Rahul Gandhi | ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ
ದೆಹಲಿ: ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi), ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಷಾ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಮತ್ತೊಮ್ಮೆ ಟೀಕೆಗೆ ಗುರಿಯಾಗಿದ್ದಾರೆ.
ಉತ್ತರ ಪ್ರದೇಶದ ರಾಯಬರೇಲಿಯಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಪ್ರಧಾನಿ ಮತ್ತು ಗೃಹ ಸಚಿವರು ದೇಶದ ಹಿತಾಸಕ್ತಿಗೆ ವಿರುದ್ಧವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸುವುದರ ಜೊತೆಗೆ ಅವರನ್ನು ದೇಶದ್ರೋಹಿಗಳು ಎಂದು ಕರೆದಿದ್ದಾರೆ.
ನಿಮ್ಮ ಪ್ರಧಾನಿ ಮತ್ತು ಗೃಹ ಸಚಿವರು ದೇಶದ್ರೋಹಿಗಳು. ಬಿಜೆಪಿ-ಆರ್‌ಎಸ್‌ಎಸ್‌ನವರು ನಿಮ್ಮ ಮುಂದೆ ಬಂದು ನರೇಂದ್ರ ಮೋದಿ-ಅಮಿತ್ ಷಾ ಬಗ್ಗೆ ಮಾತನಾಡಿದಾಗಲೆಲ್ಲಾ, ಅವರಿಬ್ಬರೂ ದೇಶದ್ರೋಹಿಗಳು ಎಂದು ಬಹಿರಂಗವಾಗಿ ಹೇಳಿ. ಬಿಜೆಪಿ-ಆರ್‌ಎಸ್‌ಎಸ್‌ನವರು ದೇಶದ್ರೋಹಿಗಳು, ಏಕೆಂದರೆ ನೀವೆಲ್ಲರೂ ಸೇರಿ ದೇಶವನ್ನು ಮಾರಾಟ ಮಾಡಲು ಕೆಲಸ ಮಾಡಿದ್ದೀರಿ. ಬಿಜೆಪಿ ಮತ್ತು ಆರ್‌ಎಸ್‌ಎಸ್ ಸಂಸ್ಥೆಗಳು ನಮ್ಮ ಸಂವಿಧಾನ, ವೀರ ಪಾಸಿ ಜಿ, ಗಾಂಧೀಜಿ ಮತ್ತು ಅಂಬೇಡ್ಕರ್ ಆಶಯಗಳ ಮೇಲೆ ದಾಳಿ ನಡೆಸಿವೆ ಎಂದು ವಾಗ್ದಾಳಿ ನಡೆಸಿದರು.
ದೇಶಕ್ಕೆ ಬಡಿಯಲಿದೆ ಬೃಹತ್ ಆರ್ಥಿಕ ಬಿರುಗಾಳಿ
ಪೆಟ್ರೋಲ್ ಮತ್ತು ಡೀಸೆಲ್ ಸೇರಿದಂತೆ ದೈನಂದಿನ ಅತ್ಯಗತ್ಯ ವಸ್ತುಗಳ ಬೆಲೆಗಳು ನಿರಂತರವಾಗಿ ಏರುತ್ತಿದ್ದು, ಇದು ಸಾಮಾನ್ಯ ಕುಟುಂಬಗಳ ಮೇಲೆ ತೀವ್ರ ಒತ್ತಡವನ್ನು ಉಂಟುಮಾಡುತ್ತಿದೆ ಎಂದು ರಾಹುಲ್ ಗಾಂಧಿ ಆತಂಕ ವ್ಯಕ್ತಪಡಿಸಿದರು. ದೇಶದ ಸಾಮಾನ್ಯ ನಾಗರಿಕರು ಆರ್ಥಿಕ ಸಂಕಷ್ಟದಲ್ಲಿದ್ದಾರೆ, ಆದರೆ ಸರ್ಕಾರವು ಜನರ ಸಮಸ್ಯೆಗಳನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ. ದೇಶವು ದೊಡ್ಡ ಆರ್ಥಿಕ ಬಿಕ್ಕಟ್ಟಿನತ್ತ ಸಾಗುತ್ತಿದೆ. ಮುಂದಿನ ಮೂರರಿಂದ ನಾಲ್ಕು ತಿಂಗಳಲ್ಲಿ ನೀವು ಇದುವರೆಗೆ ನೋಡಿರದ ಮಟ್ಟದ ಹಣದುಬ್ಬರಕ್ಕೆ ದೇಶ ಸಾಕ್ಷಿಯಾಗಲಿದೆ. ಮುಂಬರುವ ದಿನಗಳಲ್ಲಿ ಗ್ಯಾಸ್, ಭತ್ತ ಮತ್ತು ಖಾದ್ಯ ತೈಲಗಳ ಬೆಲೆಗಳು ಹೇಗೆ ಗಗನಕ್ಕೇರುತ್ತವೆ ಎಂಬುದನ್ನು ನೀವೇ ನೋಡಿ ಎಂದು ಎಚ್ಚರಿಕೆ ನೀಡಿದರು.
