರೆಸ್ ಪ್ರತಿಭಟನೆ 
ದೇಶ

ರಾಹುಲ್‌ಗೆ FIR ಶಾಕ್; ಬಿಜೆಪಿ ವಿರುದ್ಧ ದೇಶಾದ್ಯಂತ ಹೋರಾಟಕ್ಕೆ ಕಾಂಗ್ರೆಸ್ ಸಜ್ಜು | Haldwani Purification Case

ಪ್ರಮುಖ ಮುಖ್ಯಾಂಶಗಳು

  • ಹಲ್ದ್ವಾನಿ ಪ್ರಕರಣದಲ್ಲಿ ರಾಹುಲ್ ವಿರುದ್ಧ ಎಫ್‌ಐಆರ್
  • ಖರ್ಗೆ ಅವಮಾನವನ್ನು ಖಂಡಿಸಿ ಕಾಂಗ್ರೆಸ್ ಆಕ್ರೋಶ
  • ಅಸ್ಪೃಶ್ಯತೆ ವಿಚಾರದಲ್ಲಿ ಬಿಜೆಪಿಗೆ ಕಾಂಗ್ರೆಸ್ ಟಾರ್ಗೆಟ್
Haldwani purification row: ಉತ್ತರಾಖಂಡದ ಹಲ್ದ್ವಾನಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ಸಂಬಂಧಿಸಿದ ‘ಶುದ್ಧೀಕರಣ’ ವಿವಾದದ ಬೆನ್ನಲ್ಲೇ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು ಕಾಂಗ್ರೆಸ್ ಪಾಳಯವನ್ನು ಕೆರಳಿಸಿದೆ. ಏನೇ ಆದರೂ ಈ ಬಗ್ಗೆ ದೇಶಾದ್ಯಂತ ಹೋಗಿ ಪ್ರತಿಭಟನೆ ನಡೆಸಲು ಕಾಂಗ್ರೆಸ್ ಸಜ್ಜಾಗಿದೆ.
ಹಲ್ದ್ವಾನಿಯಲ್ಲಿ ಖರ್ಗೆ ಅವರು ಕಾಂಗ್ರೆಸ್ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ್ದರು. ಬಳಿಕ ಆ ಸ್ಥಳದಲ್ಲಿ  ‘ಶುದ್ಧೀಕರಣ’ ಕಾರ್ಯಕ್ರಮ ನಡೆಸಲಾಗಿತ್ತು. ಈ ವಿಚಾರವನ್ನು ಉತ್ತರಾಖಂಡ ಬಿಜೆಪಿ ಅಧ್ಯಕ್ಷ ಮಹೇಂದ್ರ ಭಟ್ ಸಮರ್ಥಿಸಿಕೊಂಡಿದ್ದರು. ಇದನ್ನು ತೀವ್ರವಾಗಿ ಖಂಡಿಸಿದ್ದ ರಾಹುಲ್ ಗಾಂಧಿ, ಘಟನೆಗೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದರು.

ರಾಹುಲ್ ಗಾಂಧಿ ವಿರುದ್ಧ ಎಫ್‌ಐಆರ್

ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಇದೀಗ ರಾಹುಲ್ ಗಾಂಧಿ ವಿರುದ್ಧ ಹಲ್ದ್ವಾನಿಯಲ್ಲಿ ಎಫ್‌ಐಆರ್ ದಾಖಲಾಗಿದೆ. ಇದರಿಂದ ಕಾಂಗ್ರೆಸ್ ಮತ್ತಷ್ಟು ಆಕ್ರೋಶಗೊಂಡಿದ್ದು, ಪಕ್ಷದ ನಾಯಕನ ವಿರುದ್ಧ ಪ್ರಕರಣ ದಾಖಲಿಸಿರುವುದನ್ನು ರಾಜಕೀಯವಾಗಿ ಎದುರಿಸಲು ನಿರ್ಧರಿಸಿದೆ.

ಸಂಸತ್‌ನಲ್ಲೂ ಖರ್ಗೆ ವಿಚಾರ ಪ್ರಸ್ತಾಪ

ರಾಜ್ಯಸಭೆಯ ವಿರೋಧ ಪಕ್ಷದ ನಾಯಕರಾಗಿರುವ ಮಲ್ಲಿಕಾರ್ಜುನ ಖರ್ಗೆ ಕೂಡ ತಮ್ಮ ವಿರುದ್ಧ ನಡೆದಿರುವ ಅವಮಾನಕಾರಿ ಘಟನೆ ಕುರಿತು ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಧ್ವನಿ ಎತ್ತಿದ್ದರು.ತಮ್ಮ ಜಾತಿಯ ಹಿನ್ನೆಲೆಯನ್ನು ಮುಂದಿಟ್ಟುಕೊಂಡು ಪಕ್ಷದ ಅಧ್ಯಕ್ಷರನ್ನು ಗುರಿಯಾಗಿಸಿದರೂ, ಹಲವು ಹಿರಿಯ ನಾಯಕರು ನಿರೀಕ್ಷಿತ ಮಟ್ಟದಲ್ಲಿ ಪ್ರತಿಭಟನೆ ನಡೆಸಿಲ್ಲ ಎಂಬ ಬೇಸರವನ್ನು ಅವರು ವ್ಯಕ್ತಪಡಿಸಿದ್ದರು.

