ದೇಶ

ಪಂಜಾಬ್ ಚುನಾವಣೆ: ಆಪ್ ತೊರೆದು ಬಂದ ರಾಘವ್ ಚಡ್ಡಾ, ಹರ್ಭಜನ್ ಸಿಂಗ್ ಹೆಗಲಿಗೆ ಮಹತ್ವದ ಹೊಣೆ! | Raghav Chadha

ಚಂಡೀಗಢ: ಮುಂಬರುವ 2027ರ ಪಂಜಾಬ್ ವಿಧಾನಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಭಾರತೀಯ ಜನತಾ ಪಕ್ಷದ ರಾಜ್ಯ ಘಟಕವು ಭರ್ಜರಿ ಸಿದ್ಧತೆಗಳನ್ನು ನಡೆಸಿದ್ದು, ಇದರ ಭಾಗವಾಗಿ ಪಂಜಾಬ್ ಬಿಜೆಪಿ ಅಧ್ಯಕ್ಷ ಕೇವಲ್ ಸಿಂಗ್ ಧಿಲ್ಲೋನ್ ಅವರು ಭಾನುವಾರ ಮಹತ್ವದ ಎರಡು ರಾಜ್ಯ ಮಟ್ಟದ ಸಮಿತಿಗಳನ್ನು ರಚಿಸಿದ್ದಾರೆ. ಪಕ್ಷದ ಪ್ರಣಾಳಿಕೆ ಸಮಿತಿ ಮತ್ತು ಚಾರ್ಜ್‌ಶೀಟ್ ಸಮಿತಿಯನ್ನು ಘೋಷಿಸಿದ್ದಾರೆ. ‘

ಇತ್ತೀಚೆಗಷ್ಟೇ ಆಮ್ ಆದ್ಮಿ ಪಕ್ಷವನ್ನು ತೊರೆದು ಬಿಜೆಪಿಗೆ ಸೇರ್ಪಡೆಗೊಂಡಿದ್ದ ರಾಘವ್ ಚಡ್ಡಾ ಸೇರಿದಂತೆ ಹಲವು ಪ್ರಮುಖ ನಾಯಕರಿಗೆ ಈ ಸಮಿತಿಗಳಲ್ಲಿ ಪ್ರಮುಖ ಸ್ಥಾನಗಳನ್ನು ಕಲ್ಪಿಸಲಾಗಿದೆ.

ಸಮಿತಿಗಳ ಪ್ರಮುಖ ಮುಖಗಳು ಮತ್ತು ಜವಾಬ್ದಾರಿಗಳು

ಪಕ್ಷದ ಪ್ರಕಟಣೆಯ ಪ್ರಕಾರ, ಹಿರಿಯ ಬಿಜೆಪಿ ನಾಯಕ ಹಾಗೂ ಮಾಜಿ ರಾಜ್ಯ ಅಧ್ಯಕ್ಷ ಅವಿನಾಶ್ ರಾಯ್ ಖನ್ನಾ ಅವರನ್ನು ಪ್ರಣಾಳಿಕೆ ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಈ ಸಮಿತಿಯು ಒಟ್ಟು 13 ಸದಸ್ಯರನ್ನು ಹೊಂದಿದ್ದು, ಆಪ್ ತೊರೆದು ಬಂದಿರುವ ರಾಘವ್ ಚಡ್ಡಾ, ಕೈಗಾರಿಕೋದ್ಯಮಿ ರಾಜಿಂದರ್ ಗುಪ್ತಾ ಹಾಗೂ ಮಾಜಿ ಕ್ರಿಕೆಟಿಗೆ ಹರ್ಭಜನ್ ಸಿಂಗ್ ಸೇರಿದಂತೆ ಮನಪ್ರೀತ್ ಸಿಂಗ್ ಬಾದಲ್, ಅಶ್ವನಿ ಶರ್ಮಾ, ಮನೋರಂಜನ್ ಕಲಿಯಾ ಮೊದಲಾದವರು ಸ್ಥಾನ ಪಡೆದಿದ್ದಾರೆ.

