Jharkhand Rajya Sabha | ರಾಹುಲ್ ನೇತೃತ್ವ ಮಿತ್ರಪಕ್ಷಗಳಿಗೆ ಇಷ್ಟವಿಲ್ಲ ಎಂದು ಬಿಜೆಪಿ ಕಿಡಿ 
ದೇಶ

ಸಂಖ್ಯಾಬಲವಿದ್ದರೂ ಸೋತ ಕಾಂಗ್ರೆಸ್ ಅಭ್ಯರ್ಥಿ; ರಾಹುಲ್ ನೇತೃತ್ವ ಮಿತ್ರಪಕ್ಷಗಳಿಗೆ ಇಷ್ಟವಿಲ್ಲ ಎಂದು ಬಿಜೆಪಿ ಕಿಡಿ! | Jharkhand Rajya Sabha

ಪ್ರಮುಖ ಮುಖ್ಯಾಂಶಗಳು

  • ರಾಹುಲ್ ಗಾಂಧಿ ನಾಯಕತ್ವದ ಮೇಲೆ ಮಿತ್ರಪಕ್ಷಗಳಿಗೆ ನಂಬಿಕೆಯಿಲ್ಲ
  • ಇಂಡಿ ಒಕ್ಕೂಟವನ್ನು ಒಟ್ಟಿಗೆ ಕೊಂಡೊಯ್ಯಲು ರಾಹುಲ್ ಅಸಮರ್ಥ
  • ಜಾರ್ಖಂಡ್ ಸೋಲಿನ ಬೆನ್ನಲ್ಲೇ ಬಿಜೆಪಿಯಿಂದ ತೀವ್ರ ವಾಗ್ದಾಳಿ
Jharkhand Rajya Sabha: ಜಾರ್ಖಂಡ್ ರಾಜ್ಯಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದ ಬೆನ್ನಲ್ಲೇ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ತೀವ್ರ ವಾಗ್ದಾಳಿ ನಡೆಸಿದೆ. ಈ ಫಲಿತಾಂಶವು ಇಂಡಿಯಾ (I.N.D.I.A) ಒಕ್ಕೂಟದೊಳಗೆ ರಾಹುಲ್ ಗಾಂಧಿ ನಾಯಕತ್ವದ ವಿರುದ್ಧ ಹೆಚ್ಚುತ್ತಿರುವ ಅಸಮಾಧಾನವನ್ನು ಪ್ರತಿಬಿಂಬಿಸುತ್ತದೆ ಎಂದು ಕೇಸರಿ ನಾಯಕರು ಆರೋಪಿಸಿದ್ದಾರೆ.
ಜಾರ್ಖಂಡ್‌ನ ಎರಡು ರಾಜ್ಯಸಭಾ ಸ್ಥಾನಗಳ ಪೈಕಿ ಒಂದರಲ್ಲಿ ಎನ್‌ಡಿಎ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಪರಿಮಳ್ ನತ್ವಾಣಿ ಅವರು ಕಾಂಗ್ರೆಸ್ ಅಭ್ಯರ್ಥಿ ಪ್ರಣವ್ ಝಾ ಅವರನ್ನು ಮಣಿಸಿ ಭರ್ಜರಿ ಜಯ ಸಾಧಿಸಿದರೆ, ಮತ್ತೊಂದು ಸ್ಥಾನವನ್ನು ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಅಭ್ಯರ್ಥಿ ಬೈದ್ಯನಾಥ್ ರಾಮ್ ಗೆದ್ದುಕೊಂಡಿದ್ದಾರೆ. ವಿಧಾನಸಭೆಯಲ್ಲಿ ಸ್ಪಷ್ಟ ಸಂಖ್ಯಾಬಲ ಹೊಂದಿದ್ದರೂ ಆಡಳಿತಾರೂಢ ಇಂಡಿಯಾ ಒಕ್ಕೂಟ ಎರಡೂ ಸ್ಥಾನಗಳನ್ನು ಗೆಲ್ಲಲು ವಿಫಲವಾಗಿರುವುದು ಈಗ ದೊಡ್ಡ ರಾಜಕೀಯ ಚರ್ಚೆಗೆ ಕಾರಣವಾಗಿದೆ.
ಈ ಫಲಿತಾಂಶದ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ ರಾಷ್ಟ್ರೀಯ ವಕ್ತಾರ ಶಹಜಾದ್ ಪೂನಾವಾಲಾ, ವಿರೋಧ ಪಕ್ಷಗಳ ಮಿತ್ರರನ್ನು ಒಟ್ಟಿಗೆ ಕೊಂಡೊಯ್ಯುವಲ್ಲಿ ರಾಹುಲ್ ಗಾಂಧಿ ಸಂಪೂರ್ಣ ವಿಫಲರಾಗಿದ್ದಾರೆ ಎಂಬುದಕ್ಕೆ ಈ ಸೋಲೇ ಸಾಕ್ಷಿ, ಇದು ನೇರವಾಗಿ ರಾಹುಲ್ ಗಾಂಧಿ ಅವರಿಗೆ ಆದ ಸೋಲು. ಇದು ಇಂಡಿಯಾ ಒಕ್ಕೂಟಕ್ಕೆ ಮತ್ತು ಕಾಂಗ್ರೆಸ್‌ಗೆ ಆದ ಹಿನ್ನಡೆ. ರಾಹುಲ್ ಪ್ರಧಾನಿ ಹುದ್ದೆಗೆ ಸೂಕ್ತ ಅಭ್ಯರ್ಥಿಯಲ್ಲ ಎಂಬುದನ್ನು ಇದು ತೋರಿಸುತ್ತದೆ. ಅವರು ಇಂಡಿಯಾ ಮೈತ್ರಿಕೂಟಕ್ಕೆ ಕೇವಲ ಹೊರೆಯಾಗಿದ್ದು, ಮಿತ್ರಪಕ್ಷಗಳಿಗೆ ಅವರು ಸ್ವೀಕಾರಾರ್ಹ ನಾಯಕರಲ್ಲ ಎಂದು ಪೂನಾವಾಲಾ ವ್ಯಂಗ್ಯವಾಡಿದ್ದಾರೆ.