ಟೊಳ್ಳು ಘೋಷಣೆಗಳಿಂದ ದೇಶಕ್ಕೆ ಯಾವುದೇ ಪ್ರಯೋಜನವಿಲ್ಲ, ಸಂವಿಧಾನವನ್ನು ರಕ್ಷಿಸುವುದು ಇಂದಿನ ತುರ್ತು ಅಗತ್ಯವಾಗಿದ್ದು, ಪ್ರಧಾನಿ ಮೋದಿ ದೇಶದ ಉನ್ನತ ಆರ್ಥಿಕ ರಚನೆ ಮತ್ತು ವ್ಯವಸ್ಥೆಗಳನ್ನು ಉದ್ಯಮಿಗಳಿಗೆ ಹಾಗೂ ಅಮೆರಿಕಕ್ಕೆ ಹಸ್ತಾಂತರಿಸಿದ್ದಾರೆ. ಈಗ ಅದೇ ಪ್ರಧಾನಿ ಜನರಿಗೆ ವಿದೇಶಕ್ಕೆ ಹೋಗಬೇಡಿ, ಚಿನ್ನ ಖರೀದಿಸಬೇಡಿ ಎಂದು ಹೇಳುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ರಾಹುಲ್ ಭಾಷೆ ಪಾಕಿಸ್ತಾನದಂತೆ ಇದೆ ಎಂದ ಬಿಜೆಪಿ!
ರಾಹುಲ್ ಗಾಂಧಿ ಈ ವಿವಾದಾತ್ಮಕ ಹೇಳಿಕೆಗೆ ಭಾರತೀಯ ಜನತಾ ಪಕ್ಷ ಅತ್ಯಂತ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದು, ರಾಹುಲ್ ಇಡೀ ದೇಶಕ್ಕೆ ಅಪಮಾನ ಮಾಡಿದ್ದಾರೆ ಎಂದು ಆರೋಪಿಸಿದೆ.
ರಾಹುಲ್ ಗಾಂಧಿ ದೇಶದ ಜನರನ್ನು ಅವಮಾನಿಸಿದ್ದಾರೆ. ಅವರು ಮಾತನಾಡುತ್ತಿರುವುದು ಪಾಕಿಸ್ತಾನದ ಭಾಷೆ. ಪ್ರಧಾನಿ ಮತ್ತು ಗೃಹ ಸಚಿವರನ್ನು ದೇಶದ್ರೋಹಿಗಳು ಎನ್ನುವ ಮೂಲಕ ಅವರು ಪರೋಕ್ಷವಾಗಿ ದೇಶದ 140 ಕೋಟಿ ಭಾರತೀಯರನ್ನು ದೇಶದ್ರೋಹಿಗಳು ಎಂದು ಕರೆದಿದ್ದಾರೆ. ವಂಶಪಾರಂಪರ್ಯ ರಾಜಕಾರಣದ ಉತ್ಪನ್ನವಾಗಿರುವ ರಾಹುಲ್ ಇಂತಹ ಹೇಳಿಕೆಗಳು ಅವರ ವಿಕೃತ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತವೆ. ಅವರ ಆಲೋಚನೆಗಳು ಅರ್ಬನ್ ನಕ್ಸಲರಂತೆ ಇವೆ ಎಂದು ಬಿಜೆಪಿ ನಾಯಕರು ಕಠಿಣ ಶಬ್ದಗಳಲ್ಲಿ ತಿರುಗೇಟು ನೀಡಿದ್ದಾರೆ(ಏಜೆನ್ಸೀಸ್).