ದೇಶಾದ್ಯಂತ ಪ್ರತಿಭಟನೆಗೆ ಕಾಂಗ್ರೆಸ್ ಕರೆ

ರಾಹುಲ್ ಗಾಂಧಿ ವಿರುದ್ಧ ಎಫ್‌ಐಆರ್ ದಾಖಲಾಗಿರುವುದನ್ನು ಖಂಡಿಸಿರುವ ಕಾಂಗ್ರೆಸ್, ದೇಶಾದ್ಯಂತ ಪ್ರತಿಭಟನೆ ನಡೆಸುವಂತೆ ರಾಜ್ಯ ಘಟಕಗಳಿಗೆ ಸೂಚಿಸಿದೆ. ‘ಸಂವಿಧಾನ ಉಳಿಸಿ’ ಅಭಿಯಾನದ ಮೂಲಕ ದಲಿತರು ಮತ್ತು ಸಾಮಾಜಿಕ ನ್ಯಾಯದ ವಿಚಾರ ಎತ್ತುತ್ತಿರುವ ರಾಹುಲ್, ಇದೀಗ ಹಲ್ದ್ವಾನಿ ಪ್ರಕರಣವನ್ನೂ ಬಿಜೆಪಿ ವಿರುದ್ಧದ ಪ್ರಮುಖ ರಾಜಕೀಯ ಅಸ್ತ್ರವನ್ನಾಗಿ ಮಾಡುತ್ತಿದ್ದಾರೆ.

 ಅಸ್ಪೃಶ್ಯತೆಯ ವಿರುದ್ಧ ಧ್ವನಿ ಎತ್ತಿದ್ದಕ್ಕೆ ಎಫ್‌ಐಆರ್

ಕಾಂಗ್ರೆಸ್ ಎಸ್‌ಸಿ ವಿಭಾಗದ ಉಸ್ತುವಾರಿ ರಾಜೇಂದ್ರ ಪಾಲ್ ಗೌತಮ್ ಮಾತನಾಡಿ, ‘ಅಸ್ಪೃಶ್ಯತೆಯ ವಿರುದ್ಧ ಧ್ವನಿ ಎತ್ತಿದ್ದಕ್ಕೆ ರಾಹುಲ್ ಗಾಂಧಿ ವಿರುದ್ಧವೇ ಎಫ್‌ಐಆರ್ ದಾಖಲಾಗಿದೆ. ಇಂತಹ ದಬ್ಬಾಳಿಕೆಯನ್ನು ದೇಶದ ದಲಿತರು ಹಾಗೂ ಕಾಂಗ್ರೆಸ್ ಒಟ್ಟಾಗಿ ಎದುರಿಸಲಿದೆ. ನಮ್ಮ ನಾಯಕನ ವಿರುದ್ಧ ಕೇಸ್​ ದಾಖಲಿಸಿದರೂ ನಾವು ಸಾಂವಿಧಾನಿವಾಗಿ ಹೋರಾಟ ನಡೆಸುತ್ತೇವೆ’ ಎಂದು ಗೌತಮ್ ಹೇಳಿದ್ದಾರೆ.

2027ರ ಚುನಾವಣೆಗೂ ಮುನ್ನ ರಾಜಕೀಯ ಬಿಸಿ

ಹಲ್ದ್ವಾನಿ ‘ಶುದ್ಧೀಕರಣ’ ವಿವಾದ ಈಗ ಕಾಂಗ್ರೆಸ್-ಬಿಜೆಪಿ ಜಟಾಪಟಿ, 2027ರ ವಿಧಾನಸಭಾ ಚುನಾವಣೆಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ. ಉತ್ತರ ಪ್ರದೇಶ, ಉತ್ತರಾಖಂಡ, ಪಂಜಾಬ್ ಸೇರಿದಂತೆ ಹಲವು ರಾಜ್ಯಗಳಲ್ಲಿ ದಲಿತ ಮತದಾರರು ನಿರ್ಣಾಯಕವಾಗಿದ್ದು, ದಲಿತ ಗೌರವ ಮತ್ತು ಸಾಮಾಜಿಕ ನ್ಯಾಯದ ವಿಚಾರವನ್ನು ಮುಂದಿಟ್ಟುಕೊಂಡು ಬಿಜೆಪಿ ವಿರುದ್ಧ ಹೋರಾಡಲು ‘ಕೈ’ ಪಡೆ ಸಜ್ಜಾಗಿದೆ.
2024ರ ಲೋಕಸಭಾ ಚುನಾವಣೆಯಲ್ಲಿ ದಲಿತ ಮತದಾರರ ಬದಲಾದ ನಿಲುವು ಉತ್ತರ ಪ್ರದೇಶದ ಫಲಿತಾಂಶದ ಮೇಲೂ ಪರಿಣಾಮ ಬೀರಿತ್ತು ಎಂಬುದು ಕಾಂಗ್ರೆಸ್ ಲೆಕ್ಕಾಚಾರ. ಹೀಗಾಗಿ 2027ರ ಚುನಾವಣೆಗೆ ಮುನ್ನ ಇದೇ ವಿಚಾರವನ್ನು ಬಿಜೆಪಿ ವಿರುದ್ಧದ ರಾಜಕೀಯ ಅಸ್ತ್ರವನ್ನಾಗಿ ಬಳಸಲು ಪಕ್ಷ ಮುಂದಾಗಿದೆ. ರಾಹುಲ್ ವಿರುದ್ಧದ ಎಫ್‌ಐಆರ್‌ನ್ನೇ ದೊಡ್ಡ ಹೋರಾಟವಾಗಿ ರೂಪಿಸಲು ಕಾಂಗ್ರೆಸ್ ಸಜ್ಜಾಗಿದೆ.(ಏಜೆನ್ಸೀಸ್​).