ಪ್ರಧಾನಿ ಮೋದಿ ಮತ್ತು ರಾಹುಲ್ ಗಾಂಧಿ
ಲಖನೌ: ವಿದೇಶಿಗಳಿಗೆ ಪ್ರಯಾಣ ಮಾಡೋದನ್ನು ಕಡಿಮೆ ಮಾಡಿ ಎಂದು ದೇಶದ ಜನರಿಗೆ ಕರೆ ನೀಡಿರುವ ಪ್ರಧಾನಿ ತಾವೇ ವಿದೇಶಗಳಿಗೆ ತೆರಳಿದ್ದಾರೆ. ತಮ್ಮ ಮಾತನ್ನು ಅವರೇ ಪಾಲಿಸಿಲ್ಲ ಎಂದು ಕಾಂಗ್ರೆಸ್ ನಾಯಕ ಮತ್ತು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ(Rahul Gandhi) ವಾಗ್ದಾಳಿ ನಡೆಸಿದ್ದಾರೆ.
ರಾಯ್ಬರೇಲಿಯಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿರುವ ಅವರು, ಮುಂದಿನ ದಿನಗಳು ಬಹಳ ಕಠಿಣವಾಗಲಿದ್ದು, ಆರ್ಥಿಕ ಆಘಾತ ಬರಲಿದೆ ಎಂದು ಎಚ್ಚರಿಸಿದ್ದಾರೆ. ಮತ್ತು ಇದು ಅದಾನಿ, ಅಂಬಾನಿ ಅಥವಾ ಮೋದಿ ಮೇಲೆ ಪರಿಣಾಮ ಬೀರಲ್ಲ. ಯುವಕರು, ಕಾರ್ಮಿಕರು ಹಾಗೂ ಸಣ್ಣ ವ್ಯಾಪಾರಿಗಳ ಮೇಲೆ ಪರಿಣಾಮ ಬೀರಲಿದೆ ಎಂದಿದ್ದಾರೆ.
ಪ್ರಧಾನಿ ಜನರಿಗೆ ಚಿನ್ನ ಖರೀದಿಸಬೇಡಿ, ಎಣ್ಣೆ ಕಡಿಮೆ ಬಳಸಿ ಹಾಗೂ ವಿದೇಶಿ ಪ್ರಯಾಣ ಮಾಡಬೇಡಿ ಎಂದು ಹೇಳ್ತಾರೆ. ಆದರೆ ಅವರೇ ಒಮ್ಮೆ ಜಪಾನ್, ಮತ್ತೊಮ್ಮೆ ನಾರ್ವೆ ಸೇರಿ ಐದು ದೇಶಗಳ ಪ್ರವಾಸ ಕೈಗೊಂಡಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ದೇಶವು ಹಲವು ವರ್ಷಗಳಿಂದ ಕಾಣದ ದೊಡ್ಡ ಆರ್ಥಿಕ ಆಘಾತ ಎದುರಿಸಲಿದೆ. ವಿಷಾದದ ಸಂಗತಿ ಅಂದ್ರೆ, ಅದರ ಪರಿಣಾಮ ಅದಾನಿ ಮತ್ತು ಅಂಬಾನಿ ಅಥವಾ ಪ್ರಧಾನಿಯವರ ಮೇಲೆ ಬೀರುವುದಿಲ್ಲ, ಬದಲಿಗೆ ಸಾಮಾನ್ಯ ಜನರ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ ಎಂದಿದ್ದಾರೆ.
ಮುಂದುವರೆದು, ದೇಶದಲ್ಲಿ ಹೀಗಿರುವ ಮೋದಿ ನೇತೃತ್ವದ ಸರ್ಕಾರ ಬದಲಾಗುವವರೆಗೂ ಹಣದುಬ್ಬರ ಏರಿಕೆಯಾಗುತ್ತಲೇ ಇರುತ್ತದೆ ಎಂದಿರುವ ಅವರು, ಬಿಜೆಪಿಯವರು ನನಗೆ ಏನೂ ಗೊತ್ತಿಲ್ಲ ಎನ್ನುತ್ತಾರೆ. ಪರಿಹಾರ ಕ್ರಮ ಕೈಗೊಳ್ಳಿ, ದೇಶದ ಜನರನ್ನು ಉಳಿಸಿ ಅಂದ್ರೆ, ವಿದೇಶಕ್ಕೆ ಹೋಗಿ ಅಂಬಾನಿ, ಅದಾನಿಗೆ ಸಹಾಯ ಮಾಡಿ ಎನ್ನುತ್ತಾರೆ ಎಂದು ವಾಗ್ದಾಳಿ ನಡೆಸಿದ್ದಾರೆ (ಏಜೆನ್ಸೀಸ್).