ಇಂಡಿಯಾ ಒಕ್ಕೂಟದಲ್ಲಿ ಬಿರುಕು ಎಂದ ಬಿಜೆಪಿ

ಅನುಕೂಲಕರ ಸಂಖ್ಯಾಬಲ ಹೊಂದಿದ್ದರೂ ಅದನ್ನು ರಾಜಕೀಯ ಗೆಲುವಾಗಿ ಪರಿವರ್ತಿಸಲು ವಿರೋಧ ಪಕ್ಷಗಳ ಒಕ್ಕೂಟ ಮತ್ತೊಮ್ಮೆ ವಿಫಲವಾಗಿದೆ ಎಂದು ಪೂನಾವಾಲಾ ಲೇವಡಿ ಮಾಡಿದ್ದಾರೆ. ಆಂತರಿಕ ಕಲಹದ ಕಾರಣದಿಂದಾಗಿಯೇ ಇಂಡಿಯಾ ಒಕ್ಕೂಟವು ಗೆಲ್ಲುವ ಪಂದ್ಯವನ್ನು ಕೈಚೆಲ್ಲಿ ಧೂಳೀಪಟವಾಗಿದೆ, ಎರಡೂ ಸ್ಥಾನಗಳನ್ನು ಸುಲಭವಾಗಿ ಗೆಲ್ಲುವಷ್ಟು ಸಂಖ್ಯೆ ಇದ್ದರೂ, ಕಾಂಗ್ರೆಸ್ ತನ್ನ ಮಿತ್ರಪಕ್ಷಗಳ ಬೆಂಬಲವನ್ನು ಉಳಿಸಿಕೊಳ್ಳಲು ವಿಫಲವಾಯಿತು. ಮೈತ್ರಿಕೂಟದ ನಾಯಕರಲ್ಲಿದ್ದ ಅಸಮಾಧಾನವೇ ಕಾಂಗ್ರೆಸ್ ಅಭ್ಯರ್ಥಿಯ ಸೋಲಿಗೆ ಕಾರಣ ಎಂದು ಅವರು ಆರೋಪಿಸಿದ್ದಾರೆ. ಜಾರ್ಖಂಡ್‌ನ ಎರಡೂ ಸ್ಥಾನಗಳು ಇಂಡಿಯಾ ಒಕ್ಕೂಟಕ್ಕೆ ಸಿಗಬೇಕಿತ್ತು. ಜೆಎಂಎಂ ತನ್ನ ಸ್ಥಾನವನ್ನು ಗೆದ್ದುಕೊಂಡರೆ, ಕಾಂಗ್ರೆಸ್ ಮಾತ್ರ ಸೋತಿದೆ. ಏಕೆಂದರೆ ಜೆಎಂಎಂ, ಆರ್‌ಜೆಡಿ ಮತ್ತು ಎಡಪಕ್ಷಗಳು ಕಾಂಗ್ರೆಸ್ ಅಭ್ಯರ್ಥಿಯ ವಿರುದ್ಧವೇ ಬಂಡಾಯವೆದ್ದಿವೆ ಎಂದು ಪೂನಾವಾಲಾ ಆರೋಪಿಸಿದ್ದಾರೆ.
ರಾಹುಲ್ ಗಾಂಧಿ ನಾಯಕತ್ವದ ಮೇಲೆ ಅಸಮಾಧಾನ
ವಿರೋಧ ಪಕ್ಷಗಳ ಒಕ್ಕೂಟದಲ್ಲಿ ರಾಹುಲ್ ಗಾಂಧಿ ಸ್ಥಾನಮಾನವನ್ನು ಪ್ರಶ್ನಿಸಲು ಬಿಜೆಪಿ ಈ ಫಲಿತಾಂಶವನ್ನು ಪ್ರಮುಖ ಅಸ್ತ್ರ ಮಾಡಿಕೊಂಡಿದೆ. ಅವರು ಈಗಾಗಲೇ 99 ಚುನಾವಣೆಗಳನ್ನು ಸೋತಿದ್ದಾರೆ. ಕಾಂಗ್ರೆಸ್ ಒಳಗಡೆಯೇ ಅವರ ವಿರುದ್ಧ ಅಸಮಾಧಾನದ ಧ್ವನಿಗಳು ಕೇಳಿಬರುತ್ತಿರುವುದನ್ನು ನಾವು ನೋಡಿದ್ದೇವೆ. ಅವರ ಆಪ್ತ ವಲಯದ ನಾಯಕರೇ ಅವರನ್ನು ತೊರೆಯುತ್ತಿದ್ದಾರೆ ಎಂದು ಪೂನಾವಾಲಾ ಹೇಳಿದ್ದಾರೆ. ಇತ್ತೀಚೆಗೆ ನಡೆದ ವಿರೋಧ ಪಕ್ಷಗಳ ಸಭೆಗಳಲ್ಲಿ ಹಲವು ಪ್ರಮುಖ ಮಿತ್ರಪಕ್ಷಗಳು ರಾಹುಲ್ ನಾಯಕತ್ವದ ಬಗ್ಗೆ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿರುವುದನ್ನು ಉಲ್ಲೇಖಿಸಿರುವ ಅವರು, ಒಕ್ಕೂಟದೊಳಗೆ ಕಾಂಗ್ರೆಸ್ ನಾಯಕನ ವಿರುದ್ಧ ತಳಮಳ ಶುರುವಾಗಿದೆ ಎಂದಿದ್ದಾರೆ.

