ರಾಹುಲ್ ಗಾಂಧಿ ಮತ್ತು ಪ್ರಲ್ಹಾದ್ ಜೋಶಿ
ನವದೆಹಲಿ: ಬಜೆಟ್ ಅಧಿವೇಶನದ ಭಾಗವಾಗಿ ಬುಧವಾರ(ಫೆ. 11) ಲೋಕಸಭೆಯಲ್ಲಿ ಯುಎಸ್-ಭಾರತ ಟ್ರೇಡ್ ಡೀಲ್, ಎಪ್ಸ್ಟೀನ್ ಫೈಲ್ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದ ರಾಹುಲ್ ಗಾಂಧಿ(Rahul Gandhi), ಬಳಿಕ ಹೊರಗೆ ಅದರ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡ್ತಿದ್ದ ಇಬ್ಬರು ಕೇಂದ್ರ ಸಚಿವರ ಬಳಿ ತೆರಳಿದಾಗ ನಾಟಕೀಯ ಬೆಳವಣಿಗೆಗೆ ನಡೆಯಿತು. ಅದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.
ರಾಹುಲ್ ಗಾಂಧಿ ಮಾಡಿದ ಆರೋಪಗಳ ಕುರಿತು ಸುದ್ದಿಗಾರರೊಂದಿಗೆ ಹಿರಿಯ ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ ಮತ್ತು ಅಶ್ವಿನಿ ವೈಷ್ಣವ್ ಮಾತನಾಡ್ತಿದ್ದರು. ದಾಖಲೆಯಿಲ್ಲದೇ ಯಾವುದನ್ನೂ ಮಾತನಾಡಬಾರದು. ಆದರೆ ರಾಹುಲ್ ಗಾಂಧಿ ದಾಖಲೆ ಇಲ್ಲದೇ ಸುಮ್ಮನೆ ಆರೋಪಿಸುತ್ತಿದ್ದಾರೆ ಎಂದು ಹೇಳ್ತಿದ್ದರು. ಈ ವೇಳೆ ಅಲ್ಲಿಗೆ ತೆರಳಿದ ರಾಹುಲ್ ಗಾಂಧಿ, ಬನ್ನಿಗೆ ಒಟ್ಟಿಗೆ ಸುದ್ದಿಗೋಷ್ಠಿ ನಡೆಸೋಣ ಎಂದು ಕರೆಯುತ್ತಾರೆ.
ಆಗ ಸ್ವಲ್ಪ ಗಲಿಬಿಲಿಗೊಂಡಂತೆ ಕಂಡ ಕೇಂದ್ರ ಸಚಿವರು ಅಲ್ಲಿಂದ ತೆರಳಲು ನೋಡ್ತಾರೆ. ಆಗ ರಾಹುಲ್ ಗಾಂಧಿ ಜೋಶಿಯವರ ಕೈ ಹಿಡಿದು ಕರೆಯುತ್ತಾರೆ. ಬನ್ನಿ, ಒಟ್ಟಿಗೆ ನಿಲ್ಲೋಣ, ಒಟ್ಟಿಗೆ ಮಾತನಾಡೋಣ ಎಂದು ಹೇಳ್ತಾರೆ. ಆದರೆ ಇಬ್ಬರು ಸಚಿವರು ಕ್ಷಣಾರ್ಧದಲ್ಲೇ ಸ್ಥಳದಿಂದ ತೆರಳುತ್ತಾರೆ. ಆಗ ಅಲ್ಲಿದ್ದ ಪ್ರಿಯಾಂಕಾ ಗಾಂಧಿ ಸೇರಿ ಇತರೆ ಕಾಂಗ್ರೆಸ್ ನಾಯಕರು ನಗುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ.
ಅ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿರುವ ರಾಹುಲ್ ಗಾಂಧಿ, ಲೋಕಸಭೆಯಲ್ಲಿ ನಾನು ಮಾಡಿದ ಆರೋಪಗಳ ಬಗ್ಗೆ ನನ್ನ ಬಳಿ ದಾಖಲೆ ಇದೆ. ಹರ್ದೀಪ್ ಪುರಿ ಮತ್ತು ಅನಿಲ್ ಅಂಬಾನಿ ಅವರ ಹೆಸರುಗಳು ಎಪ್ಸ್ಟೀನ್ ಫೈಲ್‌ಗಳಲ್ಲಿವೆ. ಪ್ರಧಾನಿಯ ಮೇಲೆ ನೇರ ಒತ್ತಡವಿದೆ. ಅದಕ್ಕೆ ಯುಎಸ್-ಭಾರತದ ನಡುವೆ ಭಾರತಕ್ಕೆ ಲಾಭವಿಲ್ಲದ ಒಪ್ಪಂದ ನಡೆಯುತ್ತಿದೆ ಎಂದಿದ್ದಾರೆ.
ಇನ್ನೂ ಘಟನೆಯ ವಿಡಿಯೋವನ್ನು ಎಕ್ಸ್ನಲ್ಲಿ ಹಂಚಿಕೊಂಡಿರುವ ಕಾಂಗ್ರೆಸ್ ರಾಷ್ಟ್ರೀಯ ವಕ್ತಾರೆ ಮತ್ತು ಐಟಿ ಸೆಲ್ ಮುಖ್ಯಸ್ಥೆ ಸುಪ್ರಿಯಾ ಶ್ರೀನಾಟೆ, ಬಿಜೆಪಿ ಸಚಿವರಾದ ಪ್ರಹ್ಲಾದ್ ಜೋಶಿ ಮತ್ತು ಅಶ್ವಿನಿ ವೈಷ್ಣವ್ ಮಾಧ್ಯಮಗಳ ಮುಂದೆ ರಾಹುಲ್ ಗಾಂಧಿ ಆರೋಪ ಮಾಡುವ ಮೊದಲು ಅದನ್ನು ದೃಢೀಕರಿಸಬೇಕು ಎಂದು ಹೇಳ್ತಿದ್ದರು. ಅಲ್ಲಿಗೆ ರಾಹುಲ್ ಜೀ ಆಗಮಿಸಿ ಒಟ್ಟಿಗೆ ಮಾತನಾಡೋಣ ಎಂದು ಹೇಳಿದಾಗ ಇಬ್ಬರು ಅಲ್ಲಿಂದ ಹೇಗೆ ವೇಗವಾಗಿ ಹೊರಟರು ನೋಡಿ ಎಂದು ಕಾಲೆಳೆದಿದ್ದಾರೆ (ಏಜೆನ್ಸೀಸ್).