ರಾಹುಲ್ ಗಾಂಧಿಗೆ ಹಕ್ಕುಚ್ಯುತಿ ಭೀತಿ: ಸುಳ್ಳು ಆರೋಪಗಳ ವಿರುದ್ಧ ಕಿರಣ್ ರಿಜಿಜು ಕೆಂಡ 
ದೇಶ

ರಾಹುಲ್ ಗಾಂಧಿಗೆ ಹಕ್ಕುಚ್ಯುತಿ ಭೀತಿ: ಸುಳ್ಳು ಆರೋಪಗಳ ವಿರುದ್ಧ ಕಿರಣ್ ರಿಜಿಜು ಕೆಂಡ | Kiren Rijiju

ನವದೆಹಲಿ: ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಕೇಂದ್ರ ಸರ್ಕಾರದ ವಿರುದ್ಧ ಆಧಾರರಹಿತ ಮತ್ತು ಸುಳ್ಳು ಆರೋಪಗಳನ್ನು ಮಾಡಿದ್ದಾರೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು(Kiren Rijiju) ಆರೋಪಿಸಿದ್ದಾರೆ. ಅಲ್ಲದೆ, ರಾಹುಲ್​ ವಿರುದ್ಧ ಹಕ್ಕುಚ್ಯುತಿ ನೋಟಿಸ್ ನೀಡಲಾಗುವುದು ಎಂದು ಬುಧವಾರ (ಫೆ.11) ಘೋಷಿಸಿದ್ದಾರೆ.

ರಿಜಿಜು ಕಿಡಿ: ದೇಶವನ್ನು ಮಾರಲು ಯಾರಿಂದಲೂ ಸಾಧ್ಯವಿಲ್ಲ

ರಾಹುಲ್ ಅವರ ಭಾಷಣಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಕಿರಣ್ ರಿಜಿಜು, ಸಂಸತ್ತಿನ ನಿಯಮಗಳನ್ನು ಗಾಳಿಗೆ ತೂರಿ ಈ ಆರೋಪಗಳನ್ನು ಮಾಡಲಾಗಿದೆ ಎಂದು ವಾದಿಸಿದ್ದಾರೆ. ಈ ದೇಶವನ್ನು ಯಾರೂ ಮಾರಾಟ ಮಾಡಲು ಸಾಧ್ಯವಿಲ್ಲ ಮತ್ತು ಯಾರೂ ಕೊಳ್ಳಲು ಸಾಧ್ಯವಿಲ್ಲ. ರಾಹುಲ್ ಗಾಂಧಿ ಅವರು ಸಭೆಯ ದಿಕ್ಕು ತಪ್ಪಿಸುತ್ತಿದ್ದಾರೆ. ಯಾವುದೇ ಸಾಕ್ಷ್ಯಾಧಾರಗಳಿಲ್ಲದೆ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಅವರ ಹೆಸರನ್ನು ಎಪ್ಸ್ಟೀನ್ ಪ್ರಕರಣಕ್ಕೆ ತಳುಕು ಹಾಕಿರುವುದು ಅತ್ಯಂತ ಖಂಡನೀಯ ಎಂದು ರಿಜಿಜು ಕಿಡಿಕಾರಿದ್ದಾರೆ. 
ನಿಯಮಗಳ ಉಲ್ಲಂಘನೆ: ಸಂಸತ್ತಿನಲ್ಲಿ ಯಾವುದೇ ಸದಸ್ಯರ ವಿರುದ್ಧ ಗಂಭೀರ ಆರೋಪ ಮಾಡುವ ಮೊದಲು ಮುನ್ಸೂಚನೆ ನೀಡಬೇಕು ಮತ್ತು ಆ ಆರೋಪಗಳನ್ನು ಪುರಾವೆಗಳೊಂದಿಗೆ ಸಾಬೀತುಪಡಿಸಬೇಕು. ಆದರೆ ರಾಹುಲ್ ಗಾಂಧಿ ಈ ಯಾವುದೇ ನಿಯಮಗಳನ್ನು ಪಾಲಿಸಿಲ್ಲ ಎಂದು ರಿಜಿಜು ಹೇಳಿದ್ದಾರೆ.
ದಾಖಲೆಗಳಿಂದ ವಜಾ ಮಾಡಲು ಒತ್ತಾಯ: ರಾಹುಲ್ ಗಾಂಧಿ ಅವರ ಸಂಪೂರ್ಣ ಭಾಷಣದಲ್ಲಿರುವ ತಪ್ಪು ಮಾಹಿತಿಗಳು, ಸುಳ್ಳು ಹಕ್ಕುಗಳು ಮತ್ತು ಅಸಂಸದೀಯ ಪದಗಳನ್ನು ಸದನದ ಕಡತದಿಂದ ತೆಗೆದುಹಾಕಬೇಕು ಎಂದು ಸ್ಪೀಕರ್ ಅವರಿಗೆ ರಿಜಿಜು ವಿನಂತಿಸಿದ್ದಾರೆ.
ಜವಾಬ್ದಾರಿಯುತ ಸ್ಥಾನ: ವಿರೋಧ ಪಕ್ಷದ ನಾಯಕನ ಸ್ಥಾನದಲ್ಲಿರುವ ವ್ಯಕ್ತಿ ಜವಾಬ್ದಾರಿಯುತವಾಗಿ ಮಾತನಾಡಬೇಕು. ಆದರೆ ಅವರು ಯಾವುದೇ ಸಾಕ್ಷ್ಯಗಳಿಲ್ಲದೆ ಬರಿ ಸುಳ್ಳುಗಳನ್ನು ಹೇಳುತ್ತಿದ್ದಾರೆ ಎಂದು ರಿಜಿಜು ದೂರಿದ್ದಾರೆ.

