ಸಂಸದ ಸಂಬಿತ್ ಪಾತ್ರ 
ದೇಶ

ರಾಹುಲ್ ಗಾಂಧಿ ಚೀನಾದ ರೋಬೋಟ್; ಕಾಂಗ್ರೆಸ್ ಸಂಸದ ಮನೀಷ್ ತಿವಾರಿ ಹೇಳಿಕೆಗೆ ಸಂಬಿತ್ ಪಾತ್ರಾ ತಿರುಗೇಟು | Sambit Patra

ನವದೆಹಲಿ: ಭಾರತವು ಚೀನಾದ ರೋಬೋಟ್‌ಗಳನ್ನು ಎದುರಿಸಬೇಕಾಗಬಹುದು ಎಂಬ ಕಾಂಗ್ರೆಸ್ ಸಂಸದ ಮನೀಶ್ ತಿವಾರಿ ಅವರ ಹೇಳಿಕೆಗೆ ಮಂಗಳವಾರ(ಆ. 25) ಬಿಜೆಪಿ ವಕ್ತಾರ ಮತ್ತು ಸಂಸದ ಸಂಬಿತ್ ಪಾತ್ರ(Sambit Patra) ತೀಕ್ಷ್ಯ ಪ್ರತಿಕ್ರಿಯೆ ನೀಡಿದ್ದು, ರಾಹುಲ್ ಗಾಂಧಿ ಚೀನಾದ ರೋಬೋಟ್ ಎಂದು ವ್ಯಂಗ್ಯವಾಡಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, ಮೊದಲು ನಾವು ಎಲ್‌ಒಸಿಯಲ್ಲಿ ಮತ್ತು ಅಂತರರಾಷ್ಟ್ರೀಯ ಗಡಿಗಳಲ್ಲಿಯೂ ಕಾಂಗ್ರೆಸ್ ಮನಸ್ಥಿತಿಯ ವಿರುದ್ಧ ಹೋರಾಡಬೇಕು. ಏಕೆಂದರೆ ಅವರು ವಾಸ್ತವವಾಗಿ ನಮ್ಮ ಶತ್ರುಗಳ ಆಧಾರಸ್ತಂಭಗಳು. ಅವರು ತಪ್ಪು ಮಾಹಿತಿಯನ್ನು ಹರಡುವವರು. ಡೋಕ್ಲಾಮ್ ಬಿಕ್ಕಟ್ಟು ನಡೆಯುತ್ತಿರುವಾಗ ಚೀನಾದ ಡೇರೆಯೊಳಗೆ ಕಂಡುಬಂದವರು ಎಂದು ಕಿಡಿಕಾರಿದ್ದಾರೆ.

ಮನೀಷ್ ತಿವಾರಿ ಹೇಳಿದ್ದೇನು?

ಇತ್ತೀಚೆಗೆ ಚೀನಾದ ಕಂಪನಿಯೊಂದು ತನ್ನ ರೋಬೋಟ್ ಒಲಿಂಪಿಕ್ ಚಾಂಪಿಯನ್ ಉಸೇನ್ ಬೋಲ್ಟ್ ಅವರ ದಾಖಲೆಯನ್ನು ಮುರಿದಿದೆ ಎಂದು ಘೋಷಿಸಿದ ಹಿನ್ನೆಲೆಯಲ್ಲಿ ಅದರ ಬಗ್ಗೆ ನ್ಯೂಯಾರ್ಕ್ ಟೈಮ್ಸ್ ನಲ್ಲಿ ಬಂದ ವರದಿಯೊಂದನ್ನು ಕಾಂಗ್ರೆಸ್ ಸಂಸದ ಮನೀಷ್ ತಿವಾರಿ ತಮ್ಮ ಎಕ್ಸ್ ಖಾತೆಯಲ್ಲಿ ಶೇರ್ ಮಾಡಿ ಪೋಸ್ಟ್ ಹಂಚಿಕೊಂಡಿದ್ದರು.
ಭಾರತ ಜಾಗರೂಕರಾಗಿಲ್ಲದಿದ್ದರೆ, ನಾವು ನಿಜವಾದ ನಿಯಂತ್ರಣ ರೇಖೆಯಲ್ಲಿ ಚೀನಾದ ಸೈನ್ಯದ ರೋಬೋಟ್‌ಗಳನ್ನು ಎದುರಿಸಬೇಕಾಗುತ್ತದೆ. ಚೀನಾ ಅದ್ಭುತ ರೀತಿಯಲ್ಲಿ ಮನುಷ್ಯರನ್ನು ಹೋಲುವ ರೋಬೋಟ್‌ಗಳನ್ನು ತಯಾರಿಸುತ್ತಿದೆ. ಆದ್ದರಿಂದ, ನಾವು ಪ್ರಗತಿ ಹೊಂದುತ್ತಿದ್ದೇವೆ ಎಂದು ಹೆಮ್ಮೆಪಡುತ್ತಿರುವಾಗ, ನಮ್ಮ ನಿಜವಾದ ಸ್ಥಾನವನ್ನು ನಾವು ಪರಿಶೀಲಿಸಬೇಕು. ನಾವು ಎಷ್ಟು ಹಿಂದಿದ್ದೇವೆ ಎಂಬುದನ್ನು ನಾವು ತಿಳಿದುಕೊಳ್ಳಬೇಕು. ಚೀನಾ ಈಗಾಗಲೇ 67 ಪ್ರಮುಖ ತಂತ್ರಜ್ಞಾನಗಳಲ್ಲಿ ಅಮೆರಿಕವನ್ನು ಮೀರಿಸಿದೆ ಎಂದಿದ್ದರು.
ಉಸೇನ್ ಬೋಲ್ಟ್ ಅವರ ದಾಖಲೆಯನ್ನು ಮುರಿದ ಹುಮನಾಯ್ಡ್ ರೋಬೋಟ್ ಅನ್ನು ಚೀನಾದ ಕಂಪನಿ ಯುನಿಟ್ರೀ ರಚಿಸಿದೆ. ತನ್ನ ರೋಬೋಟ್ ಸೂಪರ್‌ಮ್ಯಾನ್ ಎಂದು ಹೇಳಿದ್ದು, ಗಂಟೆಗೆ ಗರಿಷ್ಠ 45.6 ಕಿಲೋಮೀಟರ್ ವೇಗವಾಗಿ ಓಡುತ್ತದೆ ಎಂದು ತಿಳಿಸಿದೆ. ಈ ರೋಬೋಟ್ ನಿಂತಿರುವ ಸ್ಥಾನದಿಂದ ಎರಡು ಮೀಟರ್‌ಗಳವರೆಗೆ ಹಾರಬಲ್ಲದು ಎಂದು ಪ್ರತಿಪಾದಿಸಿದೆ (ಏಜೆನ್ಸೀಸ್).