ಕ್ಷೇತ್ರ ಪುನರ್ವಿಂಗಡಣೆ ಎಂಬ ದಕ್ಷಿಣ ವಿರೋಧಿ ಸಂಚು! ದೆಹಲಿಯಿಂದ ತಮಿಳುನಾಡನ್ನು ಆಳುವ ಕನಸು ಬಿಡಿ! ಕೇಂದ್ರದ ವಿರುದ್ಧ ಹರಿಹಾಯ್ದ ರಾಹುಲ್ ಗಾಂಧಿ
ಚೆನ್ನೈ: ತಮಿಳುನಾಡಿನ ವಿಧಾನಸಭಾ ಚುನಾವಣಾ ಕಣ ಕಾವೇರುತ್ತಿದ್ದಂತೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ(Rahul Gandhi) ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ವಿರುದ್ಧ ವಾಗ್ದಾಳಿ ತೀವ್ರಗೊಳಿಸಿದ್ದಾರೆ. ಮೋದಿ ಅವರು ದೆಹಲಿಯಿಂದ ತಮಿಳುನಾಡನ್ನು ನಿಯಂತ್ರಿಸಲು ಬಯಸುತ್ತಿದ್ದಾರೆ. ಆದರೆ ಈ ಮಣ್ಣಿನ ಸಂಸ್ಕೃತಿ ಮತ್ತು ಗೌರವವನ್ನು ಯಾರೂ ಅಲುಗಾಡಿಸಲು ಸಾಧ್ಯವಿಲ್ಲ ಎಂದು ಗುಡುಗಿದ್ದಾರೆ.
ಈ ಬಗ್ಗೆ ಶನಿವಾರ ತಮಿಳುನಾಡಿನ ತಿರುನೆಲ್ವೇಲಿಯಲ್ಲಿ ನಡೆದ ಬೃಹತ್ ಚುನಾವಣಾ ಸಮಾವೇಶದಲ್ಲಿ ಮಾತನಾಡಿದ ರಾಹುಲ್, ಮಹಿಳಾ ಮೀಸಲಾತಿ ಮತ್ತು ಕ್ಷೇತ್ರ ಪುನರ್ವಿಂಗಡಣೆಯ ವಿಷಯಗಳನ್ನು ಪ್ರಸ್ತಾಪಿಸಿ ಕೇಂದ್ರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ಧಾರೆ.
ಕ್ಷೇತ್ರ ಪುನರ್ವಿಂಗಡಣೆ: ದಕ್ಷಿಣ ಭಾರತದ ಧ್ವನಿ ಅಡಗಿಸುವ ಸಂಚು?
ರಾಹುಲ್ ಗಾಂಧಿ ಅವರ ಭಾಷಣದ ಪ್ರಮುಖ ಗುರಿ ಕ್ಷೇತ್ರ ಪುನರ್ವಿಂಗಡಣೆ ಆಗಿತ್ತು. ಭವಿಷ್ಯದಲ್ಲಿ ನಡೆಯಲಿರುವ ಕ್ಷೇತ್ರ ಪುನರ್ವಿಂಗಡಣೆಯು ತಮಿಳುನಾಡು ಸೇರಿದಂತೆ ದಕ್ಷಿಣದ ರಾಜ್ಯಗಳ ರಾಜಕೀಯ ಪ್ರಭಾವವನ್ನು ಕುಗ್ಗಿಸುವ ಸಂಚು ಎಂದು ಎಚ್ಚರಿಸಿದ್ದಾರೆ.