ಇನ್ನೊಂದೆಡೆ, ಆಡಳಿತರೂಢ ಆಪ್ ಸರ್ಕಾರದ ವಿರುದ್ಧದ ವೈಫಲ್ಯಗಳನ್ನು ಜನರಿಗೆ ತಲುಪಿಸಲು ಮತ್ತು ದಾಖಲೆಗಳನ್ನು ಸಿದ್ಧಪಡಿಸಲು ರಚಿಸಲಾಗಿರುವ ಚಾರ್ಜ್‌ಶೀಟ್ ಸಮಿತಿಯ ಅಧ್ಯಕ್ಷರಾಗಿ ಮಾಜಿ ರಾಜ್ಯ ಮುಖ್ಯಸ್ಥ ಸುನೀಲ್ ಜಾಖರ್ ಅವರನ್ನು ನೇಮಿಸಲಾಗಿದೆ. 14 ಸದಸ್ಯರನ್ನು ಒಳಗೊಂಡಿರುವ ಈ ಸಮಿತಿಯಲ್ಲಿ ಆಪ್‌ನಿಂದ ಬಂದಿರುವ ಸಂದೀಪ್ ಪಾಠಕ್, ಅಶೋಕ್ ಮಿತ್ತಲ್, ವಿಕ್ರಮ್‌ಜಿತ್ ಸಿಂಗ್ ಸಹ್ನಿ, ಸುಶೀಲ್ ರಿಂಕು ಜೊತೆಗೆ ಇಕ್ಬಾಲ್ ಸಿಂಗ್ ಲಾಲ್‌ಪುರ, ವಿಜಯ್ ಸಮಪ್ಲಾ, ಪ್ರನೀತ್ ಕೌರ್, ರವ್‌ನೀತ್ ಸಿಂಗ್ ಬಿಟ್ಟು ಮುಂತಾದ ಪ್ರಮುಖ ನಾಯಕರಿಗೆ ಜವಾಬ್ದಾರಿ ನೀಡಲಾಗಿದೆ.

ಆಪ್‌ನಿಂದ ವಲಸೆ ಬಂದ ನಾಯಕರಿಗೆ ಮನ್ನಣೆ!

ಕಳೆದ ಏಪ್ರಿಲ್‌ನಲ್ಲಿ ಆಮ್ ಆದ್ಮಿ ಪಕ್ಷದ ರಾಜ್ಯಸಭಾ ಸಂಸದರ ಬಂಡಾಯದ ಭಾಗವಾಗಿ ರಾಘವ್ ಚಡ್ಡಾ ಸೇರಿದಂತೆ ಏಳು ನಾಯಕರು ಎನ್‌ಡಿಎ ಪಾಳಯ ಸೇರಿದ್ದರು. ಪಕ್ಷಾಂತಕ ಕಾನೂನಿನ ಅಡಿಯಲ್ಲಿ ವಿಲೀನಗೊಂಡ ಈ ನಾಯಕರಿಗೆ ಈಗ ತಳಮಟ್ಟದಲ್ಲಿ ಪಕ್ಷವನ್ನು ಸಂಘಟಿಸುವ ಪ್ರಮುಖ ಜವಾಬ್ದಾರಿಗಳನ್ನು ವಹಿಸಲಾಗಿದೆ. ಹರಿಯಾಣ ಮತ್ತು ಪಂಜಾಬ್ ರಾಜಕಾರಣದಲ್ಲಿ ಈ ಬೆಳವಣಿಗೆಯು ತೀವ್ರ ಕುತೂಹಲ ಮೂಡಿಸಿದ್ದು, ಬಿಜೆಪಿಯು ವಿವಿಧ ಪಕ್ಷಗಳಿಂದ ಬಂದ ಹಿರಿಯ ಹಾಗೂ ಪ್ರಭಾವಿ ನಾಯಕರನ್ನು ಒಗ್ಗೂಡಿಸಿ ಚುನಾವಣಾ ರಣತಂತ್ರ ರೂಪಿಸುತ್ತಿದೆ.

ಪಂಜಾಬ್ ಬಿಜೆಪಿ ಅಧ್ಯಕ್ಷ ಕೇವಲ್ ಸಿಂಗ್ ಧಿಲ್ಲೋನ್ ಅವರು ಮುಂಬರುವ ದಿನಗಳಲ್ಲಿ ಮತ್ತಷ್ಟು ಸಮಿತಿಗಳನ್ನು ರಚಿಸುವುದಾಗಿ ತಿಳಿಸಿದ್ದು, ಪಕ್ಷವು ಎಲ್ಲ 117 ಕ್ಷೇತ್ರಗಳಲ್ಲೂ ತನ್ನ ನೆಲೆ ಗಟ್ಟಿಗೊಳಿಸಲು ಮತ್ತು ಸಮಾನ ಮನಸ್ಕ ಪಕ್ಷಗಳೊಂದಿಗೆ ಮೈತ್ರಿ ಕುರಿತ ಚರ್ಚೆಗಳ ನಡುವೆಯೂ ಚುನಾವಣಾ ಸಿದ್ಧತೆಗಳನ್ನು ಚುರುಕುಗೊಳಿಸಿದೆ(ಏಜೆನ್ಸೀಸ್​).