ರಾಹುಲ್​ ಹೇಳಿದ್ದೇನು..?

ಇತ್ತೀಚಿನ ಬಜೆಟ್ ಮತ್ತು ಅಮೆರಿಕದೊಂದಿಗಿನ ವ್ಯಾಪಾರ ಒಪ್ಪಂದ ಸೇರಿದಂತೆ ಹಲವಾರು ವಿಷಯಗಳ ಕುರಿತು ಸರ್ಕಾರವನ್ನು ಗುರಿಯಾಗಿಸಿಕೊಂಡು ರಾಹುಲ್​ ಗಾಂಧಿ ಕಿಡಿ ಕಾರಿದ್ದಾರೆ. ಸಂಸತ್ತಿನಲ್ಲಿ ಮಾತನಾಡಿದ ರಾಹುಲ್, ವ್ಯಾಪಾರ ಒಪ್ಪಂದದ ಕುರಿತು ಪ್ರಧಾನಿ ಮೋದಿಯವರನ್ನು ಪ್ರಶ್ನಿಸುತ್ತಾ, ಭಾರತ ಯಾರಿಂದ ತೈಲ ಖರೀದಿಸಬೇಕು, ಖರೀದಿಸಬಾರದು ಎನ್ನುವ ನಿರ್ಧಾರವನ್ನು ಅಮೆರಿಕ ಏಕೆ ತೆಗೆದುಕೊಳ್ಳಬೇಕು ಎಂದು ಪ್ರಶ್ನಿಸಿದ್ದಾರೆ.
ನಾವು ಇರಾನ್, ರಷ್ಯಾ ಅಥವಾ ಬೇರೆ ಯಾರಿಂದಾದರೂ ತೈಲ ಖರೀದಿಸುತ್ತೇವೆಯೇ ಎಂದು ಅಮೆರಿಕ ಏಕೆ ನಿರ್ಧರಿಸಬೇಕು? ನೀವು ನಮ್ಮ ತಾಯಿ ಭಾರತ ಮಾತೆಯನ್ನು ಮಾರಿದ್ದೀರಿ. ನಿಮಗೆ ಯಾವುದೇ ನಾಚಿಕೆ ಇಲ್ಲ. ಅಮೆರಿಕಾ ಕತ್ತು ಹಿಸುಕಿದ್ದರಿಂದ ಪ್ರಧಾನಿ ಭಾರತವನ್ನು ಮಾರಿದ್ದಾರೆ ಎಂದು ರಾಹುಲ್​ ಕಿಡಿಕಾರಿದ್ದಾರೆ.

140 ಕೋಟಿ ಭಾರತೀಯರ ಭವಿಷ್ಯ ಅಪಾಯದಲ್ಲಿದೆ: ರಾಹುಲ್

ಉಭಯ ದೇಶಗಳ ನಡುವಿನ ಒಪ್ಪಂದ ದೇಶದ ಜನರ ಭವಿಷ್ಯವನ್ನು ಅಪಾಯಕ್ಕೆ ಸಿಲುಕಿಸುತ್ತದೆ ಎಂದಿರುವ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ಬಿಜೆಪಿಯ ಆರ್ಥಿಕ ವಾಸ್ತುಶಿಲ್ಪವನ್ನು ರಕ್ಷಿಸಲು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಆರೋಪಿಸಿದರು.

ಹಕ್ಕುಚ್ಯುತಿ ಮಂಡನೆ ಎಂದರೇನು..? 

ಸಂಸತ್ತಿನ ಸದಸ್ಯರು ಸದನಕ್ಕೆ ತಪ್ಪು ಮಾಹಿತಿ ನೀಡಿದಾಗ ಅಥವಾ ಸದನದ ಘನತೆಗೆ ಕುಂದು ತಂದಾಗ ಅವರ ವಿರುದ್ಧ ಈ ನೋಟಿಸ್ ನೀಡಲಾಗುತ್ತದೆ. ಒಂದು ವೇಳೆ ಆರೋಪ ಸಾಬೀತಾದರೆ, ಸಂಬಂಧಪಟ್ಟ ಸದಸ್ಯರ ವಿರುದ್ಧ ಕಠಿಣ ಕ್ರಮ ಜರುಗಿಸುವ ಅಧಿಕಾರ ಸದನಕ್ಕಿರುತ್ತದೆ,(ಏಜೆನ್ಸೀಸ್​​).