Rahul Gandhi | ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ 
ದೇಶ

ದೇಶದ 70 ಕೋಟಿ ಮಹಿಳೆಯರೇ ಭಾರತದ ಅನನ್ಯ ಶಕ್ತಿ!...ಪುಣೆಯಲ್ಲಿ ವಿದ್ಯಾರ್ಥಿನಿಯರ ಮುಂದೆ ರಾಹುಲ್ ಮಾತು | Rahul Gandhi

ದೇಶದ 70 ಕೋಟಿ ಮಹಿಳೆಯರು ಈ ರಾಷ್ಟ್ರದ ಅನನ್ಯ ಹಾಗೂ ಅಪಾರ ಶಕ್ತಿಯಾಗಿದ್ದಾರೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi) ಪ್ರತಿಪಾದಿಸಿದ್ದಾರೆ. ಮಹಾರಾಷ್ಟ್ರದ ಪುಣೆಯಲ್ಲಿ ಮಹಿಳೆಯರಿಗಾಗಿ ವಿಶೇಷವಾಗಿ ಆಯೋಜಿಸಲಾಗಿದ್ದ ಛಾತ್ರೋಂ ಕೀ ಗೂಂಜ್ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.

ಇದೇ ತಿಂಗಳ ಆರಂಭದಲ್ಲಿ ಪ್ರಯಾಗ್‌ರಾಜ್‌ನಲ್ಲಿ ನಡೆದ ಛಾತ್ರೋಂ ಕೀ ಗೂಂಜ್ ಕಾರ್ಯಕ್ರಮದಲ್ಲೂ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ್ದ ಅವರು, ಯಾರೂ ದ್ವೇಷ ಅಥವಾ ಹಿಂಸಾಚಾರದ ಮಾರ್ಗವನ್ನು ತುಳಿಯಬಾರದು. ಬದಲಾಗಿ ಪ್ರೀತಿ ಮತ್ತು ಕಾಳಜಿಯ ಮೂಲಕ ವ್ಯವಸ್ಥೆಯನ್ನು ಬದಲಾಯಿಸಬೇಕು ಎಂದು ಕಿವಿಮಾತು ಹೇಳಿದ್ದರು. ನಾವು ಎಂದಿಗೂ ದ್ವೇಷ ಅಥವಾ ಹಿಂಸೆಗೆ ಮೊರೆ ಹೋಗುವುದಿಲ್ಲ, ಪ್ರೀತಿಯಿಂದಲೇ ಈ ವ್ಯವಸ್ಥೆಯನ್ನು ತಿದ್ದುತೇವೆ. ನೀವು ಭಾರತದ ಶಕ್ತಿ ಮತ್ತು ಹೆಮ್ಮೆ. ನಾನು ಈ ಮಾತನ್ನು ಹೇಳುವಾಗ ಪ್ರತಿಯೊಬ್ಬ ಭಾರತೀಯ ಪ್ರಜೆಯನ್ನು ಮನಸ್ಸಿನಲ್ಲಿಟ್ಟುಕೊಂಡೇ ಹೇಳುತ್ತಿದ್ದೇನೆ ಎಂದು ಪ್ರಯಾಗ್‌ರಾಜ್ ಕಾರ್ಯಕ್ರಮದಲ್ಲಿ ಕರೆ ನೀಡಿದ್ದರು.

