Rahul Gandhi meets farmers | ರೈತರ ಜೊತೆ ರಾಹುಲ್ ಭೇಟಿ 
ದೇಶ

ರೈತರ ಜೊತೆ ರಾಹುಲ್ ಭೇಟಿ... ಪೂರ್ವ ನಿಯೋಜಿತ ನಾಟಕ ಎಂದು ಬಿಜೆಪಿ ಕಿಡಿ | Rahul Gandhi meets farmers

ದೆಹಲಿ: ಭಾರತ ಮತ್ತು ಅಮೆರಿಕ ವ್ಯಾಪಾರ ಒಪ್ಪಂದದ ಕುರಿತು ಅನ್ನದಾತರ ಕಳವಳಗಳನ್ನು ಕೇಳಲು ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ (Rahul Gandhi meets farmers) ಶುಕ್ರವಾರ ತಮ್ಮ ಕಚೇರಿಯಲ್ಲಿ ರೈತರ ನಿಯೋಗವನ್ನು ಭೇಟಿಯಾಗಿದ್ದು, ಇದನ್ನು ಬಿಜೆಪಿ ನಾಯಕರು ಟೀಕಿಸಿದ್ದಾರೆ.
ಬಿಜೆಪಿಯ ಅಧಿಕೃತ ಎಕ್ಸ್​​ ಖಾತೆಯಲ್ಲಿ ಪೋಸ್ಟ್​ ಹಂಚಿಕೊಳ್ಳಲಾಗಿದ್ದು, ಈ ಸಂವಾದವನ್ನು "ಸ್ಟೇಜ್​ ಮ್ಯಾನೇಜ್​" ಎಂದು ಕರೆದಿದೆ. ಕಾಂಗ್ರೆಸ್ ನಾಯಕ ದಾರಿತಪ್ಪಿಸುವ ನಿರೂಪಣೆಗಳು ಎಂದು ಕರೆಯುವುದನ್ನು ಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಿದೆ.

ಬಿಜೆಪಿ ಕೌಂಟರ್​

ರಾಹುಲ್ ಗಾಂಧಿ ಮತ್ತು ರೈತರ ಭೇಟಿಯ ಚಿತ್ರವನ್ನು ಬಿಜೆಪಿ ಹಂಚಿಕೊಂಡಿದ್ದು, ಹರಿಯಾಣ ಮತ್ತು ಪಂಜಾಬ್‌ನಲ್ಲಿ ಕಾಂಗ್ರೆಸ್‌ನ ಮಿತ್ರಪಕ್ಷಗಳ ನಾಯಕರು ಎಂದು ಹಲವಾರು ಜನರನ್ನು ಗುರುತಿಸಿದೆ. ರಾಹುಲ್​ರ ಮತ್ತೊಂದು ಸುಳ್ಳು ದೇಶದ ಮುಂದೆ ಬಯಲಾಗಿದೆ. ರೈತರೊಂದಿಗಿನ ಸಭೆ ಎಂದು ಹೇಳಿಕೊಳ್ಳಲಾಗಿದ್ದ ಸಭೆ ವಾಸ್ತವವಾಗಿ ಕಾಂಗ್ರೆಸ್ ಕಾರ್ಯಕರ್ತರ ಸಭೆಯಾಗಿತ್ತು. ರಾಹುಲ್ ಗಾಂಧಿ ಈ ದೇಶದ ಬಹುತೇಕ ಪ್ರತಿಯೊಂದು ಸಂಸ್ಥೆ ಮತ್ತು ಸಮುದಾಯವನ್ನು ರಾಜಕೀಯಗೊಳಿಸಿದ್ದಾರೆ ಮತ್ತು ಅಗೌರವಿಸಿದ್ದಾರೆ, ಈಗ ರೈತರನ್ನು ಸಹ ಬಿಡುತ್ತಿಲ್ಲ ಎಂದು ಪೋಸ್ಟ್​ನಲ್ಲಿ ಬರೆಯಲಾಗಿದೆ.
ಸ್ಟೇಜ್​ ಮ್ಯಾನೇಜ್​​ ರಾಜಕೀಯವು ನಿಜವಾದ ನಾಯಕತ್ವವನ್ನು ಬದಲಾಯಿಸಲು ಸಾಧ್ಯವಿಲ್ಲ. ದೇಶವು ಕಾಂಗ್ರೆಸ್ಸಿನ ಚಿತ್ರಕಥೆಗಳು ಮತ್ತು ರಾಜಕೀಯ ಗಿಮಿಕ್‌ಗಳ ಬದಲಾಗಿ ಪ್ರಾಮಾಣಿಕತೆಗೆ ಅರ್ಹವಾಗಿದೆ ಎಂದು ಪೋಸ್ಟ್​ನಲ್ಲಿ ಉಲ್ಲೇಖಿಸಲಾಗಿದೆ.

