ದೀಪಕ್ ಕುಮಾರ್ ಮತ್ತು ರಾಹುಲ್ ಗಾಂಧಿ
ನವದೆಹಲಿ: ಇತ್ತೀಚೆಗೆ ಉತ್ತರಾಖಂಡದಲ್ಲಿ ವೃದ್ಧ ಮುಸ್ಲಿಂ ವ್ಯಾಪಾರಿ ಪರ ವಹಿಸಿ ನನ್ನ ಹೆಸರು ಮೊಹಮ್ಮದ್ ದೀಪಕ್ ಎಂದು ಬಜರಂಗದಳವನ್ನು ಎದುರಿಸಿ ದೇಶಾದ್ಯಂತ ಸಂಚಲನ ಮೂಡಿಸಿದ್ದ ಮೊಹಮ್ಮದ್ ದೀಪಕ್ @ ದೀಪಕ್ ಕುಮಾರ್ ಇಂದು(ಫೆ. 23) ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು(Rahul Gandhi) ಭೇಟಿಯಾಗಿದ್ದಾರೆ.
ನವದೆಹಲಿಯ 10 ಜನಪತ್ನ ಲೋಕಸಭೆ ವಿರೋಧ ಪಕ್ಷದ ನಾಯಕನ ಮನೆಗೆ ಸ್ನೇಹಿತರ ಜೊತೆ ಭೇಟಿ ನೀಡಿದ್ದ ದೀಪಕ್ ಕುಮಾರ್ ಅವರನ್ನು ಸ್ವಾಗತಿಸಿ ಅಭಿನಂದಿಸಿರುವ ರಾಹುಲ್ ಗಾಂಧಿ, ದೀಪಕ್ ಅವರನ್ನು ದೇಶದ ಏಕತೆಯ ಸಂಕೇತ ಎಂದು ಕರೆದಿದ್ದಾರೆ.
ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ರಾಹುಲ್ ಗಾಂಧಿ, ಪ್ರತಿ ಮನುಷ್ಯನೂ ಸಮಾನ
ಇದೇ ಭಾರತೀಯತೆ, ಇದೇ ಮೋಹಬ್ಬತ್‌ನ ಅಂಗಡಿ. ಉತ್ತರಾಖಂಡದ ಸಹೋದರ 'ಮೊಹಮ್ಮದ್ ದೀಪಕ್'ರನ್ನು ಭೇಟಿಯಾದದ್ದು, ಏಕತೆ ಮತ್ತು ಧೈರ್ಯದ ಇಂತಹ ಜ್ಯೋತಿಯೇ ಪ್ರತಿ ಭಾರತೀಯ ಯುವಕನಲ್ಲಿ ಉರಿಯಬೇಕು ಎಂದು ಬರೆದಿದ್ದಾರೆ.
ಕೆಲವು ದಿನಗಳ ಹಿಂದೆ ಮುಸ್ಲಿಂ ವೃದ್ಧ ವ್ಯಾಪಾರಿಯೊಬ್ಬರು ಅಂಗಡಿ ಹೆಸರು ಬಾಬಾ ಎಂಬ ಹಿಂದೂ ಹೆಸರಿಟ್ಟಿದ್ದನ್ನು ಖಂಡಿಸಿ ಬಜರಂಗದಳದ ಕೆಲವು ಸದಸ್ಯರು ಅಂಗಡಿ ಬಳಿ ಹೋಗಿ ಗಲಾಟೆ ಮಾಡಿದ್ದರು. ಮತ್ತೆ ಹೆಸರನ್ನು ತೆಗೆಯುವಂತೆ ಒತ್ತಾಯ ಮಾಡಿದ್ದರು. ಇದೇ ವೇಳೆ ಅದೇ ಪ್ರದೇಶದಲ್ಲಿ ಜಿಮ್ ನಡೆಸುತ್ತಿದ್ದ ದೀಪಕ್ ಕುಮಾರ್ ಅವರು ಮುಸ್ಲಿಂ ವ್ಯಾಪಾರಿ ಪರವಾಗಿ ಅವರನ್ನು ಎದುರಿಸಿದ್ದರು.
ಈ ವೇಳೆ ಬಜರಂಗದಳದ ಸದಸ್ಯರು ನಿಮ್ಮ ಹೆಸರೇನು ಎಂದು ಕೇಳಿದಾಗ ಮೊಹಮ್ಮದ್ ದೀಪಕ್ ಎಂದು ಹೇಳಿದ್ದು, ಅದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಹಳ ವೈರಲ್ ಆಗಿತ್ತು. ದೇಶಾದ್ಯಂತ ಬಹಳ ಚರ್ಚೆಯಾಗಿತ್ತು. ಬಳಿಕ ಅವರ ಜಿಮ್ ಬಳಿಯೂ ಹಿಂದೂತ್ವ ಕಾರ್ಯಕರ್ತರು ತೆರಳಿ ಗಲಾಟೆ ಮಾಡಿದ್ದರು. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ದೀಪಕ್ ಕುಮಾರ್ ಮೇಲೆ ಪ್ರಕರಣ ಉತ್ತರಾಖಂಡ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ (ಏಜೆನ್ಸೀಸ್).