PoonawallaVsRiyaAhir | ರಿಯಾ ಆಹಿರ್ ಅಂಕಲ್ ಕಾಮೆಂಟ್‌ಗೆ ಪೂನಾವಾಲ ತಿರುಗೇಟು! 
ದೇಶ

ನಿಮಗಿಂತ ದುಪ್ಪಟ್ಟು ವಯಸ್ಸು ನನಗಲ್ಲ, ರಾಹುಲ್ ಗಾಂಧಿಗೆ!...ರಿಯಾ ಆಹಿರ್ ಅಂಕಲ್ ಕಾಮೆಂಟ್‌ಗೆ ಪೂನಾವಾಲ ತಿರುಗೇಟು! | PoonawallaVsRiyaAhir

PoonawallaVsRiyaAhir: ಮುಂಬೈ ಮೂಲದ ಮಾಡೆಲ್ ರಿಯಾ ಆಹಿರ್ ಹಾಗೂ ಬಿಜೆಪಿ ಮಾಜಿ ವಕ್ತಾರ ಶಹಜಾದ್ ಪೂನಾವಾಲ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ಕಟು ವಾಕ್ಸಮರ ನಡೆದಿದೆ. ಸಿಜೆಪಿ ಪ್ರತಿಭಟನೆಯ ಸಮಯದಲ್ಲಿ ಪೋಲೀಸ್ ವ್ಯಾನ್ ತಡೆದು ವೈರಲ್ ಆಗಿದ್ದ ರಿಯಾ ಆಹಿರ್, ಇತ್ತೀಚೆಗೆ ಬಿಗ್ ಬಾಸ್ ಸೀಸನ್ 20 ಶೋಗೆ ಸ್ಪರ್ಧಿಯಾಗಿ ಆಯ್ಕೆಯಾಗುವ ಅವಕಾಶವನ್ನು ಕಳೆದುಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಇಬ್ಬರ ನಡುವೆ ಜಾಲತಾಣಗಳಲ್ಲಿ ರಾಜಕೀಯ ಆರೋಪ ಹಾಗೂ ಪ್ರತ್ಯಾರೋಪಗಳು ವ್ಯಕ್ತವಾಗಿವೆ.
ಈ ಬೆಳವಣಿಗೆಯನ್ನು ಉಲ್ಲೇಖಿಸಿದ್ದ ಶಹಜಾದ್ ಪೂನಾವಾಲ ರೀಲ್ಸ್​ವೊಂದರಲ್ಲಿ, ರಿಯಾ ಆಹಿರ್ ವೈರಲ್ ಪ್ರತಿಭಟನೆಯ ಫೋಟೋವನ್ನು ಯೋಜಿತ ರಾಜಕೀಯ ತಂತ್ರಗಾರಿಕೆ ಹಾಗೂ ಸ್ಕ್ರಿಪ್ಟೆಡ್ ಪ್ರಚಾರ ಎಂದು ಆರೋಪಿಸಿದ್ದರು. ರಾಹುಲ್ ಗಾಂಧಿ, ಸುಪ್ರಿಯಾ ಸುಳೆ, ರಾಜ್ ಠಾಕ್ರೆ ಹಾಗೂ ಡಿಂಪಲ್ ಯಾದವ್ ಅವರಂತಹ ರಾಜಕೀಯ ನಾಯಕರಿಂದ ಹಿಡಿದು ಎಡಪಂಥೀಯ ಯೂಟ್ಯೂಬರ್‌ಗಳ ಬೆಂಬಲ ಪಡೆದು, ಬಿಗ್ ಬಾಸ್ ಮನೆ ಪ್ರವೇಶಿಸಿ ಪ್ರಧಾನಿ ಮೋದಿ ವಿರೋಧಿ ಅಜೆಂಡಾ ಪ್ರಚಾರ ಮಾಡಲು ಪ್ಲಾನ್ ಮಾಡಲಾಗಿತ್ತು. ಆದರೆ, ಸಾರ್ವಜನಿಕರ ನೇರ ಮತದಾನದಲ್ಲಿ ಸೋಲುವ ಮೂಲಕ ಈ ಇಡೀ ಎಡಪಂಥೀಯ ಇಕೋಸಿಸ್ಟಮ್‌ಗೆ ಮುಖಭಂಗವಾಗಿದೆ.
ಕಾಂಗ್ರೆಸ್‌ಗೆ ಒಂದೇ ಒಂದು ಎಲೆಕ್ಷನ್ ಗೆಲ್ಲಿಸಿಕೊಡಲಾಗದ ರಾಹುಲ್ ಗಾಂಧಿ ನಿಮಗೇನು ಬೆಂಬಲ ನೀಡುತ್ತಾರೆ..? ಎಂದು ಪೂನಾವಾಲ ವ್ಯಂಗ್ಯವಾಡಿದ್ದರು. ಅಲ್ಲದೆ, ಆಯ್ಕೆಯ ಪ್ರಕ್ರಿಯೆಯಲ್ಲಿ ರಿಯಾ ಆಹಿರ್ ನೀಡಿದ್ದ ಚಾಲಕ ವ್ಯಾನ್ ನಿಲ್ಲಿಸದಿದ್ದರೆ ನನ್ನ ಜೀವನದ ಉದ್ದೇಶ ಈಡೇರುತ್ತಿತ್ತು ಎಂಬ ಹೇಳಿಕೆಯನ್ನು ಪ್ರಸ್ತಾಪಿಸಿ, ಜನತೆ ಅವರನ್ನು ತಿರಸ್ಕರಿಸಲು ಅವರ ಮನಸ್ಥಿತಿಯೇ ಕಾರಣ ಎಂದು ಲೇವಡಿ ಮಾಡಿದ್ದರು.

