Himanta Sarma | ನಂದಿಗ್ರಾಮ ಅಭ್ಯರ್ಥಿ ಬಂಧನ ಸಮರ್ಥಿಸಿಕೊಳ್ಳುತ್ತಾ ಕಾಂಗ್ರೆಸ್​ ವಿರುದ್ಧ ಹಿಮಂತ ಶರ್ಮಾ ವಾಗ್ದಾಳಿ!  
ದೇಶ

ರಾಹುಲ್ ಕಂಡರೆ ನಗು ಬರುತ್ತೆ, ಆತ ಒಬ್ಬ ಹುಚ್ಚ: ನಂದಿಗ್ರಾಮ ಅಭ್ಯರ್ಥಿ ಬಂಧನ ಸಮರ್ಥಿಸಿಕೊಳ್ಳುತ್ತಾ ಕಾಂಗ್ರೆಸ್​ ವಿರುದ್ಧ ಹಿಮಂತ ಶರ್ಮಾ ವಾಗ್ದಾಳಿ! | Himanta Sarma

Himanta Sarma: ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರು ಪಶ್ಚಿಮ ಬಂಗಾಳದ ನಂದಿಗ್ರಾಮ ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿಯ ಬಂಧನವನ್ನು ಟೀಕಿಸಿದ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದು, ಅವರನ್ನು ಹುಚ್ಚ ಎಂದು ಕರೆದಿದ್ದಾರೆ. ಹಳೆಯ ಪ್ರಕರಣಗಳಲ್ಲಿ ಬಾಕಿ ಇರುವ ವಾರಂಟ್‌ಗಳ ಆಧಾರದ ಮೇಲೆ ಪೊಲೀಸರು ಮಿಲನ್ ಪ್ರಧಾನ್ ಅವರನ್ನು ಬಂಧಿಸಿದ್ದಾರೆ ಮತ್ತು ಅದು ಅವರ ಕರ್ತವ್ಯವಾಗಿತ್ತು ಎಂದು ಹಿಮಂತ್​ ಸಮರ್ಥಿಸಿಕೊಂಡಿದ್ದಾರೆ.
ಮಿಲನ್ ಪ್ರಧಾನ್​ ತಲೆಮರೆಸಿಕೊಂಡಿದ್ದರಿಂದ ಈ ಹಿಂದೆ ಬಂಧಿಸಲು ಸಾಧ್ಯವಾಗಿರಲಿಲ್ಲ ಎಂದು ಸ್ಥಳೀಯ ಪೊಲೀಸರ ಪೊಲೀಸರು ಹೇಳಿರುವುದಾಗಿ ವರದಿಯಾಗಿದೆ. ಕೂಚ್ ಬಿಹಾರದ ಮಧುಪುರ ಸತ್ರದಲ್ಲಿ ಮಾತನಾಡಿದ ಅಸ್ಸಾಂ ಸಿಎಂ ಹಿಮಂತ ಬಿಸ್ವ ಶರ್ಮಾ, ಕೊಲೆ ಆರೋಪಿಗೆ ಕಾಂಗ್ರೆಸ್ ಸ್ಪರ್ಧಿಸಲು ಅವಕಾಶ ನೀಡಿದೆ ಎಂದು ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್​ನ ಅಭ್ಯರ್ಥಿಯನ್ನು ನೀವು ಏನೆಂದು ಕರೆಯುತ್ತೀರಿ....? 2007 ರಲ್ಲಿ ಅವರ ವಿರುದ್ಧ ಎರಡು ಅಥವಾ ಮೂರು ಕೊಲೆ ಪ್ರಕರಣಗಳು ದಾಖಲಾಗಿವೆ ಎಂದು ನಾನು ಪತ್ರಿಕೆಗಳಲ್ಲಿ ಓದಿದ್ದೇನೆ. ಇಂತಹ ವಿಷಯಗಳು ಬೆಳಕಿಗೆ ಬಂದಾಗ, ಪೊಲೀಸರು ಅವರನ್ನು ಖಂಡಿತವಾಗಿ ಬಂಧಿಸಬೇಕಾಗುತ್ತದೆ ಏಕೆಂದರೆ ಅದು ಅವರ ಕರ್ತವ್ಯ ಎಂದರು.
ಮುಂದುವರೆದು ಮಾತನಾಡಿದ ಶರ್ಮಾ, ರಾಹುಲ್ ಗಾಂಧಿಯವರನ್ನು ನೋಡಿದಾಗಲೆಲ್ಲಾ ನನಗೆ ನಗು ಬರುತ್ತದೆ. ಅವರು ಒಬ್ಬ ಹುಚ್ಚ. ಕೆಲವೊಮ್ಮೆ ಗಡ್ಡದೊಂದಿಗೆ ಕಾಣಿಸಿಕೊಳ್ಳುತ್ತಾರೆ, ಕೆಲವೊಮ್ಮೆ ಕ್ಲೀನ್ ಶೇವ್ ಮಾಡಿಕೊಂಡಿರುತ್ತಾರೆ ಮತ್ತು ಮತ್ತೆ, ಕೆಲವೊಮ್ಮೆ ವಿದೇಶದಲ್ಲಿರುತ್ತಾರೆ ಮತ್ತು ಕೆಲವೊಮ್ಮೆ ಭಾರತದಲ್ಲಿರುತ್ತಾರೆ. ಅವರು ಒಬ್ಬ ಹುಚ್ಚ ವ್ಯಕ್ತಿಯಷ್ಟೇ ಎಂದು ಹಿಮಂತ್​ ವ್ಯಂಗ್ಯವಾಡಿದ್ದಾರೆ.
ಬಂಗಾಳದ ಮಾಜಿ ಸಿಎಂ ಮಮತಾ ಬ್ಯಾನರ್ಜಿ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್​ ಹಂಚಿಕೊಂಡಿದ್ದು, ಈ ಬಂಧನ ನಡೆದಿರುವ ಸಮಯ ಅನೇಕ ರೀತಿಯ ಅನುಮಾನಗಳಿಗೆ ಕಾರಣವಾಗಿದ್ದು, ಹಳೆಯ ಪ್ರಕರಣಗಳನ್ನು ಮತ್ತೆ ಕೆದಕುವುದು ಬಿಜೆಪಿಯ ಹಳೆಯ ತಂತ್ರ. ನಾವು ಕಾಂಗ್ರೆಸ್‌ಗೆ ಬೆಂಬಲ ಸೂಚಿಸಿದ ತಕ್ಷಣವೇ ಈ ಅವಸರದ ಕ್ರಮ ಕೈಗೊಂಡಿದ್ದೇಕೆ..? ಇದು ಬಿಜೆಪಿಯ ಸೇಡಿನ ರಾಜಕೀಯದ ಮತ್ತೊಂದು ಉದಾಹರಣೆಯಾಗಿದ್ದು, ಮತ ದರೋಡೆ ಮತ್ತು ಬೆದರಿಕೆಗಳ ಮೂಲಕ ಚುನಾವಣಾ ಸಂಸ್ಥೆ ಹಾಗೂ ಬಿಜೆಪಿ ಜೋಡಿ ಪ್ರತಿದಿನ ಪ್ರಜಾಪ್ರಭುತ್ವವನ್ನು ಹತ್ಯೆ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಡಿಸಿದರು.