ಕೇವಲ 12 ಜನರಿಗೆ ಮಾತ್ರ ಉದ್ಯೋಗ

ಈ ವೇಳೆ ಉದ್ಯೋಗದ ಅಂಕಿಅಂಶಗಳನ್ನು ಹಂಚಿಕೊಂಡ ರಾಹುಲ್ ಗಾಂಧಿ, ಪ್ರತಿ 1000 ಯುವಕರಲ್ಲಿ ಕೇವಲ 12 ಜನರಿಗೆ ಮಾತ್ರ ಖಾಯಂ ಉದ್ಯೋಗ ಸಿಗುತ್ತಿದ್ದು, ಇನ್ನು ನಿಮ್ಮ ಖಾಸಗಿ ಡೇಟಾವನ್ನು (ದತ್ತಾಂಶ) ನಿಮ್ಮಿಂದ ಕಸಿದುಕೊಂಡು ಜಿಯೋ, ಅದಾನಿ, ಫೇಸ್‌ಬುಕ್ ಮತ್ತು ಗೂಗಲ್‌ನಂತಹ ಪ್ರಮುಖ ಕಾರ್ಪೊರೇಟ್ ಸಂಸ್ಥೆಗಳಿಗೆ ಹಸ್ತಾಂತರಿಸಲಾಗುತ್ತಿದೆ. ಈ ಮೂಲಕ ನಿಮ್ಮನ್ನು ಒಂದು ಜಾಲದಲ್ಲಿ ಸಿಲುಕಿಸಲಾಗುತ್ತಿದೆ ಎಂದರು.
ಯುವ ಜನತೆಗೆ ಇಷ್ಟ ಬಂದಷ್ಟು ರೀಲ್ಸ್ ನೋಡಿ, ವಾಟ್ಸಾಪ್ ಮೆಸೇಜ್ ಕಳುಹಿಸಿ, ಇನ್‌ಸ್ಟಾಗ್ರಾಮ್‌ನಲ್ಲಿ ಕಂಟೆಂಟ್ ನೋಡಿ ಅಥವಾ ಕ್ರಿಯೇಟ್ ಮಾಡಿ ಎಂದು ಹೇಳಲಾಗುತ್ತಿದ್ದು, ಇದು 21 ನೇ ಶತಮಾನದ ಹೊಸ ಚಟ. ಹೀಗೆ ಈ ಚಟದಲ್ಲಿ ನಿಮ್ಮನ್ನು ತೊಡಗಿಸಿ, ಕೊನೆಗೆ ಬ್ಲಿಂಕಿಟ್, ಉಬರ್ ಸಂಸ್ಥೆಗಳಲ್ಲಿ ದುಡಿಯಲು ತಳ್ಳಲಾಗುತ್ತಿದೆ. ಅಂದರೆ ಈ ಶತಮಾನದ ಚಟಕ್ಕೆ ಬೀಳಲು ನಿಮಗೆ ಅವಕಾಶವಿದೆ, ಆದರೆ ದೇಶದಲ್ಲಿ ನಿಮಗೊಂದು ಉದ್ಯೋಗ ಕಂಡುಕೊಳ್ಳಲು ಮಾತ್ರ ಸಾಧ್ಯವಾಗುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.
ಮುಂದುವರಿದು ಮಾತನಾಡಿದ ರಾಹುಲ್​, ಈ ದೇಶದಲ್ಲಿ ನಿಮ್ಮಂತೆ 40 ಕೋಟಿ ಕ್ರಿಯಾಶೀಲ ಯುವಕರಿದ್ದಾರೆ. ಇದೇ ನಮ್ಮ ದೇಶದ ನಿಜವಾದ ಶಕ್ತಿ. ಜನರು ಚೀನಾ, ಅಮೆರಿಕ ಮತ್ತು ರಷ್ಯಾ ದೇಶಗಳ ಬಗ್ಗೆ ಮಾತನಾಡುತ್ತಾರೆ. ಆದರೆ 21ನೇ ಶತಮಾನದಲ್ಲಿ ಭಾರತೀಯ ಯುವಕರ ಸಾಮರ್ಥ್ಯದ ಮುಂದೆ ಈ ಎಲ್ಲ ದೇಶಗಳೂ ಸರಿಹೊಂದಲು ಸಾಧ್ಯವಿಲ್ಲ. 21 ನೇ ಶತಮಾನದಲ್ಲಿ ದೇಶವೊಂದರ ಅಭಿವೃದ್ಧಿ ಮುಖ್ಯವಾಗಿ ಎರಡು ವಿಷಯಗಳ ಮೇಲೆ ಅವಲಂಬಿತವಾಗಿರುತ್ತದೆ. ಒಂದು ಯುವಕರ ಸಾಮರ್ಥ್ಯ, ಮತ್ತೊಂದು ನೀವು ಸೃಷ್ಟಿಸುವ ಡೇಟಾ. ಭಾರತದಲ್ಲಿ ಯುವಶಕ್ತಿಯೂ ಇದೆ, ಜಗತ್ತಿನಲ್ಲೇ ಅತಿ ಹೆಚ್ಚು ಡೇಟಾ ಕೂಡ ಇಲ್ಲೇ ಸೃಷ್ಟಿಯಾಗುತ್ತಿದೆ. ಪ್ರತಿಯೊಬ್ಬ ಭಾರತೀಯನೂ ದಿನಕ್ಕೆ ಸರಾಸರಿ 1 GB ಡೇಟಾ ಬಳಸುತ್ತಿದ್ದಾನೆ. ಭವಿಷ್ಯದ ಪ್ರಗತಿಯು ಈ ಡೇಟಾ ಮತ್ತು ಯುವ ಸಾಮರ್ಥ್ಯದ ಮೇಲೆಯೇ ನಿಂತಿದೆ. ಯುವಶಕ್ತಿ ಪ್ಲಸ್ ಡೇಟಾ ಎಂದರೆ ಅದು 21ನೇ ಶತಮಾನದ ಅರ್ಥವ್ಯವಸ್ಥೆ ಎಂದರು.
ಇದೇ ವೇಳೆ ದೆಹಲಿಯ ಜಂತರ್ ಮಂತರ್‌ನಲ್ಲಿ ಸಿಜೆಪಿ ಪ್ರತಿಭಟನೆಯ ಸಂದರ್ಭದಲ್ಲಿ ನಡೆದ ಲಾಠಿಚಾರ್ಜ್ ಕುರಿತು ಪಟನಾದಿಂದ ಬಂದಿದ್ದ ಹಲವು ವಿದ್ಯಾರ್ಥಿಗಳು ರಾಹುಲ್ ಗಾಂಧಿ ಅವರ ಗಮನಕ್ಕೆ ತಂದರು. ಅದಕ್ಕೆ ಸ್ಪಂದಿಸಿದ ರಾಹುಲ್ ಗಾಂಧಿ, ನಾವು ಯಾವುದೇ ಕಾರಣಕ್ಕೂ ದ್ವೇಷ ಮತ್ತು ಹಿಂಸಾಚಾರದ ಹಾದಿಯಲ್ಲಿ ಸಾಗಬಾರದು. ಪ್ರೀತಿಯಿಂದಲೇ ವ್ಯವಸ್ಥೆಯನ್ನು ತಿದ್ದಿ, ಹಳೆಯ ಕೆಟ್ಟ ವ್ಯವಸ್ಥೆಗೆ ಅಂತಿಮ ವಿದಾಯ ಹೇಳಬೇಕು ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು(ಏಜೆನ್ಸೀಸ್​).