ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ 
ದೇಶ

ಬಿಜೆಪಿ-ಆರ್​ಎಸ್ಎಸ್ ಅನ್ನು ಬಂಚ್ ಆಫ್ ಜೋಕರ್ಸ್ ಎಂದ ರಾಹುಲ್ ಗಾಂಧಿ: ಮೋದಿ ವಿದೇಶಾಂಗ ನೀತಿ ಕುರಿತು ಅಪಹಾಸ್ಯ | Rahul Gandhi

ನವದೆಹಲಿ: ಸಂಸತ್ ಅಧಿವೇಶನ ಮುಗಿಯುತ್ತಿದ್ದಂತೆ ಗುರುವಾರ(ಆ. 13) ಬಿಜೆಪಿ ಮತ್ತು ಆರ್​ಎಸ್ಎಸ್ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ನಾಯಕ ಮತ್ತು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ(Rahul Gandhi), ಅವರೆಡು ಭಾರತದ ಬಗ್ಗೆ ಅಲ್ಪ ತಿಳುವಳಿಕೆ ಹೊಂದಿರುವ ಬಂಚ್ ಆಫ್ ಜೋಕರ್ಸ್ ಎಂದು ಕಿಡಿರಿಕಾರಿದ್ದಾರೆ. ಜೊತೆಗೆ ಮೋದಿ ವಿದೇಶಾಂಗ ನೀತಿಯನ್ನು ವ್ಯಂಗ್ಯವಾಡಿದ್ದಾರೆ.
ನವದೆಹಲಿಯಲ್ಲಿ ನಡೆದ ರಚನಾತ್ಮಕ ಕಾಂಗ್ರೆಸ್ ರಾಷ್ಟ್ರೀಯ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು, ಆರ್‌ಎಸ್‌ಎಸ್ (RSS) ತನ್ನ ಮೂಲ ಸ್ವರೂಪದ ಶಕ್ತಿಯಾಗಿ ಈಗ ಅಸ್ತಿತ್ವದಲ್ಲಿಲ್ಲ. ಮತ್ತು ಅದು ಈಗ ದೊಡ್ಡ ಬಂಡವಾಳಶಾಹಿಗಳಾದ ಅದಾನಿ ಮತ್ತು ಅಂಬಾನಿ ಅವರ ಸಾಧನವಾಗಿ ಮಾರ್ಪಟ್ಟಿದೆ ಎಂದು ಪ್ರತಿಪಾದಿಸಿದ್ದಾರೆ.

ವಿವಿಧ ವಿಷಯಗಳಲ್ಲಿ ಮಾಧ್ಯಮಗಳು ಸರ್ಕಾರದ ನಿಲುವನ್ನು ಅನುಸರಿಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಹಾಸ್ಯಾಸ್ಪದ ವ್ಯಕ್ತಿಗಳ ಗುಂಪೊಂದು ನಮ್ಮ ಮೇಲೆ ತಮ್ಮ ಆಳ್ವಿಕೆಯನ್ನು ಹೇರುವುದಕ್ಕೆ ಅವಕಾಶ ನೀಡದಿರುವುದೇ ನಿಜವಾದ ರಾಷ್ಟ್ರೀಯ ಪ್ರಜ್ಞೆ ಎಂದಿದ್ದಾರೆ.


