ಉನ್ನಾವೋ ಸಂತ್ರಸ್ತ ಕುಟುಂಬ 
ದೇಶ

ರಾಹುಲ್ ಗಾಂಧಿ ಭೇಟಿಯಾದ ಉನ್ನಾವೋ ಅತ್ಯಾಚಾರ ಸಂತ್ರಸ್ತೆ ಕುಟುಂಬ; ಆರೋಪಿ ಸೆಂಗಾರ್​ಗೆ ಹೈಕೋರ್ಟ್ ಜಾಮೀನು | Rahul Gandhi

ನವದೆಹಲಿ: 2017ರಲ್ಲಿ ಉತ್ತರಪ್ರದೇಶದ ಉನ್ನಾವೋದಲ್ಲಿ ನಡೆದಿದ್ದ ಅತ್ಯಾಚಾರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಮಾಜಿ ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಸೆಂಗಾರ್‌ಗೆ ದೆಹಲಿ ಹೈಕೋರ್ಟ್ ಜಾಮೀನು ನೀಡಿದ ಬಳಿಕ ಇಂದು(ಡಿ. 24) ಸಂಜೆ ದೆಹಲಿಯಲ್ಲಿ ಸಂತ್ರಸ್ತೆಯ ಕುಟುಂಬ ಕಾಂಗ್ರೆಸ್ ನಾಯಕ ಮತ್ತು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯನ್ನು ಭೇಟಿ ಮಾಡಿದೆ ಎಂದು ವರದಿಯಾಗಿದೆ.
ಇದಕ್ಕೂ ಮೊದಲು ದೆಹಲಿ ಹೈಕೋರ್ಟ್ ಆರೋಪಿ ಸೆಂಗಾರ್​ಗೆ ಜಾಮೀನು ನೀಡಿದ್ದನ್ನು ಖಂಡಿಸಿ ಮೃತ ಬಾಲಕಿಯ ತಾಯಿ ಮತ್ತು ಸಹೋದರಿ ದೆಹಲಿಯಲ್ಲಿ ಪ್ರತಿಭಟನೆ ನಡೆಸಿದ್ದರು. ಈ ವೇಳೆ ಅರೆಸೈನಿಕ ಪಡೆ ಅವರನ್ನು ಮಾಧ್ಯಮಗಳ ಮುಂದೆ ಮಾತನಾಡದಂತೆ ತಡೆದು ಸ್ಥಳದಿಂದ ಅವರನ್ನು ಕರೆದೊಯ್ದಿದ್ದರು.
ಬಾಲಕಿ ಅತ್ಯಾಚಾರ ಕೊಲೆ ಪ್ರಕರಣ ಮತ್ತು ಅವರ ತಂದೆ ಕೊಲೆ ಪ್ರಕರಣದಲ್ಲಿ ನ್ಯಾಯಾಲಯದಲ್ಲಿ ಸೆಂಗಾರ್ ಅವರಿಗೆ ಶಿಕ್ಷೆಯಾಗಿದ್ದು, ತನ್ನ ಅಪರಾಧ ಸಾಬೀತು ಮತ್ತು ಶಿಕ್ಷೆಯನ್ನು ಅವರು ಪ್ರಶ್ನಿಸಿದ್ದಾರೆ. ಈ ಹಿನ್ನೆಲೆ ನ್ಯಾಯಾಲಯ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುವವರೆಗೂ ಅವರಿಗೆ 15 ಲಕ್ಷ ಶ್ಯೂರಿಟಿ ಮತ್ತು ಹಲವು ಷರತ್ತುಗಳನ್ನು ವಿಧಿಸಿ ಜೈಲಿನಿಂದ ಬಿಡುಗಡೆ ಮಾಡಿದೆ.
ಇನ್ನೂ ರಾಹುಲ್ ಗಾಂಧಿ ಭೇಟಿಗೂ ಮುನ್ನ ಮಾತನಾಡಿರುವ ಸಂತ್ರಸ್ತೆಯ ತಾಯಿ, ನಾವು ಅವರನ್ಉ ಭೇಟಿ ಮಾಡಿ ಏನನ್ನು ಎದುರಿಸುತ್ತಿದ್ದೇವೆ ಎಂಬುದನ್ನು ಹೇಳುತ್ತೇವೆ. ಪ್ರಧಾನಿ, ಗೃಹಸಚಿವರು ಹಾಗೂ ರಾಷ್ಟ್ರಪತಿಗಳನ್ನು ಸಹ ನಾವು ಭೇಟಿ ಮಾಡಲು ಬಯಸುತ್ತೇವೆ. ನಮಗೆ ನ್ಯಾಯ ಬೇಕು ಎಂದು ಹೇಳಿದ್ದಾರೆ (ಏಜೆನ್ಸೀಸ್).