ಚರ್ಚೆಗೆ ಗ್ರಾಸವಾಯ್ತು ಅಡ್ಡ ಮತದಾನ!

ಜಾರ್ಖಂಡ್ ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನ (Cross-voting) ನಡೆದಿರುವುದು ಈಗ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡುತ್ತಿದೆ. ಗೆಲುವಿಗೆ ಬೇಕಿದ್ದ ನಿಖರ 28 ಮತಗಳನ್ನು ಪಡೆಯುವ ಮೂಲಕ ನತ್ವಾಣಿ ವಿಜಯಶಾಲಿಯಾದರೆ, ಕಾಂಗ್ರೆಸ್‌ನ ಪ್ರಣವ್ ಝಾ ಕೇವಲ 20 ಮತಗಳನ್ನು ಪಡೆಯಲಷ್ಟೇ ಶಕ್ತರಾದರು. ವಿಧಾನಸಭೆಯಲ್ಲಿ ಇಂಡಿಯಾ ಒಕ್ಕೂಟಕ್ಕೆ ಭಾರಿ ಸಂಖ್ಯಾಬಲವಿದ್ದರೂ ನತ್ವಾಣಿ ಗೆದ್ದಿರುವುದು, ಮೈತ್ರಿಕೂಟದ ಕೆಲವು ಶಾಸಕರು ತಮ್ಮದೇ ಮೈತ್ರಿಯ ಅಧಿಕೃತ ತಂತ್ರಗಾರಿಕೆಯ ವಿರುದ್ಧವಾಗಿ ಮತ ಚಲಾಯಿಸಿದ್ದಾರೆ ಎಂಬ ಸಂಶಯವನ್ನು ಸ್ಪಷ್ಟಪಡಿಸಿದೆ. ಪ್ರಮುಖ ಚುನಾವಣೆಗಳ ಸಂದರ್ಭದಲ್ಲಿ ಮಿತ್ರಪಕ್ಷಗಳ ನಡುವಿನ ಸಮನ್ವಯತೆ ಮತ್ತು ಶಾಸಕರ ಶಿಸ್ತಿನ ಬಗ್ಗೆ ಈ ಫಲಿತಾಂಶವು ದೊಡ್ಡ ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.(ಏಜೆನ್ಸೀಸ್​​).