ಕೇಂದ್ರ ಸಚಿವ ಪಿಯೂಷ್ ಗೋಯಲ್ ಹೇಳಿದ್ದೇನು...?

ಈ ಸಭೆಯ ಕುರಿತಾಗಿ ಪ್ರತಿಕ್ರಿಯಿಸಿರುವ ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್, ರಾಹುಲ್​ ಹೇಳಿಕೆಗಳನ್ನು ನಕಲಿ ಮತ್ತು ಕಟ್ಟುಕಥೆ ಎಂದು ಕರೆದಿದ್ದು, ರೈತರಲ್ಲಿ ಗೊಂದಲ ಮೂಡಿಸುವುದು ಮತ್ತು ಸರ್ಕಾರದ ಆರ್ಥಿಕ ನೀತಿಗಳ ವಿರುದ್ಧ ಭಾವನೆಯನ್ನು ಹುಟ್ಟುಹಾಕುವುದು ಈ ಸಂವಾದದ ಪ್ರಮುಖ ಉದ್ದೇಶವಾಗಿದೆ ಎಂದರು.
ಎಕ್ಸ್‌ನಲ್ಲಿ ವಿಡಿಯೋ ಪೋಸ್ಟ್ ಮಾಡಿರುವ ಗೋಯಲ್, ಈ ಸಭೆಯು ಪಕ್ಷದ ಕಾರ್ಯಕರ್ತರನ್ನು ರೈತ ನಾಯಕರಂತೆ ಬಿಂಬಿಸುವ ಮೂಲಕ ಕೃತಕ ನಿರೂಪಣೆಯನ್ನು ನಿರ್ಮಿಸುವ ಪ್ರಯತ್ನವಾಗಿದ್ದು, ಭಾರತ-ಅಮೆರಿಕ ವ್ಯಾಪಾರ ಚೌಕಟ್ಟಿನಲ್ಲಿ ಸರ್ಕಾರವು ರೈತರ ಹಿತಾಸಕ್ತಿಗಳನ್ನು ಸಂಪೂರ್ಣವಾಗಿ ರಕ್ಷಿಸಿದೆ ಎಂದು ಸಮರ್ಥಿಸಿಕೊಂಡರು.

ಕೃಷಿ ಸಂಘಗಳು ಕಳವಳ

ಲೋಕಸಭೆಯ ವಿಪಕ್ಷದ ನಾಯಕ ರಾಹುಲ್​ ಗಾಂಧಿ, ದೇಶಾದ 17 ಪ್ರಮುಖ ರೈತ ಸಂಘಗಳ ಪ್ರತಿನಿಧಿಗಳೊಂದಿಗೆ ಚರ್ಚೆ ನಡೆಸಿದರು. ವ್ಯಾಪಾರ ಚೌಕಟ್ಟು ಭಾರತೀಯ ರೈತರ ಮೇಲೆ, ವಿಶೇಷವಾಗಿ ಜೋಳ, ಸೋಯಾಬೀನ್, ಹತ್ತಿ, ಹಣ್ಣುಗಳು ಮತ್ತು ಬೀಜಗಳನ್ನು ಬೆಳೆಯುವ ರೈತರ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು ಎಂದು ಸಂಘಗಳು ಆತಂಕ ವ್ಯಕ್ತಪಡಿಸಿದವು.
ಈ ಒಪ್ಪಂದವು ಕೃಷಿ ಆದಾಯ ಮತ್ತು ರಕ್ಷಣೆಯನ್ನು ದುರ್ಬಲಗೊಳಿಸುತ್ತದೆ ಎಂದಿರುವ ರೈತ ಪ್ರತಿನಿಧಿಗಳು, ಈ ಒಪ್ಪಂದವನ್ನು ವಿರೋಧಿಸಲು ರಾಷ್ಟ್ರವ್ಯಾಪಿ ಚಳುವಳಿಯ ಅಗತ್ಯವನ್ನು ವಿವರಿಸಿದ್ದಾರೆ ಎನ್ನಲಾಗಿದೆ(ಏಜೆನ್ಸೀಸ್​​).