ಜನಸಂಖ್ಯೆ ನಿಯಂತ್ರಣದಲ್ಲಿ ಮಾದರಿಯಾಗಿರುವ ತಮಿಳುನಾಡಿನಂತಹ ರಾಜ್ಯಗಳಿಗೆ ಶಿಕ್ಷೆ ನೀಡಲು ಮೋದಿ ಸರ್ಕಾರ ಮುಂದಾಗಿದೆ. ಉತ್ತರ ಭಾರತದ ರಾಜ್ಯಗಳ ಸ್ಥಾನಗಳನ್ನು ಹೆಚ್ಚಿಸಿ, ದಕ್ಷಿಣ ಭಾರತದ ಧ್ವನಿಯನ್ನು ಅಡಗಿಸಲು ಈ ತಂತ್ರ ಹೂಡಲಾಗಿದೆ ಎಂದು ವಿಪಕ್ಷ ನಾಯಕ ಗಂಭೀರವಾಗಿ ಆರೋಪಿಸಿದ್ದಾರೆ.
ದಕ್ಷಿಣದ ಮೇಲೆ ರಾಹುಲ್ ಗಾಂಧಿ ಹಿಡಿತ
ರಾಜಕೀಯ ವಿಶ್ಲೇಷಕರ ಪ್ರಕಾರ, ರಾಹುಲ್ ಗಾಂಧಿ ಅವರು ತಮಿಳುನಾಡಿನಲ್ಲಿ ಎತ್ತುತ್ತಿರುವ ವಿಷಯಗಳು ಅತ್ಯಂತ ಪ್ರಸ್ತುತವಾಗಿವೆ.
ಸಂಸ್ಕೃತಿ ಮತ್ತು ಭಾಷೆಯ ಅಸ್ತ್ರ: ಬಿಜೆಪಿಯನ್ನು ಹೊರಗಿನವರು ಎಂದು ಬಿಂಬಿಸುವ ಮೂಲಕ ತಮಿಳು ಅಸ್ಮಿತೆಯನ್ನು ಕಾಂಗ್ರೆಸ್ ಮತ್ತು ಡಿಎಂಕೆ ಮೈತ್ರಿಕೂಟ ಬಳಸಿಕೊಳ್ಳುತ್ತಿದೆ.
ಸಮಾನ ಹಂಚಿಕೆಯ ಪ್ರಶ್ನೆ: ತೆರಿಗೆ ಹಂಚಿಕೆ ಮತ್ತು ಸಂಸದೀಯ ಸ್ಥಾನಗಳ ವಿಚಾರದಲ್ಲಿ ದಕ್ಷಿಣ ಭಾರತಕ್ಕೆ ಆಗುತ್ತಿರುವ ಅನ್ಯಾಯವನ್ನು ರಾಹುಲ್ ತಮ್ಮ ಪ್ರಚಾರದ ಕೇಂದ್ರಬಿಂದುವಾಗಿಸಿಕೊಂಡಿದ್ದಾರೆ.
ಮುಂದಿನ ಹಾದಿ: ಚುನಾವಣೆ ಯಾರ ಪರ?
ತಮಿಳುನಾಡಿನಲ್ಲಿ ಎಂ.ಕೆ. ಸ್ಟಾಲಿನ್ ನೇತೃತ್ವದ ಡಿಎಂಕೆ ಮತ್ತು ಕಾಂಗ್ರೆಸ್ ಮೈತ್ರಿಕೂಟವು ಮೋದಿಯವರ ಒಂದು ರಾಷ್ಟ್ರ, ಒಂದು ಸಂಸ್ಕೃತಿ ನೀತಿಯ ವಿರುದ್ಧ 'ವೈವಿಧ್ಯತೆಯ' ಅಸ್ತ್ರವನ್ನು ಬಳಸುತ್ತಿದೆ. ರಾಹುಲ್ ಗಾಂಧಿ ಅವರ ಈ ಭಾಷಣವು ತಳಮಟ್ಟದ ಮತದಾರರಲ್ಲಿ ಹೊಸ ಸಂಚಲನ ಮೂಡಿಸಿದ್ದು, ಬಿಜೆಪಿ ಈ ಆರೋಪಗಳಿಗೆ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದು ಕುತೂಹಲಕಾರಿಯಾಗಿದೆ,(ಏಜೆನ್ಸೀಸ್).