ಅಂಕಲ್ ವಯಸ್ಸಿಗೆ ತಕ್ಕಂತೆ ಮಾತನಾಡಿ ಎಂದ ರಿಯಾ!

ಪೂನಾವಾಲರ ಈ ವಿಡಿಯೋಗೆ ರಿಯಾ ಆಹಿರ್ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಎರಡು ಪ್ರತ್ಯೇಕ ರೀಲ್ಸ್‌ಗಳ ಮೂಲಕ ತಿರುಗೇಟು ನೀಡಿದ್ದಾರೆ. ನಮಸ್ತೆ ಪೂನಾವಾಲ ಅಂಕಲ್, ನಿಮ್ಮ ವಯಸ್ಸಿಗೆ ತಕ್ಕಂತೆ ನಿಮ್ಮಂತವರ ಜೊತೆ ರಾಜಕೀಯ ಮಾಡಿ. 38 ವರ್ಷದ ನೀವು 28 ವರ್ಷದ ನನ್ನಂತಹ ಕಿರಿಯ ಹುಡುಗಿಯರ ಮತ್ತು ನನ್ನ ವೈಯಕ್ತಿಕ ಜೀವನದ ವಿಚಾರಗಳಲ್ಲಿ ಮೂಗು ತೂರಿಸಬೇಡಿ. 50ಕ್ಕೂ ಹೆಚ್ಚು ಪೇಡ್ ಇನ್ಫ್ಲುಯೆನ್ಸರ್ಸ್‌ ಬಳಸುವ ಉಚಿತ ಸ್ಕ್ರಿಪ್ಟ್ ಅನ್ನೇ ನೀವು ಹೇಳುತ್ತಿದ್ದೀರಿ, ಬಹುಶಃ ನಿಮಗೆ ಪೇಮೆಂಟ್ ಆದಂತಿದೆ ಎಂದು ವ್ಯಂಗ್ಯವಾಗಿ ಆಕ್ರೋಶ ವ್ಯಕ್ತಪಡಿಸಿದರು.
ತಾವು ಯಾವುದೇ ರಾಜಕೀಯ ನಾಯಕರೊಂದಿಗೆ ಗುರುತಿಸಿಕೊಂಡಿಲ್ಲ, ಭಾರತೀಯ ಸೇನೆ ಅಥವಾ ಯಾವುದೇ ಸಂಸ್ಥೆಯನ್ನು ಎಂದೂ ಅವಮಾನಿಸಿಲ್ಲ ಎಂದು ಸ್ಪಷ್ಟಪಡಿಸಿದ ರಿಯಾ, ತಾವು ಲಾತೂರ್‌ನ ಕುಷ್ಠರೋಗ ಪೀಡಿತ ಗ್ರಾಮಕ್ಕೆ ಭೇಟಿ ನೀಡಿ ನೆರವು ನೀಡಿದ ವಿಡಿಯೋಗಳನ್ನು ಹಂಚಿಕೊಂಡು, ಇತರರನ್ನು ಕೆಳಗಿಳಿಸುವುದನ್ನು ಬಿಟ್ಟು ಬಡವರ ಕಣ್ಣೀರು ಒರೆಸುವ ಕೆಲಸ ಮಾಡಿ. ಬಿಗ್ ಬಾಸ್ ಮನರಂಜನೆಗೆ ಮಾತ್ರ, ಅದನ್ನು ರಾಜಕೀಯ ಪ್ರಚಾರಕ್ಕೆ ಬಳಸಲಾಗುವುದಿಲ್ಲ. ಮಹಿಳೆಯರನ್ನು, ಧರ್ಮವನ್ನು ಹಾಗೂ ನಿಮ್ಮ ವಯಸ್ಸಿನ ಅರ್ಧದಷ್ಟು ಇರುವ ಹೆಣ್ಣುಮಕ್ಕಳನ್ನು ಬಿಟ್ಟುಬಿಡಿ ಎಂದು ಕುಟುಕಿದರು.

