ಡಿಸಿಎಂ ಡಿ.ಕೆ.ಶಿವಕುಮಾರ್ 
ದೇಶ

ರಾಹುಲ್ ಗಾಂಧಿಯೇ ನಮ್ಮ ನಾಯಕ; ಅವರನ್ನು ಪಿಎಂ ಮಾಡುವುದೇ ನಮ್ಮ ಮತ್ತು ಪ್ರಿಯಾಂಕಾ ಗಾಂಧಿಯವರ ಗುರಿ: ಡಿಕೆಶಿ | D.K.Shivakumar

ನವದೆಹಲಿ: ಕಾಂಗ್ರೆಸ್​​ನಲ್ಲಿ ಪ್ರಿಯಾಂಕಾ ಗಾಂಧಿಯವರನ್ನು ಮುನ್ನಲೆಗೆ ತರಬೇಕು ಎನ್ನುವ ಮಾತುಗಳನ್ನು ತಳ್ಳಿ ಹಾಕಿರುವ ಡಿಸಿಎಂ ಡಿ.ಕೆ.ಶಿವಕುಮಾರ್(D.K.Shivakumar), ರಾಹುಲ್ ಗಾಂಧಿಯೇ ನಮ್ಮ ನಾಯಕ, ಅವರನ್ನು ಪ್ರಧಾನಿ ಮಾಡುವುದೇ ನಮ್ಮ ಮತ್ತು ಪ್ರಿಯಾಂಕಾ ಗಾಂಧಿಯವರ ಗುರಿ ಎಂದು ಹೇಳಿದ್ದಾರೆ.
ಈ ಕುರಿತು ದೆಹಲಿಯಲ್ಲಿ ಮಾತನಾಡಿರುವ ಅವರು, ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ನನಗೆ ತಿಳಿದಿಲ್ಲ. ನಮ್ಮ ನಾಯಕರು ಎಐಸಿಸಿ ಅಧ್ಯಕ್ಷರು. ನಮ್ಮ ನಾಯಕರು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ. ಪ್ರಿಯಾಂಕಾ ಗಾಂಧಿಗೂ ಪ್ರಧಾನಿಯಾಗುವ ಆಸೆ ಇಲ್ಲ. ರಾಹುಲ್ ಅವರನ್ನು ದೇಶದ ಪ್ರಧಾನಿಯನ್ನಾಗಿ ಮಾಡಲು ಅವರು ಬದ್ಧರಾಗಿದ್ದಾರೆ ಎಂದು ತಿಳಿಸಿದ್ದಾರೆ.
ಈ ಮೊದಲು ಉತ್ತರ ಪ್ರದೇಶದ ಕಾಂಗ್ರೆಸ್ ಸಂಸದ ಇಮ್ರಾನ್ ಮಸೂದ್, ಪ್ರಿಯಾಂಕಾ ಗಾಂಧಿಯವರನ್ನು ಪ್ರಧಾನ ಮಂತ್ರಿಯನ್ನಾಗಿ ಕಾಂಗ್ರೆಸ್ ಮುನ್ನೆಲೆಗೆ ತರಬೇಕು. ಅವರಲ್ಲಿ ನಾಯಕತ್ವದ ಗುಣಗಳಿವೆ ಎಂದು ಹೇಳಿದ್ದರು. 
ಇಮ್ರಾನ್ ಮಾತಿಗೆ ಪ್ರತಿಕ್ರಿಯೆ ನೀಡಿದ್ದ ಪ್ರಿಯಾಂಕಾ ಗಾಂಧಿಯವರ ಪತಿ ರಾಬರ್ಟ್ ವಾದ್ರಾ, ಎಲ್ಲಾ ವರ್ಗದ ಜನರು ಪ್ರಿಯಾಂಕಾ ಅವರನ್ನು ಅತ್ಯುನ್ನತ ಸ್ಥಾನದಲ್ಲಿ ನೋಡಲು ಬಯಸುತ್ತಾರೆ. ಅವರು ಈಗಾಗಲೇ ತಮ್ಮ ನಾಯಕತ್ವದ ಗುಣಗಳನ್ನು ಸಾಬೀತುಪಡಿಸಿದ್ದಾರೆ. ಜನರು ಇಂದಿರಾ ಗಾಂಧಿಯನ್ನು ಅವರಲ್ಲಿ ನೋಡುತ್ತಿದ್ದಾರೆ ಎಂದಿದ್ದರು (ಏಜೆನ್ಸೀಸ್).