ಪೊಲೀಸರು ಹೇಳೋದೇನು...?

2007 ರ ನಂದಿಗ್ರಾಮ ಭೂಸ್ವಾಧೀನ ವಿರೋಧಿ ಚಳವಳಿಗೆ ಸಂಬಂಧಿಸಿದ ಜಾಮೀನು ರಹಿತ ನಾಲ್ಕು ಬಾಕಿ ಇರುವ ಬಂಧನ ವಾರಂಟ್‌ಗಳ ಆಧಾರದ ಮೇಲೆ ಕಾಂಗ್ರೆಸ್​ ಅಭ್ಯರ್ಥಿ ಪ್ರಧಾನ್​ರನ್ನು ಬಂಧಿಸಲಾಗಿದೆ. ಈ ಪ್ರಕರಣಗಳು ಕೊಲೆ, ಕೊಲೆ ಯತ್ನ, ಕೊಲೆ ಮಾಡುವ ಉದ್ದೇಶದಿಂದ ಅಪಹರಣ, ಸಾಕ್ಷ್ಯ ನಾಶಪಡಿಸುವುದು, ಅತಿಕ್ರಮಣ ಪ್ರವೇಶ, ಆಯುಧಗಳು ಮತ್ತು ಮಾರಕ ಶಸ್ತ್ರಾಸ್ತ್ರಗಳೊಂದಿಗೆ ದಂಗೆ ಎದ್ದಿರುವ ಆರೋಪಗಳಿಗೆ ಸಂಬಂಧಿಸಿವೆ ಎಂದು ಪೊಲೀಸ್​ ಮೂಲಗಳು ತಿಳಿಸಿವೆ.
ಅಕ್ಟೋಬರ್ 6 ರಂದು ನಡೆಯಲಿರುವ ಉಪಚುನಾವಣೆಗೆ ಮುಂಚಿತವಾಗಿ ನಡೆದ ಈ ಬಂಧನವು ರಾಜಕೀಯ ವಲಯದಲ್ಲಿ ಹೊಸ ಚರ್ಚೆಯನ್ನು ಹುಟ್ಟುಹಾಕಿದ್ದು, ಬಂಧನದ ಸಮಯವನ್ನು ಪ್ರಶ್ನಿಸಿ, ವಿರೋಧ ಪಕ್ಷವನ್ನು ಗುರಿಯಾಗಿಸಲು ಈ ಪ್ರಕರಣವನ್ನು ಬಳಸಲಾಗುತ್ತಿದೆ ಎಂದು ಕಾಂಗ್ರೆಸ್ ಮತ್ತು ತೃಣಮೂಲ ಕಾಂಗ್ರೆಸ್ ಆರೋಪಿಸಿದರೆ, ಬಿಜೆಪಿ ಇದನ್ನು ತಳ್ಳಿಹಾಕುತ್ತಾ, ಬಾಕಿ ಇರುವ ಕ್ರಿಮಿನಲ್ ಪ್ರಕರಣಗಳಿಗೆ ಸಂಬಂಧಿಸಿದೆ ಈ ಬೆಳವಣಿಗೆ ನಡೆದಿರುವುದಾಗಿ ಸಮರ್ಥನೆಗಿಳಿದಿದೆ.