ನೀವು ಗಣಿತ ವಿಷಯದಲ್ಲಿ ಮುಂದಿರಲಿಲ್ಲವೇ..?

ಇದಕ್ಕೆ ತಮ್ಮ ಎಕ್ಸ್ ಖಾತೆಯಲ್ಲಿ ಮತ್ತೆ ಪ್ರತಿಕ್ರಿಯಿಸಿದ ಶಹಜಾದ್ ಪೂನಾವಾಲ, ಬಿಗ್ ಬಾಸ್ ಮನೆಗೆ ಪ್ರವೇಶಿಸುವ ಮೊದಲೇ ಹೊರಬಿದ್ದಿದ್ದಕ್ಕೆ ವಿಷಾದವಿದೆ. ನಿಮ್ಮ ವಯಸ್ಸು 28, ನೀವು ಸಣ್ಣ ಹುಡುಗಿಯಲ್ಲ. ನನ್ನ ವಯಸ್ಸು 38, ನಾನು ನಿಮಗಿಂತ ದುಪ್ಪಟ್ಟು ವಯಸ್ಸಿನವನಲ್ಲ. ಶಾಲೆಯಲ್ಲಿ ನೀವು ಗಣಿತ ವಿಷಯದಲ್ಲಿ ಮುಂದಿರಲಿಲ್ಲ ಎನಿಸುತ್ತದೆ, ಬಹುಶಃ ನೀವು 56 ವರ್ಷದ ರಾಹುಲ್ ಗಾಂಧಿಯವರೊಂದಿಗೆ ನನ್ನನ್ನು ಗೊಂದಲ ಮಾಡಿಕೊಂಡಿದ್ದೀರಿ. ರಾಹುಲ್ ಗಾಂಧಿಗೆ ಸ್ವತಃ ಎಲೆಕ್ಷನ್ ಗೆಲ್ಲಲು ಆಗುವುದಿಲ್ಲ, ಇನ್ನು ನಿಮ್ಮನ್ನು ಹೇಗೆ ಗೆಲ್ಲಿಸುತ್ತಾರೆ..? ಎಂದು ಮತ್ತೆ ಟೀಕಿಸಿದ್ದಾರೆ.
ತಮ್ಮ ಮೂಲ ವೀಡಿಯೋ ಪತ್ರಕರ್ತೆ ಅರ್ಫಾ ಖಾನಂ ಶೇರ್ವಾನಿ ಅವರ ಕುರಿತಾಗಿತ್ತು, ನಿಮ್ಮ ಪ್ರಸ್ತಾಪ ಕೇವಲ ಪ್ರಸಂಗವಶಾತ್ ಬಂದಿತ್ತು ಎಂದು ಸ್ಪಷ್ಟಪಡಿಸಿದ ಪೂನಾವಾಲ, ರಿಯಾ ಅವರದ್ದು ಪಬ್ಲಿಸಿಟಿ ಗಿಮಿಕ್ ಎಂದು ಕರೆದಿದ್ದಾರೆ. ಪ್ರಸ್ತುತ ಈ ಇಬ್ಬರ ನಡುವಿನ ಶಬ್ದಕೋಶಗಳ ಸಮರ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ(ಏಜೆನ್ಸೀಸ್​).