ಇದೇ ವೇಳೆ ಮೋದಿಯವರ ವಿದೇಶಾಂಗ ನೀತಿಯನ್ನು ಅಪಹಾಸ್ಯ ಮಾಡಿರುವ ಅವರು, ವಿದೇಶಾಂಗ ನೀತಿಯೆಂದರೆ ನಾಯಕರನ್ನು ಅಪ್ಪಿಕೊಳ್ಳುವುದು ಎಂಬ ಭಾವನೆ ಹೇಗೋ ಮೋದಿಯವರ ಮನಸ್ಸಿನಲ್ಲಿ ಬೇರೂರಿದೆ ಎಂದರು. ಮುಂದುವರೆದು, ಪ್ರಧಾನಿ ಮೋದಿಯವರು ವಿದೇಶಿ ನಾಯಕರನ್ನು ತಬ್ಬಿಕೊಳ್ಳುವ ರೀತಿಯನ್ನು ಕಾಂಗ್ರೆಸ್ ನಾಯಕ ಸಂದೀಪ್ ದೀಕ್ಷಿತ್ ಅವರನ್ನು ಅಪ್ಪಿಕೊಂಡು ಅಪಹಾಸ್ಯ ಮಾಡಿದ್ದಾರೆ. ಅವರ ಅಜ್ಞಾನವನ್ನು ಊಹಿಸಿಕೊಳ್ಳಿ... ನಾಯಕರನ್ನು ಅಪ್ಪಿಕೊಳ್ಳುವುದೇ ವಿದೇಶಾಂಗ ನೀತಿ ಎಂಬ ಕಲ್ಪನೆ ಅವರಿಗೆ ಎಲ್ಲಿಂದ ಬಂತು? ಎಂದಿದ್ದಾರೆ.

ತಕ್ಷಣ ಸಂದೀಪ್ ದೀಕ್ಷಿತ್ ನೀವು ನನ್ನನ್ನು ಮೆಲೋನಿ ಎಂದು ಭಾವಿಸಿ ತಬ್ಬಿಕೊಂಡಿಲ್ಲ, ಅಲ್ಲವೇ? ಎಂದು ವ್ಯಂಗ್ಯವಾಗಿ ಕೇಳಿದ್ದು, ಅದಕ್ಕೆ ನಾನು ಇನ್ನೂ ಆ ಮಟ್ಟವನ್ನು ತಲುಪಿಲ್ಲ ಎಂದು ರಾಹುಲ್ ಹೇಳಿದ್ದಾರೆ. ಈ ವೇಳೆ ಸಭೆಯಲ್ಲಿದ್ದವರು ಜೋರಾಗಿ ನಕ್ಕಿದ್ದಾರೆ. ಇದು ವಿವಾದಕ್ಕೀಡಾಗಿದ್ದು, ಓರ್ವ ವಿದೇಶಿ ಮಹಿಳಾ ನಾಯಕಿಯನ್ನು ತಮ್ಮ ಅಪಹಾಸ್ಯಕ್ಕೆ ಬಳಸಿಕೊಂಡಿದ್ದಕ್ಕೆ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. 

ಇದೇ ವೇಳೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವ ಕೆಲಸವನ್ನು ಕಾಂಗ್ರೆಸ್ ಮುಂದುವರೆಸಲಿದೆ. ಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ತಮ್ಮ ರಾಜೀನಾಮೆ ನೀಡುವವರೆಗೂ ಅವರಿಗೆ ನಿದ್ದೆ ಮಾಡಲು ಬಿಡಲ್ಲ, ಅವರಿಗೂ ನಿದ್ದೆ ಬರಲ್ಲ. ದ್ವೇಷ ಅಥವಾ ಹಿಂಸೆಯಿಲ್ಲದೆ ಇದನ್ನು ನಾವು ಮಾಡುತ್ತೇವೆ. ನಮ್ಮ ಸಂಸ್ಕೃತಿಗಾಗಿ ಹೋರಾಡುತ್ತಿದ್ದೇವೆ. ನಮ್ಮ ದೇಶವು ದ್ವೇಷದ ಆಧಾರದ ಮೇಲಿಲ್ಲ, ಬದಲಾಗಿ ಪ್ರೀತಿ, ಸಹೋದರತ್ವ ಮತ್ತು'ಅಹಿಂಸೆಯ ತಳಹದಿಯಲ್ಲಿದೆ ಎಂದು ಹೇಳಿದ್ದಾರೆ (ಏಜೆನ್ಸೀಸ್).